ಬೆಂಗಳೂರು: ಕೊರೋನಾ ಸೋಂಕು (Coronavirus) ವ್ಯಾಪಕವಾಗಿ ಹರಡುತ್ತಿದ್ದ ಕಾರಣ ಮೆಟ್ರೋದಲ್ಲಿ ಸಾರ್ವಜನಿಕರ ಪ್ರಯಾಣ ವೇಳೆಯನ್ನು ಸೀಮಿತಗೊಳಿಸಲಾಗಿತ್ತು. ಆದರೆ, ಇದೀಗ ಕೊರೋನಾ ಇಳಿಮುಖವಾದ ಹಿನ್ನೆಲೆ ಬೆಂಗಳೂರಿಗರಿಗೆ ನಮ್ಮ ಮೆಟ್ರೋ (Namma Metro) ಗುಡ್ ನ್ಯೂಸ್ ಕೊಟ್ಟಿದೆ. ಸಾರ್ವಜನಿಕ ಸೇವೆ ಸಮಯ ವಿಸ್ತರಿಸಿ ಮೆಟ್ರೋ ಆದೇಶ ಹೊರಡಿಸಿದೆ. ಅದರಂತೆ ನಾಳೆಯಿಂದ ಈ ಹಿಂದೆ ಇದ್ದ ಸಮಯದವರೆಗೆ ಮೆಟ್ರೋದಲ್ಲಿ ಸಂಚರಿಸಬಹುದಾಗಿದೆ.
ಕೊರೋನಾ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರ ಅವಧಿಯನ್ನು ಬೆಳಗ್ಗೆ 7 ರಿಂದ ರಾತ್ರಿ 8ರ ವರೆಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಈಗ ಸೋಂಕು ಇಳಿಕೆಯಾದ ಹಿನ್ನೆಲೆ ಬೆಳಗ್ಗೆ 6 ರಿಂದ ರಾತ್ರಿ 9.30ಕ್ಕೆ ಸಮಯ ವಿಸ್ತರಣೆ ಮಾಡಲಾಗಿದೆ. ಬೆಳಗ್ಗೆ ಒಂದು ತಾಸು ಹೆಚ್ಚಳ ಹಾಗೂ ರಾತ್ರಿ ಎರಡು ತಾಸು ತಡವಾಗಿ ನಮ್ಮ ಮೆಟ್ರೋ ಸೇವೆ ಲಭ್ಯವಾಗಲಿದೆ. ಎಲ್ಲಾ ನಮ್ಮ ಮೆಟ್ರೋ ಟರ್ಮಿನಲ್ ನಿಂದ ಕೊನೆ ರೈಲು 9:30ಕ್ಕೆ ಇರಲಿದೆ. ನಾಳೆಯಿಂದಲೇ ಈ ಸಮಯದವರೆಗೆ ಮೆಟ್ರೋ ರೈಲು ಈ ಸೇವೆ ಒದಗಿಸಲಿವೆ.
ಕೊರೋನಾಗು ಮೊದಲು ಬೆಳಗ್ಗೆ 6 ರಿಂದ ರಾತ್ರಿ 11ರ ವರೆಗೆ ನಮ್ಮ ಮೆಟ್ರೋ ಸೇವೆ ಒದಗಿಸುತ್ತಿತ್ತು ಎಂದು ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾಹಿತಿ ನೀಡಿದ್ದಾರೆ.
ಕೆಂಗೇರಿವರೆಗೆ ಮೆಟ್ರೋ ರೈಲು
ಕಳೆದ ಆಗಸ್ಟ್ 29ರಂದು ನಾಯಂಡನಹಳ್ಳಿಯಿಂದ ಕೆಂಗೇರಿವರೆಗಿನ ಮೆಟ್ರೋ ರೈಲು ಸಂಚಾರ ಉದ್ಘಾಟನೆ ಮಾಡುವ ಮೂಲಕ ಈ ಮಾರ್ಗದಲ್ಲಿ ಓಡಾಡುವ ಸಾವಿರಾರು ಜನರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿವರೆಗಿನ ಒಟ್ಟು 7.5 ಕಿ.ಮಿ. ಉದ್ದದ 6 ನಿಲ್ದಾಣಗಳಿರುವ ಮೆಟ್ರೋ ಸಂಚಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಸಿರು ನಿಶಾನೆ ತೋರಿಸುವ ಮೂಲಕ ಮೆಟ್ರೋ ಮಾರ್ಗ ಉದ್ಘಾಟನೆ ಮಾಡಿದ್ದರು.
2019 ರಲ್ಲೇ ಈ ಮಾರ್ಗದ ಉದ್ಘಾಟನೆಯಾಗಬೇಕಿತ್ತು. ಆದರೆ ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ 2 ವರ್ಷ ತಡವಾಗಿ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ. 1,560 ಕೋಟಿ ರೂ. ವೆಚ್ಚದಲ್ಲಿ ಈ ರೈಲು ಮಾರ್ಗ ನಿರ್ಮಾಣಗೊಂಡಿದ್ದು, ಭೂ ಸ್ವಾಧೀನಕ್ಕಾಗಿ 360 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಮಾರ್ಗದಲ್ಲಿ ಮೆಟ್ರೋ ಸೇವೆ ಆರಂಭದಿಂದ ದಿನಕ್ಕೆ 75 ಸಾವಿರ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ. ಇನ್ನು ನಮ್ಮ ಮೆಟ್ರೋ ಯೋಜನೆಯ ಹಂತ-2 ಅಡಿ ನಾಯಂಡಹಳ್ಳಿಯಿಂದ ಕೆಂಗೇರಿಯವರೆಗೆ ರೀಚ್ 2ರ ವಿಸ್ತರಣಾ ಕಾಮಗಾರಿ ಯೋಜನೆ ಇದಾಗಿದೆ.
ಇದು ನೇರಳೆ ಮಾರ್ಗವಾಗಿದ್ದು, ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನ ಭಾರತಿ, ಪಟ್ಟಣಗೆರೆ, ಮೈಲಸಂದ್ರ ಮತ್ತು ಕೆಂಗೇರಿ ಬಸ್ ನಿಲ್ದಾಣ ಸೇರಿದಂತೆ ಒಟ್ಟು ಆರು ಮೆಟ್ರೋ ನಿಲ್ದಾಣಗಳು ಈ ಮೆಟ್ರೊ ಅಡಿಯಲ್ಲಿ ಬರಲಿದೆ. ಅಲ್ಲದೇ ನೇರಳೆ ಮಾರ್ಗ ಬೈಯಪ್ಪನಹಳ್ಳಿ- ಕೆಂಗೇರಿವರೆಗೆ ಮೆಟ್ರೋ ಸಂಚಾರ ಇರಲಿದ್ದು, ಬೈಯಪ್ಪನ ಹಳ್ಳಿಯಿಂದ ಕೆಂಗೇರಿಗೆ ಪ್ರಯಾಣಿಸಲು 56 ರೂ. ದರ ನಿಗದಿ ಮಾಡಲಾಗಿದೆ. ಕೆಂಗೇರಿಯಿಂದ ಸಿಲ್ಕ್ ಇನ್ಸ್ಟಿಟ್ಯೂಟ್ವರೆಗೆ 60 ರೂಪಾಯಿ ದರ ನಿಗದಿಯಾಗಿದೆ. ಹಾಗೂ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಗೆ 45 ರೂಪಾಯಿ ಟಿಕೆಟ್ ದರ ನಿರ್ಧರಿಸಲಾಗಿದೆ.
ಇದನ್ನು ಓದಿ: Explained: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಜೆಡಿಎಸ್ ದ್ವಂದ್ವ ನಿಲುವು; ಎಚ್ಡಿಕೆ ಹೇಳಿಕೆ ಹಿಂದಿನ ಉದ್ದೇಶವೇನು?
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ