ಮೆಟ್ರೋ ಲೈನ್ ಉದ್ಘಾಟನೆ ವೇಳೆ ಕನ್ನಡ ಕಡೆಗಣನೆ: ಸಚಿವ ಸುನೀಲ್ ಕುಮಾರ್ ನೊಟೀಸ್ ಜಾರಿ
ಕೆಂಗೇರಿವರೆಗಿನ ಮೆಟ್ರೋ ಮಾರ್ಗದ ಉದ್ಘಾಟನಾ ಸಮಾರಂಭದ ಮುಖ್ಯವೇದಿಕೆಯಲ್ಲಿ ಕನ್ನಡವನ್ನು ಕಡೆಗಣಿಸಿದ್ದ ಬಿಎಂಆರ್ಸಿಎಲ್ ವಿರುದ್ಧ ಆಕ್ರೋಶ ವ್ಯಕ್ತಪವಾಗಿತ್ತು. ಅದರ ಬೆನ್ನಲೇ ಕನ್ನಡ ಸಚಿವ ಸುನೀಲ್ ಕುಮಾರ್ ನೋಟೀಸ್ ಜಾರಿ ಮಾಡಿದ್ದಾರೆ.
ಬೆಂಗಳೂರು (ಸೆ. 01): ಭಾನುವಾರ ಕೆಂಗೇರಿ ಮೆಟ್ರೋಲ್ ಲೈನ್ ಉದ್ಘಾಟನೆ ವೇಳೆ ಕನ್ನಡ ಫಲಕ ಹಾಕದೇ ನಿರ್ಲಕ್ಷ್ಯ ತೋರಿದ್ದ ಬಿಎಂಆರ್ಸಿಎಲ್ ವಿರುದ್ಧ ಸಾರ್ವಜನಿಕರಿಂದ ಹಾಗೂ ಕನ್ನಡ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ನ್ಯೂಸ್18 ಕನ್ನಡದಲ್ಲೂ ಆ ದಿನ ಈ ವಿಚಾರವನ್ನು ಎತ್ತಿಹಿಡಿದು ಪ್ರಸಾರ ಮಾಡಲಾಗಿತ್ತು. ಇದೀಗ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ಅವರೂ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಬೆಂಗಳೂರು ಮೆಟ್ರೋಪಾಲಿಟನ್ ರೈಲ್ ಕಾರ್ಪರೇಷನ್ನ ವ್ಯವಸ್ಥಾಪಕ ನಿರ್ದೇಶಕರಿಂದ ವಿವರಣೆ ಕೇಳಿ ಸಚಿವ ಸುನೀಲ್ ಕುಮಾರ್ ನೋಟೀಸ್ ಕೊಟ್ಟಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ಯೋಜನೆಯ ಎರಡನೇ ಹಂತದ ಯೋಜನೆಯಲ್ಲಿ ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ 7.5 ಕಿಮೀ ಮೆಟ್ರೋ ಲೈನ್ ವಿಸ್ತೃತ ಮಾರ್ಗ ಪೂರ್ಣಗೊಂಡಿದೆ. ಮೂರು ದಿನಗಳ ಹಿಂದೆ ನಡೆದ ಉದ್ಘಾಟನಾ ಸಮಾರಂಭದ ಮುಖ್ಯ ವೇದಿಕೆಯಲ್ಲಿ ಹಾಕಿದ್ದ ಫಲಕದಲ್ಲಿ ಇಂಗ್ಲೀಷ್ ಭಾಷೆ ಮಾತ್ರ ಬಳಕೆ ಮಾಡಲಾಗಿತ್ತು. ಕನ್ನಡದ ಒಂದಕ್ಷರವೂ ಕಾಣಿಸಲಿಲ್ಲ. ಕರ್ನಾಟಕ ರಾಜಧಾನಿಯ ಸರ್ಕಾರಿ ಕಾರ್ಯಕ್ರಮದಲ್ಲೇ ಕನ್ನಡ ಮಾಯವಾಗಿದ್ದರ ಬಗ್ಗೆ ಕಟು ಟೀಕೆಗಳು ಕೇಳಿಬಂದಿವೆ. ಸಿದ್ದರಾಮಯ್ಯ ಆದಿಯಾಗಿ ಅನೇಕರು ಇದನ್ನ ಖಂಡಿಸಿದ್ದಾರೆ.
ಇದೇ ವೇಳೆ, ಮೆಟ್ರೋ ಲೈನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಬಳಕೆ ಮಾಡದೇ ಆಗಿರುವ ತಪ್ಪಿಗೆ ಬಿಎಂಆರ್ಸಿಎಲ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚವ್ಹಾಣ್ ಅವರು ಕ್ಷಮೆ ಕೋರಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಎಲ್ಲಾ ಫಲಕಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲೇ ಇದ್ದವು. ಮುಖ್ಯ ವೇದಿಕೆಯ ಫಲಕ ಮಾತ್ರ ಕನ್ನಡ ಭಾಷೆ ಹೊಂದಿರಲಿಲ್ಲ. ಇದಕ್ಕೆ ಹಲವಾರು ಆಕ್ಷೇಪಣೆಗಳು ಬಮದಿವೆ. ಈ ತಪ್ಪಿಗೆ ನಾನೇ ಸಂಪೂರ್ಣ ಹೊಣೆ. ಮುಂದೆ ಇಂಥ ತಪ್ಪು ಆಗದಂತೆ ಕ್ರಮ ವಹಿಸುತ್ತೇನೆ, ಮನ್ನಿಸಿ ಎಂದು ಮುಖ್ಯ ಪಿಆರ್ಒ ಯಶವಂತ ಚವಾಣ್ ಅವರು ಮಾಧ್ಯಮದವರ ವಾಟ್ಸಾಪ್ ಗ್ರೂಪ್ಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)