• Home
  • »
  • News
  • »
  • state
  • »
  • ನನ್ನ ತಾಯಿಗೇ ಬೆಡ್ ಕೊಡ್ತಿಲ್ಲ ಎಂದು ಸಿದ್ದರಾಮಯ್ಯ ಬಳಿ ಕಣ್ಣೀರಿಟ್ಟ ಶಾಸಕಿ ಕುಸುಮಾ ಶಿವಳ್ಳಿ!

ನನ್ನ ತಾಯಿಗೇ ಬೆಡ್ ಕೊಡ್ತಿಲ್ಲ ಎಂದು ಸಿದ್ದರಾಮಯ್ಯ ಬಳಿ ಕಣ್ಣೀರಿಟ್ಟ ಶಾಸಕಿ ಕುಸುಮಾ ಶಿವಳ್ಳಿ!

ಸಿದ್ದರಾಮಯ್ಯ, ಶಾಸಕಿ ಕುಸುಮಾ ಶಿವಳ್ಳಿ

ಸಿದ್ದರಾಮಯ್ಯ, ಶಾಸಕಿ ಕುಸುಮಾ ಶಿವಳ್ಳಿ

ಸಚಿವರು, ಶಾಸಕರು, ಸೆಲೆಬ್ರೆಟಿಗಳು ಕೂಡ ತಮ್ಮವರಿಗಾಗಿ ಬೆಡ್​​​ ಹೊಂದಿಸಲಾಗದೇ ಅಸಹಾಯಕರಾಗಿದ್ದಾರೆ. ತಮ್ಮೆಲ್ಲಾ ಪ್ರಭಾವನ್ನು ಬಳಸಿದರೂ ಆಸ್ಪತ್ರೆಗಳಲ್ಲಿ ಒಂದು ಬೆಡ್​ ಸಿಗುತ್ತಿಲ್ಲ.

  • Share this:

ಬೆಂಗಳೂರು: ಕರ್ನಾಟಕದ ಪಾಲಿಗೆ ಇಂದು ಕರಾಳ ದಿನ. ಚಾಮರಾಜನಗರದ ಆಸ್ಪತ್ರೆಯಲ್ಲಿ ಆಕ್ಸಿಜನ್​​ ಕೊರತೆ ಉಂಟಾಗಿ 24 ಮಂದಿ ರೋಗಿಗಳು ನರಳಾಡಿ ಪ್ರಾಣ ಬಿಟ್ಟಿದ್ದಾರೆ. ಇನ್ನು ಸೋಂಕಿತರಿಗೆ ಬೆಡ್​ ಸಿಗದೇ ಪರದಾಡುತ್ತಿರುವುದು ಸಾಮಾನ್ಯವೇನೋ ಎನ್ನುವಂತಾಗಿದೆ. ಸಚಿವರು, ಶಾಸಕರು, ಸೆಲೆಬ್ರೆಟಿಗಳು ಕೂಡ ತಮ್ಮವರಿಗಾಗಿ ಬೆಡ್​​​ ಹೊಂದಿಸಲಾಗದೇ ದಿಕ್ಕೆಟ್ಟಿದ್ದಾರೆ. ತಮ್ಮೆಲ್ಲಾ ಪ್ರಭಾವನ್ನು ಬಳಸಿದರೂ ಆಸ್ಪತ್ರೆಗಳಲ್ಲಿ ಒಂದು ಬೆಡ್​ ಸಿಗುತ್ತಿಲ್ಲ. ಇದಕ್ಕೆ ಕುಂದಗೋಳ ಕ್ಷೇತ್ರದ ಕಾಂಗ್ರೆಸ್​ ಶಾಸಕಿ ಕುಸುಮಾ ಶಿವಳ್ಳಿಯೂ ಹೊರತಾಗಿಲ್ಲ. ತಮ್ಮ ಸೋಂಕಿತ ತಾಯಿಗೆ ಬೆಡ್​ ಸಿಗುತ್ತಿಲ್ಲ ಎಂದು ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಅವರ ಬಳಿ ಶಾಸಕಿ ಕುಸುಮಾ ಶಿವಳ್ಳಿ ಕಣ್ಣೀರಿಟ್ಟಿರುವ ಘಟನೆ ನಡೆದಿದೆ.


ರಾಜ್ಯದಲ್ಲಿನ ಕೊರೋನಾ ಪರಿಸ್ಥಿತಿ ಸಂಬಂಧ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್​ ಶಾಸಕಾಂಗ ಸಭೆ ಕರೆದಿದ್ದರು. ವರ್ಚುವಲ್​ ಮೂಲಕ ಕಾಂಗ್ರೆಸ್​ ಶಾಸಕರ ಜೊತೆ ಚರ್ಚೆ ನಡೆಸಿದರು. ಈ ವೇಳೆ ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಶಾಸಕಿ ಕುಸುಮಾ ಶಿವಳ್ಳಿಯವರು ಕೊರೋನಾ ದುಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ಇಳಿ ವಯಸ್ಸಿನ ನನ್ನ ತಾಯಿಗೇ ನಾನು ಬೆಡ್​​ ಕೊಡಿಸಲು ಆಗುತ್ತಿಲ್ಲ ಎಂದು ಅಸಹಾಯಕರಾಗಿ ಕಣ್ಣೀರಾಕಿದ್ದಾರೆ. ಶಾಸಕಿಯಾಗಿ ತನ್ನ ಕುಟುಂಬಸ್ಥರಿಗೇ ನೆರವಾಗುವ ಪರಿಸ್ಥಿತಿಯಲ್ಲಿ ನಾನಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.


ಶಾಸಕಿಯ ಅಸಹಾಯಕ ಪರಿಸ್ಥಿತಿ ಕಂಡು ಮರುಗಿದ ಸಿದ್ದರಾಮಯ್ಯ ಅವರು ಕೂಡಲೇ ಕಿಮ್ಸ್​​ಗೆ ಕರೆ ಮಾಡಿದ್ದಾರೆ. ಕಿಮ್ಸ್ ನಿರ್ದೇಶಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ಯಾರಿಗೂ ಬೆಡ್ ನಿರಾಕರಿಸಬೇಡಿ ತಾಕೀತು ಮಾಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಿಡಿ ಕಾರಿದ್ದಾರೆ. ಕೋವಿಡ್​ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗದಿದ್ದರೆ. ಬಿಜೆಪಿ ಸರ್ಕಾರ ಅಧಿಕಾರದಿಂದ ಕೆಳಗಿಳಿಯಲಿ ಎಂದು ಹರಿಹಾಯ್ದಿದ್ದಾರೆ.


ಇನ್ನು ಚಾಮರಾಜನಗರದ ದುರಂತಕ್ಕೂ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಕಿಡಿಕಾರಿದ್ದಾರೆ. ಚಾಮರಾಜನಗರದ ಘಟನೆಯಿಂದ ಬಹಳ ನೋವಾಗಿದೆ. ಮೃತರ ಕುಟುಂಬಗಳಿಗೆ ಸಂತಾಪಗಳು. ರಾಜ್ಯದಲ್ಲಿ ಆಕ್ಸಿಜನ್​ ಸಿಗದೇ ಉಂಟಾಗಿರುವ ಸರಣಿ ಸಾವುಗಳ ಮುಂದುವರಿದ ಭಾಗವಿದು. ಈ ಸಾವಿಗೆ ಬಿಜೆಪಿ ಸರ್ಕಾರ, ಜಿಲ್ಲಾಸ್ಪತ್ರೆಯ ವೈದ್ಯರು, ಜಿಲ್ಲಾಡಳಿತವೇ ನೇರ ಹೊಣೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದು ಬಿದ್ದಿರೋದಕ್ಕೆ ಈ ಅಮಾನವೀಯ ಪ್ರಕರಣವೇ ಸಾಕ್ಷಿ. ಅಧಿಕಾರದ ಲಾಲಾಸೆಗೆ ಬಿಜೆಪಿ ಸರ್ಕಾರ ಇನ್ನಷ್ಟು ಜನರನ್ನು ಬಲಿ ಪಡೆಯುವುದು ಬೇಡ. ಜನರ ಜೀವ ರಕ್ಷಿಸಲು ಸಾಧ್ಯವಾಗದ ಇಂಥ ಸರ್ಕಾರ ಇರುವುದಕ್ಕಿಂತ ತೊಲಗುವುದೆ ಲೇಸು ಎಂದು ಕಿಡಿ ಕಾರಿದ್ದಾರೆ.


ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ, ಆರೋಗ್ಯ ಸಚಿವ ಕೆ.ಸುಧಾಕರ್​ ಈ ಪ್ರಕರಣದ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕು. ಹೈಕೋರ್ಟ್​​ನ ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿ ಮೂಲಕ ಪ್ರಕರಣದ ತನಿಖೆ ನಡೆಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು