ಬೆಂಗಳೂರು: ಮಹಮದ್ ಹ್ಯಾರೀಸ್ ನಲಪಾಡ್ (Mohammed Haris Nalapad) ಹೆಸರು ಗಲಾಟೆಯೊಂದರ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದೆ. ಪಂಚತಾರಾ ಹೋಟೆಲ್ನಲ್ಲಿ (Hotel) ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ (Congress) ಅಧ್ಯಕ್ಷ ಸಿದ್ದು ಹಳ್ಳೇಗೌಡ (Siddu Halleygowda) ಮೇಲೆ ರಾಜ್ಯ ಯುವ ಕಾಂಗ್ರೆಸ್ ನಾಯಕ ಮಹಮದ್ ನಲಪಾಡ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸುದ್ದಿ ಮಾಡುತ್ತಿದ್ದಂತೆ ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯಿಸಿದ ಮಹಮದ್ ನಲಪಾಡ್, ನಾನು ಸಿದ್ದು ಮೇಲೆ ಹಲ್ಲೆ ಮಾಡಿಲ್ಲ ಎಂದು ಆರೋಪಗಳನ್ನು ಅಲ್ಲಗಳೆದರು. ನನ್ನ ಬೆಂಬಲಿಗರು ಹಲ್ಲೆ ಮಾಡಿಲ್ಲ, ಯಾರೋ ಬೇಕು ಅಂತಲೇ ಷಡ್ಯಂತ್ರ ಮಾಡ್ತಿದ್ದಾರೆ. ನಾನು ಫೆಬ್ರವರಿ 1 ರಂದು ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಬೇಕು. ಸಿದ್ದುನೇ ನಾನೇನು ಆತನಿಗೆ ಮಾಡಿಲ್ಲ ಅಂತ ಹೇಳಿದ್ದಾನೆ. ಅವನೇ ಹೇಳಿದ ಮೇಲೆ ನನ್ನನ್ನು ಬಲಿಪಶು ಮಾಡುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ನಾನು ಒಳ್ಳೆಯವನಾಗೋಕೆ ಹೊರಟಿದ್ದೇನೆ
ನನ್ನ ಅಧ್ಯಕ್ಷ ಸ್ಥಾನ ಯಾರೂ ತಪ್ಪಿಸೋಕೆ ಆಗಲ್ಲ. ನಿನ್ನೆ ಯೂತ್ ಕಾಂಗ್ರೆಸ್ ಸ್ನೇಹಿತರ ಸಭೆ ಕರೆದಿದ್ದೆವು. ನಾನು ಆಸಭೆಗೆ ಹೋಗಿದ್ದೆ, ಆದರೆ ಯಾರ ಮೇಲೂ ಹಲ್ಲೆ ಮಾಡಿಲ್ಲ. ಸುಮ್ಮನೆ ನನ್ನ ತೇಜೋವಧೆಗೆ ಈ ಪ್ರಯತ್ನ ನಡೆದಿದೆ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಆರೋಪಿಸಿದರು. ನಾನು ಒಳ್ಳೆಯವನಾಗೋಕೆ ಹೊರಟಿದ್ದೇನೆ, ಆದರೆ ಪದೇ ಪದೇ ಈ ರೀತಿ ಆಗ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅವನ್ಯಾರೋ ಇದ್ದಾನಲ್ಲ ಕತ್ತಿ.. ಮಾಸ್ಕ್ ಹಾಕದವನು, ಮಂತ್ರಿ ಆಗೋಕೆ ಲಾಯಕ್ಕಾ..? Siddaramaiah ಕಿಡಿನುಡಿ
ಒಂದು ಬಾರಿ ತಪ್ಪು ಮಾಡಿದ್ದು ನಿಜ
ಪದೇ ಪದೇ ಇಂತಹ ಆರೋಪಗಳ ಬಗ್ಗೆ ಪಕ್ಷದ ನಾಯಕರ ಗಮನಕ್ಕೆ ತರುತ್ತೇನೆ. ಈ ಬಗ್ಗೆ ನನ್ನ ತಂದೆಯವರ ಜೊತೆಗೆ ಮಾತನಾಡಿಲ್ಲ. ಇಂತಹ ಸುಳ್ಳು ಆರೋಪಗಳಿಂದ ಕುಟುಂಬಸ್ಥರಿಗೆ ನೋವಾಗುತ್ತದೆ. ನಾನು ಹಿಂದೆ ಒಂದು ಬಾರಿ ತಪ್ಪು ಮಾಡಿದ್ದು ನಿಜ, ಆದರೆ ನಂತರ ಬರೀ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಪಕ್ಷದ ನಾಯಕರ ಗಮನಕ್ಕೆ ತರುತ್ತೇನೆ ಎಂದರು.
ಏನೂ ಆಗಿಲ್ಲ ಎಂದ ಖಂಡ್ರೆ
ಸಿದ್ದು ಬೆಂಬಲಿಗರ ಮೇಲೆ ನಲಪಾಡ್ ಹಲ್ಲೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಈಶ್ವರ್ ಖಂಡ್ರೆ, ಈ ವಿಚಾರವಾಗಿ ನಲಪಾಡ್ ಹಾಗೂ ಬಳ್ಳಾರಿ ಯುವ ಘಟಕ ಅಧ್ಯಕ್ಷರ ಜೊತೆ ನೇರವಾಗಿ ಮಾತಾಡಿದ್ದೇನೆ. ಇಂತಹ ಘಟನೆಯೇ ನಡೆದಿಲ್ಲ ಎಂದು ಹೇಳಿದ್ದಾರೆ. ಬಳ್ಳಾರಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಯಾವುದೇ ದೂರು ಕೊಟ್ಟಿಲ್ಲ. ಸ್ನೇಹಿತರು ಒಂದೆಡೆ ಕೂತು ಊಟ ಮಾಡ್ತಾರೆ, ಅದನ್ನೇ ದೊಡ್ಡದು ಮಾಡುವ ಅವಶ್ಯಕತೆಯಿಲ್ಲ ಎಂದು ಆರೋಪಗಳನ್ನು ಅಲ್ಲಗಳೆದರು.
ಗೃಹ ಸಚಿವರು ಮಾತು ಸತ್ಯವೇ?
ಹಲ್ಲೆಗೆ ಒಳಗಾದ ವ್ಯಕ್ತಿಯ ಹೇಳಿಕೆ, ದೂರು ಇಲ್ಲದೆ ಹಲ್ಲೆ ಆಗಿದೆ ಎಂದು ಹೇಗೆ ಹೇಳುತ್ತಿರಾ. ಹಲ್ಲೆ ಆಗಿಲ್ಲ ಅಂತ ಸ್ವತಃ ಸಿದ್ದು ಅವರೇ ನನಗೆ ಹೇಳಿದ್ದಾರೆ ಎಂದರು. ಗಲಾಟೆ ಆಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. ಗೃಹ ಮಂತ್ರಿಗಳು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಯಾವುದಾದರೂ ಗಲಾಟೆ ಆಗಿದೆ ಎಂದು ಖಚಿತ ಮಾಹಿತಿ ಇದ್ದರೇ ಕಾನೂನು ಬದ್ದವಾಗಿ ಪ್ರಕರಣ ದಾಖಲು ಮಾಡಿದ್ದಾರಾ. ಮಾಡದೇ ಈ ರೀತಿ ಮಾತಾಡುವುದು ಸೂಕ್ತವಲ್ಲ ಎಂದರು ಕಿಡಿಕಾರಿದರು.
ಇದನ್ನೂ ಓದಿ: Nalapad ಮೇಲೆ ಹತ್ಯೆ ಪ್ರಯತ್ನ ಆರೋಪ, ಅದೆಲ್ಲಾ ಸುಳ್ಳು, ಅಲ್ಲೇನೂ ನಡೆದೇ ಇಲ್ಲ ಎಂದ ಬಳ್ಳಾರಿ ಕಾಂಗ್ರೆಸ್ ಯುವ ಅಧ್ಯಕ್ಷ ಸಿದ್ದು
ಈ ಬಗ್ಗೆ ಸಿದ್ದು ಪ್ರತಿಕ್ರಿಯಿಸಿ, ನನ್ನಮೇಲೆ ಯಾರೂ ಹಲ್ಲೆ ಮಾಡಿಲ್ಲ. ಇದೆಲ್ಲ ಸತ್ಯಕ್ಕೂ ದೂರವಾದದ್ದು, ಅಂದು ನಾನು jw ಮ್ಯಾರೇಟ್ ಹೋಟೆಲ್ ಹೋಗಿದ್ದು ನಿಜ, ಅಲ್ಲಿ ಪೂರ್ವಭಾವಿ ಸಭೆ ಮುಗಿಸಿಕೊಂಡು ಹೊರಟೆ. ಆದರೆ ಆನಂತರ ನಲಪಾಡ್ ಕಡೆಯವರು ನನಗೆ ಬೆದರಿಕೆ ಯಾವುದೇ ಹಾಕಿಲ್ಲ. ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಫೋಟೋ ನನ್ನದಲ್ಲ. ನಾನು ಚೆನ್ನಾಗಿಯೇ ಇದ್ದೇನೆ. ಯಾಕೆ ಈ ರೀತಿ ಸುದ್ದಿ ಹಬ್ಬಿದೆಯೋ ಗೊತ್ತಿಲ್ಲ. ನಾನೇ ಸುದ್ದಿ ಹಬ್ಬಿಸಿರೋದೇ ಆಗಿದ್ದರೆ ನನ್ನ ಹೆಸರು, ಡಿಸಿಗ್ನೇಷನ್ ಸಹಿತ ಮೆಸೇಜ್ ಮಾಡಿ ಹರಿಬಿಡುತ್ತಿರಲಿಲ್ಲ. ಇದೆಲ್ಲ ಸುಳ್ಳು ಎಂದಿದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ