ಸಿಎಂ ಬೊಮ್ಮಾಯಿ- ದೇವೇಗೌಡರ ಭೇಟಿ ಹಳೆ‌ ಒಡನಾಟವೋ..ಹೊಸ ರಾಜಕೀಯ ಲೆಕ್ಕಾಚಾರವೋ..?

CM Basavaraj Bommai meets HD Devegowda:: ದೇವೇಗೌಡರು ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದ ಅಭಯ ಸಾಕಷ್ಟು ಚರ್ಚೆಯಾಗುತ್ತಿದೆ. ಬಸವರಾಜ ಬೊಮ್ಮಾಯಿ ಇನ್ನುಳಿದ ಅವಧಿ ಪೂರ್ಣಗೊಳಿಸುತ್ತಾರೆ.‌ ಸಂಕಷ್ಟ ಎದುರಾದರೆ ನಾವು ಬೆಂಬಲ ನೀಡುತ್ತೇವೆ ಎಂದು ದೇವೇಗೌಡರು ದಾಳ ಉರುಳಿಸಿಯೇ ಬಿಟ್ಟಿದ್ದಾರೆ.

ದೇವೇಗೌಡರನ್ನು ಭೇಟಿಯಾದ ಸಿಎಂ ಬೊಮ್ಮಾಯಿ

ದೇವೇಗೌಡರನ್ನು ಭೇಟಿಯಾದ ಸಿಎಂ ಬೊಮ್ಮಾಯಿ

  • Share this:
ಬೆಂಗಳೂರು: ರಾಜ್ಯ ರಾಜಕೀಯದ ಭೀಷ್ಮ ಎಂದೇ ಕರೆಯಲ್ಪಡುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಕರ್ನಾಟಕದಲ್ಲಿ ಸರಿಸಾಟಿಯಾಗಬಲ್ಲ ನೈಪುಣ್ಯತೆ ಇರುವ ಇನ್ನೊಬ್ಬ ರಾಜಕಾರಣಿ ಇಲ್ಲ ಎಂದೇ ಈಗ ಪ್ರಸ್ತುತ. ಅವರು ಪ್ರಯೋಗಿಸುವ ಒಂದೊಂದು ದಾಳವೂ ತನ್ನ ರಾಜಕೀಯ ಫಲಶೃತಿ ತಂದು ಕೊಡುತ್ತದೆ ಎಂದೇ ಅನೇಕರು ಭಾವಿಸಿದ್ದಾರೆ. ಅದು ಅನೇಕ ಬಾರಿ ಸತ್ಯವೂ ಆಗಿದೆ. ಇಂದು ಕೂಡ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೆಚ್‌.ಡಿ.ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಇಬ್ಬರ ಕುಟುಂಬದ ಹಲವು ದಶಕದ ಒಡನಾಟ ಇರುವುದರಿಂದ ಇದೊಂದು ಸೌಜನ್ಯಯುತ ಭೇಟಿಯೂ‌ ಆಗಿದೆ. ಹಳೆಯ ಒಡನಾಟದ ಭೇಟಿ ರಾಜಕೀಯ ಪಡಸಾಲೆಯಲ್ಲಿ ಅನೇಕ ಚರ್ಚೆಗಳನ್ನಂತೂ ಹುಟ್ಟುಹಾಕಿದೆ.

ಬಸವರಾಜ ಬೊಮ್ಮಾಯಿಯವರ ತಂದೆ ಎಸ್.ಆರ್.ಬೊಮ್ಮಾಯಿವರ ಜೊತೆ ಹೆಚ್.ಡಿ.ದೇವೇಗೌಡರು ಒಡನಾಡಿಗಳು. ನಿಕಟ ಸಂಬಂಧ, ಜನತಾ ಪರಿವಾರದ ನಂಟು ಇವತ್ತಿನ ಸೌಹಾರ್ದಯುತ ಭೇಟಿಗೆ ಕಾರಣ. ಆದರೆ ಭೇಟಿಯಲ್ಲಿ ದೇವೇಗೌಡರು ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದ ಅಭಯ ಸಾಕಷ್ಟು ಚರ್ಚೆಯಾಗುತ್ತಿದೆ. ಬಸವರಾಜ ಬೊಮ್ಮಾಯಿ ಇನ್ನುಳಿದ ಅವಧಿ ಪೂರ್ಣಗೊಳಿಸುತ್ತಾರೆ.‌ ಸಂಕಷ್ಟ ಎದುರಾದರೆ ನಾವು ಬೆಂಬಲ ನೀಡುತ್ತೇವೆ ಎಂದು ದೇವೇಗೌಡರು ದಾಳ ಉರುಳಿಸಿಯೇ ಬಿಟ್ಟಿದ್ದಾರೆ.

ಈ ಹಿಂದೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೂಡ ಯಡಿಯೂರಪ್ಪ ಸರ್ಕಾರ ಕೆಡವಲು ಬಿಡುವುದಿಲ್ಲ ಎಂದು ಹೇಳಿದ್ದನ್ನು ನಾವಿಲ್ಲಿ ಸ್ಮರಿಸಬೇಕು. ಅಂದು ಕುಮಾರಸ್ವಾಮಿ ಅವರು ಯಡಿಯೂರಪ್ಪ ಮೇಲೆ ತೋರಿಸಿದ್ದ ಮಮಕಾರ, ಇಂದು ಬೊಮ್ಮಾಯಿ ಮೇಲೆ ಖುದ್ದು ದೇವೇಗೌಡರೇ ತೋರಿಸಿದ್ದಾರೆ. ಒಂದು ಕಡೆ ಕೋವಿಡ್, ಇನ್ನೊಂದೆಡೆ ಪ್ರವಾಹ. ಇಂತಹ ಸಂದರ್ಭದಲ್ಲಿ ಸರ್ಕಾರ ಅಸ್ಥಿರತೆ ಕಂಡು, ರಾಜಕೀಯ ಪಲ್ಲಟಗಳಾದರೆ ಪರಿಸ್ಥಿತಿ ಇನ್ನಷ್ಟು ಅಧೋಗತಿಗೆ ಹೋಗಬಹುದೆಂಬ ಕಳಕಳಿಯೂ ಈ ಹೇಳಿಕೆಗೆ ಕಾರಣವಾಗಿರಲೂಬಹುದು. ಇದನ್ನು ಹೊರತುಪಡಿಸಿದ ಹೊಸ ಲೆಕ್ಕಾಚಾರದ ಭಾಗವೂ ಇದರಲ್ಲಿ ಅಡಗಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಇದನ್ನೂ ಓದಿ: ನೀನು ಸಿಎಂ ಆಗಿದ್ದರೆ ನಮ್ಮಿಂದ ಯಾವ ತೊಂದರೆನೂ ಇಲ್ಲ: ಬೊಮ್ಮಾಯಿಗೆ ದೇವೇಗೌಡರ ಅಭಯ!

ದೇವೇಗೌಡರು ಬೆನ್ನಿಗಿದ್ದರೆ ಸೇಫ್ 
ಆಪರೇಷನ್ ಕಮಲದ ಮೂಲಕ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಯಡಿಯೂರಪ್ಪ ಅವರೂ ಕೂಡ ಇದೇ ಮಾರ್ಗವನ್ನು ಅನುಸರಿಸಿದ್ದರು. ಅದೇ ಹಾದಿ ತುಳಿದಿರುವ ಬೊಮ್ಮಾಯಿ, ಮುಂದೆ ಭುಗಿಲೇಳಬಹುದಾದ ಭಿನ್ನಮತ ಗಮನದಲ್ಲಿಟ್ಟುಕೊಂಡು ದೇವೇಗೌಡರ ಆಶೀರ್ವಾದ ಪಡೆದಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಎಲ್ಲರ ಅರಿವಿಗೆ ಇರುವ ಹಾಗೆ ಇದು ಪೂರ್ಣ ನಿಚ್ಚಳದ ಬಹುಮತದ ಸರ್ಕಾರವಾಗಿರಲಿಲ್ಲ. ಕಿಚಡಿ ಸರ್ಕಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಬಂದವರು ಇದ್ದಾರೆ. ಮೂಲ ವಲಸಿಗ ಭಿನ್ನ ಸಹಜವಾಗಿ ಇದೆ. ವಲಸಿಗರಿಗೆ ಸಿಕ್ಕ ಪ್ರಾತಿನಿಧ್ಯ ಮೂಲ ಬಿಜೆಪಿಗರಿಗೆ ಸಿಕ್ಕಿಲ್ಲ ಎಂಬ ಅಸಮಧಾನ ಆಗಾಗ್ಗೆ ಹೊಗೆಯಾಡುತ್ತಲೇ ಇರುತ್ತದೆ.

ಸಂಪುಟ ಸಂಕಟದ ಮಧ್ಯೆ 
ಬೊಮ್ಮಾಯಿಯವರು ಅತ್ಯಂತ ಅದೃಷ್ಟದ ಸಿಎಂ ಎಂದು ಕರೆಸಿಕೊಳ್ಳುತ್ತಿರುವುದೇನೋ ನಿಜ. ಆದರೆ ಅಧಿಕಾರ ಎಂಬುದು ಸೆರಗಲ್ಲಿ ಕಟ್ಟಿಕೊಂಡಿರುವ ಕೆಂಡ ಎಂದು ತಡವಾಗಿ ಅರಿವಾಗುತ್ತದೆ. ಬೊಮ್ಮಾಯಿ ಮುಂದೆ ಹಲವು ಸವಾಲುಗಳು ಧುತ್ತೆಂದು ಮುಂದೆ ನಿಂತಿವೆ. ಹಿರಿಯ - ಕಿರಿಯ, ಜಾತಿ, ಪ್ರದೇಶವಾರು ಪ್ರಾತಿನಿಧ್ಯ ನೀಡಲೇಬೇಕು. ವಿಶೇಷ ಎಂಬಂತೆ ವಲಸಿಗ 10 ಶಾಸಕರಿಗೆ ಮುಂದುವರೆಸಿ, ಇನ್ನಷ್ಟು ವಲಸಿಗರಿಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಇದೆಲ್ಲದರ ಮಧ್ಯೆ ಹೈಕಮಾಂಡ್ ಪಟ್ಟಿಯನ್ನೇ ಯಥಾವತ್ತಾಗಿ ಅಂಗೀಕರಿಸಿ ಸಂಪುಟ ರಚನೆ ಮಾಡಬೇಕಾದ ಅನಿವಾರ್ಯತೆ ಇದೆ.

ಯಡಿಯೂರಪ್ಪ ಪಾತ್ರ 
ಮಂತ್ರಿ ಮಂಡಲ ರಚನೆ ಮಾಡುವ ಪರಮಾಧಿಕಾರ ಮುಖ್ಯಮಂತ್ರಿಗಳದ್ದು. ಆದರೆ ಈಗಾಗಲೇ ಸಿಎಂ ರಬ್ಬರ್ ಸ್ಟ್ಯಾಂಪ್ ಸಿಎಂ ಎಂದು ಚರ್ಚೆ ಆರಂಭವಾಗಿದೆ. ಪ್ರಮಾಣ ವಚನ ಸ್ವೀಕರಿಸಿ ರಾಜಭವನದಿಂದ ಬಂದ ಬಳಿಕ ಮಾತನಾಡಿದ್ದ ಸಿಎಂ, ಯಡಿಯೂರಪ್ಪ ಅವರೇ ನನ್ನ ಮೊದಲ ಆದ್ಯತೆ ಎಂದು ಹೇಳಿದ್ದಾರೆ. ಹೀಗಾಗಿ ರಚನೆಯಾಗಲಿರುವ ಸಂಪುಟದಲ್ಲಿ ಯಡಿಯೂರಪ್ಪ ಅವರು ಸೂಚಿಸಿದವರು ಮಂತ್ರಿಯಾಗಲೇಬೇಕು. ಹೀಗಾಗಿ ಸಂಪುಟ ಸರ್ಕಸ್ ಮೊದಲೇ ದೇವೇಗೌಡರ ಭೇಟಿಯಾಗಿ ಎಲ್ಲದಕ್ಕೂ ಪರಿಹಾರ ಇದೆ, ಭಿನ್ನಮತ, ಬಂಡಾಯಕ್ಕೂ ಔಷಧಿ ಇದೆ ಎಂದು ಪದ್ಮನಾಭನಗರ ನಿವಾಸದಿಂದ ಸ್ಪಷ್ಟ ಸಂದೇಶ ರವಾನಿಸುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ.
Published by:Kavya V
First published: