ಬೆಂಗಳೂರು(ಅ.03): ಐಟಿ ಹಬ್(IT Hub) ಅಂತಲೇ ಕರೆಸಿಕೊಳ್ಳುವ ಸಿಲಿಕಾನ್ ಸಿಟಿಗೆ ಯಾವ ಪರಿಸ್ಥಿತಿ ಬಂದಿದೆ? ಬರೀ ಡ್ರಗ್ಸ್, ಗಾಂಜಾ ಘಾಟಿಗೆ ಬೆಂಗಳೂರು ಸದ್ದು ಮಾಡುತ್ತಿದೆ.ಇತ್ತೀಚೆಗೆ ಈಗಲ್ ಟನ್ ರೆಸಾರ್ಟ್ ಬಳಿಯ ವಿಲ್ಲಾವೊಂದರ ಟೆರೆಸ್ ಮೇಲೆ ಹೈಬ್ರಿಡ್ ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬೇಟೆಯಾಡಿದರು. ಹೀಗೆ ಪ್ರತಿದಿನ ಈ ಮಾದಕ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡುತ್ತಲೇ ಬಂದಿದ್ದಾರೆ. ಇದರ ಮಧ್ಯೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(Narcotics Control Bureau-NCB) ಅಧಿಕಾರಿಗಳು ಬೆಂಗಳೂರಿನಲ್ಲಿ(Bengaluru) ಭರ್ಜರಿ ಕಾರ್ಯಾಚರಣೆ ನಡೆಸಿದೆ. ಹೈ ಗ್ರೇಡ್(high grade) ಗಾಂಜಾವನ್ನು ಡೋರ್ ಟು ಡೋರ್ ಡೆಲಿವರಿ ಮಾಡ್ತಿದ್ದ, 7 ಮಂದಿಯನ್ನು ಮಾಲ್ ಸಮೇತ ಹಿಡಿದಿದ್ದಾರೆ. ಸ್ವಿಗ್ಗಿ ಡೆಲಿವರಿ ಬಾಯ್ಸ್(Swiggy Delivery Boys) ಮೂಲಕ ಮಾದಕ ವಸ್ತುಗಳನ್ನು ಮನೆಗೆ ತಲುಪಿಸುತ್ತಿದ್ದರಂತೆ.
ಈ ಕೃತ್ಯದ ಜಾಡು ಹಿಡಿದು ಹೊರಟಿದ್ದ ಎನ್ ಸಿಬಿ ಈ ಹಿಂದೆಯಿಂದಲೂ ಬೆಂಗಳೂರಿನ ಮೇಲೆ ಕಣ್ಣಿಟ್ಟಿತ್ತು. ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದರ ಮಾಹಿತಿ ಕಲೆ ಹಾಕುತ್ತಿತ್ತು. ಸೆಪ್ಟೆಂಬರ್ 30ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಇಬ್ಬರು ನಿವಾಸಿಗಳ ಮನೆ ಮೇಲೆ ರೇಡ್ ಮಾಡಿದ್ದಾರೆ. ಇದೇ ವೇಳೆ ಇಬ್ಬರು ಆರೋಪಿಗಳು ಕೊರಿಯರ್ ವಾಹನದಿಂದ 8 ಬಾಕ್ಸ್ ಗಳನ್ನು ಅನುಮಾನಸ್ಪದವಾಗಿ ಮಾರುತಿ ಕಾರ್ ಗೆ ಶಿಫ್ಟ್ ಮಾಡುತ್ತಿದ್ದರಂತೆ. ಕೂಡಲೇ ಸ್ಥಳಕ್ಕೆ ತೆರಳಿದ ಎಂಸಿಬಿ ಅಧಿಕಾರಿಗಳು ಆ ಬಾಕ್ಸ್ ಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಹೈ ಗ್ರೇಡ್ ಗಾಂಜಾ ಪ್ಯಾಕೆಟ್ ಗಳು ಪತ್ತೆಯಾಗಿದೆ. ಇದಾದ ಬಳಿಕ ಒಟ್ಟು 137 ಕೆಜಿ ಹೈ ಗ್ರೇಡ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಜತೆಗೆ 4.81 ಲಕ್ಷ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಹಣವೆಲ್ಲ ಮಾದಕ ವಸ್ತುಗಳನ್ನು ಮನೆ ಮನೆಗೆ ತಲುಪಿಸಿ ಗಳಿಸಿದ್ದು ಎಂದು ಹೇಳಲಾಗಿದೆ. ಪಾರ್ಸೆಲ್ ಡೆಲಿವರಿ ಮಾಡಲು ರೆಡಿಯಾಗಿದ್ದ, ಓರ್ವ ಡೆಲಿವರಿ ಬಾಯ್ ನನ್ನು ಕೂಡ ಬಂಧಿಸಲಾಗಿದೆ. ಇದೇ ತಂಡದ ಮತ್ತೋರ್ವನನ್ನ ವಶಕ್ಕೆ ಪಡೆದ ಅಧಿಕಾರಿಗಳು, ಆತನಿಂದ 3 ಕೆಜಿ ಗಾಂಜಾ ಹಾಗೂ 39000 ಹಣವನ್ನು ವಶಕ್ಕೆ ಪಡೆದಿದ್ದಾರೆ. ಈ ಕೇಸ್ ಹಿಂದೆ ಬಿದ್ದಿದ್ದ ಅಧಿಕಾರಿಗಳು ಅಕ್ಟೋಬರ್ 1ರಂದು ಹೈದರಾಬಾದ್ ಬಳಿ ನಾಲ್ಕು ಜನರನ್ನು ಬಂಧಿಸಲು ಮುಂದಾಗಿದ್ದರು. ಇದೇ ವೇಳೆ ಎಸ್ಕೇಪ್ ಆಗಲು ಪ್ರಯತ್ನಿಸಿದ್ದ ಆರೋಪಿಗಳನ್ನು, ಚೇಸ್ ಮಾಡಿ ಹಿಡಿದಿದ್ದರು.
ಡ್ರಗ್ ಪೆಡ್ಲರ್ ಗಳು ನೇರವಾಗಿ ಹೋಗಿ ಗಾಂಜಾವನ್ನು ಖರೀದಿಸುತ್ತಿರಲಿಲ್ಲ. ಕೊರಿಯರ್ ಮೂಲಕ ತರಿಸಿಕೊಳ್ಳುತ್ತಿದ್ದರು. ತಮ್ಮ ಪರಿಚಯಸ್ಥರ ಅಂಗಡಿಗಳ ವಿಳಾಸವನ್ನು ನೀಡಿ, ಅಲ್ಲಿಗೆ ಪಾರ್ಸೆಲ್ ಗಳನ್ನು ತರಿಸಿಕೊಳ್ಳುತ್ತಿದ್ದರು. ನಂತರ ತಮ್ಮ ನೆಟ್ ವರ್ಕ್ ಗಳ ಮೂಲಕ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಸ್ವಿಗ್ಗಿ ಡೆಲಿವರಿ ಬಾಯ್ ಗಳನ್ನು ಬಳಸಿಕೊಂಡು ಡೋರ್ ಟು ಡೋರ್ ಸರ್ವಿಸ್ ನೀಡುತ್ತಿದ್ದರು.
ಈ ರೀತಿಯ ಕೆಲಸಗಳನ್ನು ಲಾಕ್ ಡೌನ್ ಆಗಿದ್ದಾಗಿನಿಂದ ಆರೋಪಿಗಳು ಶುರು ಮಾಡಿಕೊಂಡಿದ್ದರು. ಅಗತ್ಯ ಸೇವೆಗಳ ಅಡಿಯಲ್ಲಿ ಫುಡ್ ಡೆಲಿವರಿಯನ್ನು ಸೇರಿಸಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಡ್ರಗ್ ಪೆಡ್ಲರ್ ಗಳು ಸ್ವಿಗ್ಗಿ ಡೆಲಿವರಿ ಬಾಯ್ಸ್ ಗಳ ಮೂಲಕ ಮಾದಕ ವಸ್ತುವನ್ನು ಮನೆ ಮನೆಗೆ ತಲುಪಿಸುತ್ತಿದ್ದರು. ಇಂಥವರಿಂದಲೇ ರಾಜಧಾನಿಯಲ್ಲಿ ಮಾದಕ ಘಾಟು ಜೋರಾಗಿದೆ.ಇಂತಹ ಮತ್ತಷ್ಟು ಕ್ರಿಮಿಗಳನ್ನು ಹಿಡಿದು ಜೈಲಿಗಟ್ಟಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ