ಬೆಂಗಳೂರು (ಆ. 7): ಖಾತೆ ಹಂಚಿಕೆ ಬೆನ್ನಲ್ಲೇ ಸಚಿವರ ಅಸಮಾಧಾನ ಸ್ಪೋಟ ಗೊಂಡಿದೆ. ನಿರೀಕ್ಷಿತ ಖಾತೆ ಸಿಗದ ಹಿನ್ನಲೆ ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ಬಹಿರಂಗವಾಗಿ ಅಸಂತೃಪ್ತಿ ಹೊರಹಾಕಿದ್ದಾರೆ. ಭೂವಿಜ್ಞಾನ ಮತ್ತು ಪರಿಸರ, ಪ್ರವಾಸೋದ್ಯಮ ಖಾತೆ ನೀಡಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ಆನಂದ್ ಸಿಂಗ್ ಈ ಸಂಬಂಧ ಇನ್ನೆರಡು ದಿನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಜನಸೇವೆ ಮಾಡುವಂತಹ ಖಾತೆ ನಿರೀಕ್ಷೆಯಲ್ಲಿ ಇರುವುದಾಗಿ ತಿಳಿಸಿದ್ದ ಎಂಟಿಬಿ ನಾಗರಾಜು ಅವರಿಗೆ ಸಿಎಂ ಪೌರಾಡಳಿತ, ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಕೈಗಾರಿಕೆ ಇಲಾಖೆ ನೀಡಿದ್ದಾರೆ. ಆದರೆ, ಇದು ತಾವು ಬಯಸಿದ ಖಾತೆ ಅಲ್ಲ ಎಂದಿರುವ ಎಂಟಿಬಿ ನಾಗರಾಜ್, ಸಿಎಂ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ತಮ್ಮ ಖಾತೆ ಇನ್ನು ಮೂರು ದಿನದಲ್ಲಿ ಬದಲಾವಣೆ ಆಗದಿದ್ದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಕುರಿತು ಟ್ವೀಟರ್ನಲ್ಲಿ ಅಸಮಾಧಾನ ಹೊರ ಹಾಕಿರುವ ವಿಧಾನ ಪರಿಷತ್ ಸದಸ್ಯರಾಗಿರುವ ಎಂಟಿಬಿ ನಾಗರಾಜ್, ಈ ಹಿಂದಿನ ಮುಖ್ಯಮಂತ್ರಿಗಳು ಮತ್ತು ಈಗಿನ ಮುಖ್ಯಮಂತ್ರಿಗಳು ನನಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಖಾತೆ ಹಂಚಿಕೆಯಲ್ಲಿ ನನಗೆ ಅಸಮಾಧಾನವಿದೆ.ಮುಂದಿನ 2-3 ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವೆ ಎಂದು ಟ್ವೀಟ್ ಮೂಲಕ ಸಿಎಂಗೆ ಗಡುವು ನೀಡಿದ್ದಾರೆ.
ಈ ಹಿಂದಿನ ಮುಖ್ಯಮಂತ್ರಿಗಳು ಮತ್ತು ಈಗಿನ ಮುಖ್ಯಮಂತ್ರಿಗಳು ನನಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಖಾತೆ ಹOಚಿಕೆಯಲ್ಲಿ ನನಗೆ ಅಸಮಾಧಾನವಿದೆ. ಮುಂದಿನ 2-3 ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವೆ. @BSYBJP @BSBommai @BJP4Karnataka #MTB
— N.Nagaraj (MTB) (@MtbNagaraju) August 7, 2021
ಇದನ್ನು ಓದಿ: ಹೆಸರು ಬದಲಾವಣೆ ಮಾಡುವುದು ದ್ವೇಷದ ರಾಜಕಾರಣ; ಸಿಟಿ ರವಿ ವಿರುದ್ಧ ಸಿದ್ದರಾಮಯ್ಯ ಕಿಡಿ
ಸಚಿವ ಸ್ಥಾನ ಸಿಕ್ಕ ಬಳಿಕ ಮಾತನಾಡಿದ್ದ ಎಂಟಿಬಿ ನಾಗರಾಜ್ ಇಂಥದ್ದೇ ಖಾತೆ ಬೇಕು ಎಂಬ ನಿರೀಕ್ಷೆ ಇಲ್ಲ. ಆದರೆ ಅಬಕಾರಿ ಖಾತೆ ಬದಲಿ ಬಡವರ ಪರವಾಗಿ ಕೆಲಸ ಮಾಡುವ ಖಾತೆ ಬೇಕು, ಈ ಮೂಲಕ ಜನಪರ ಆಡಳಿತ ನೀಡಲು ಪ್ರಯತ್ನಿಸುವೆ ಎಂದಿದ್ದರು. ಆದರೆ, ಈಗ ಖಾತೆ ಹಂಚಿಕೆ ಬಳಿಕ ತಮಗೆ ಬಯಸಿದ ಖಾತೆ ಸಿಗಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಸರ್ಕಾರ ರಚನೆಯ ವೇಳೆ ವಲಸಿಗ ನಾಯರಾಗಿರುವ ಎಂಟಿಬಿ ನಾಗರಾಜ್ ಪಾತ್ರ ಕೂಡ ಮುಖ್ಯವಾಗಿರುವ ಹಿನ್ನಲೆ ಅವರ ಹಠಕ್ಕೆ ಸಿಎಂ ಮಣಿಯುವ ಸಾಧ್ಯತೆ ಇದೆ. ಈಗಾಗಲೇ ಅನೇಕರು ಖಾತೆ ಬಗ್ಗೆ ಕ್ಯಾತೆ ತೆಗೆದಿರುವ ಹಿನ್ನಲೆ ಇನ್ನೆರಡು ದಿನಗಳ ಬಳಿಕ ಮತ್ತೆ ಮರು ಖಾತೆ ಹಂಚಿಕೆ ನಡೆಯುವ ಸಾಧ್ಯತೆ ಕೂಡ ಇದೆ. ಇದೇ ಉದ್ದೇಶದಿಂದ ಸಿಎಂ ಹಲವು ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದು, ಈ ಬಗ್ಗೆ ಅಸಮಾಧಾನಿತ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈ ಗೊಳ್ಳಲಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ