• Home
  • »
  • News
  • »
  • state
  • »
  • ಕಾಂಗ್ರೆಸ್ಸಿಗರ ವಿರುದ್ಧ ಅವಾಚ್ಯ ಪದ ಪ್ರಯೋಗಿಸಿದ ಈಶ್ವರಪ್ಪ: ಬಿಜೆಪಿಗೇ ಕಳಂಕ ಎಂದು ಕಿಡಿಕಾರಿದ ಕೈ ನಾಯಕರು

ಕಾಂಗ್ರೆಸ್ಸಿಗರ ವಿರುದ್ಧ ಅವಾಚ್ಯ ಪದ ಪ್ರಯೋಗಿಸಿದ ಈಶ್ವರಪ್ಪ: ಬಿಜೆಪಿಗೇ ಕಳಂಕ ಎಂದು ಕಿಡಿಕಾರಿದ ಕೈ ನಾಯಕರು

ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ

ks eshwarappa controversial statement: ಈಶ್ವರಪ್ಪನಿಗೆ ಸಂಸ್ಕಾರ, ಸಂಸ್ಕೃತಿಯೇ ಗೊತ್ತಿಲ್ಲ.  ಸಂಸ್ಕಾರ ಇರುವವರು ಅಂತಹ ಪದವನ್ನು ಬಯಸುವುದಿಲ್ಲ. ಈಶ್ವರಪ್ಪ ಬೆಳೆದು ಬಂದಿರುವ ಹಾದಿಯೇ ಹಾಗಿದೆ. ಅವ್ರಿಂದ ಬದಲಾವಣೆಗಳನ್ನು ನಿರೀಕ್ಷೆ ಮಾಡಲೇಬಾರದು‌ ಎಂದು ಟೀಕಿಸಿದರು.

  • Share this:

ಬೆಂಗಳೂರು:  ಸಚಿವ ಕೆ.ಎಸ್​.ಈಶ್ವರಪ್ಪ ಮತ್ತೆ ತಮ್ಮ ನಾಲಗೆ ಹರಿಬಿಟ್ಟು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ವಿಧಾನಸೌಧದಲ್ಲಿ ಕಾಂಗ್ರೆಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ಮಾತು ಜಾರಿದ್ದಾರೆ. ಕಾಂಗ್ರೆಸ್​ನವರು ಕುಡುಕರು ಎಂದಿರುವ ಅವರು ಅವಾಚ್ಯ ಶಬ್ಧವನ್ನು ಬಳಸಿದ್ದಾರೆ. ಮಾತನಾಡುತ್ತಿದ್ದಾಗಲೇ ಎಚ್ಚೆತ್ತುಕೊಂಡ ಈಶ್ವರಪ್ಪ ಕೋಪದಲ್ಲಿ ಮಾತು ಬಂತು, ಆ ಮಾತನ್ನ ವಾಪಸ್ ಪಡೆಯುತ್ತೇನೆ, ಅದನ್ನ ಮುಂದುವರೆಸೋದು ಬೇಡ. ಆ ಮಾತನ್ನ ವಿತ್ ಡ್ರಾ ಮಾಡ್ತೇನೆ ಎಂದಿದ್ದಾರೆ. ಆದರೆ ಬಿಜೆಪಿ ನಾಯಕನ ಮಾತಿಗೆ ಕಾಂಗ್ರೆಸ್​ ಮುಖಂಡರು ಕಿಡಿಕಾರಿದ್ದಾರೆ.


ಕಾಂಗ್ರೆಸ್ ವಿರುದ್ಧ ಕೆ‌.ಎಸ್ ಈಶ್ವರಪ್ಪ ಅವಾಚ್ಯ ಶಬ್ದ ಬಳಕೆ ಬಗ್ಗೆ ಮೈಸೂರಲ್ಲಿ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈಶ್ವರಪ್ಪನಿಗೆ ಸಂಸ್ಕಾರ, ಸಂಸ್ಕೃತಿಯೇ ಗೊತ್ತಿಲ್ಲ.  ಸಂಸ್ಕಾರ ಇರುವವರು ಅಂತಹ ಪದವನ್ನು ಬಯಸುವುದಿಲ್ಲ. ಈಶ್ವರಪ್ಪ ಬೆಳೆದು ಬಂದಿರುವ ಹಾದಿಯೇ ಹಾಗಿದೆ. ಅವ್ರಿಂದ ಬದಲಾವಣೆಗಳನ್ನು ನಿರೀಕ್ಷೆ ಮಾಡಲೇಬಾರದು‌ ಎಂದು ಟೀಕಿಸಿದರು.


ಆಡಳಿತದಲ್ಲಿರುವವರು ಟೀಕೆಗಳನ್ನ ಆರೋಗ್ಯ ಪೂರ್ಣವಾಗಿ ಸ್ವೀಕರಿಸಬೇಕು. ರಾಜಕಾರಣದಲ್ಲಿ ಟೀಕೆ ಬರುವುದು ಸಹಜ. ಅದಕ್ಕೆ ಈ ರೀತಿ ಪ್ರತಿಕ್ರಿಯೆ ನಿಡೋದು ಸರಿಯಲ್ಲ. ಈಶ್ವರಪ್ಪ ಮೊದಲಿನಿಂದಲೂ ಹೀಗೆಯೇ ಮಾತಾಡುತ್ತಿದ್ದಾರೆ. ಅವರಿಗೆ ಆರೋಗ್ಯಕರವಾದ ಸಂಸ್ಕೃತಿಯೇ ಇಲ್ಲ, ಬಿಜೆಪಿಯವರ ಸಂಸ್ಕೃತಿಯೇ ಇಂತದ್ದು. ಈಶ್ವರಪ್ಪರಿಗೆ ಬಿಜೆಪಿ ಬುದ್ದಿ ಹೇಳುವ ಕೆಲಸ ಮಾಡುತ್ತಿಲ್ಲ ಎಂದು ಕುಟುಕಿದರು.


ಈಶ್ವರಪ್ಪ ತಮ್ಮ ಹೆಸರನ್ನು ಮೇರ ನಾಮ್ ಜೋಕರ್ ಅಂತ ಹೆಸರು ಬದಲಾಯಿಸಿಕೊಳ್ಳಲಿ ಎಂದು ಕಾಂಗ್ರೆಸ್​ ಬಿಕೆ ಹರಿಪ್ರಸಾದ್ ವ್ಯಂಗ್ಯವಾಡಿದರು. ಈಶ್ವರಪ್ಪ ಮಾತನಾಡಿದ್ದು ದ್ವೇಷ ಭಾಷಣ. ಈಶ್ವರಪ್ಪ ತಪ್ಪಲ್ಲ ಅದು, ಅವರು ಕಲಿತ ನಾಗಪುರ ಯುನಿವರ್ಸಿಟಿ ಹೇಳಿಕೊಟ್ಟ ಪಾಠ. ಪ್ರಚೋದನಕಾರಿ ಭಾಷಣದ ವಿರುದ್ದ ತಕ್ಷಣ ಪೊಲೀಸರು ಎಫ್ಐಆರ್ ದಾಖಲಿಸಬೇಕು. ಕರ್ನಾಟಕ ಪೊಲೀಸ್​​ ನಿಷ್ಕ್ರಿಯ ಆಗಿದ್ದಾರೆ, ಸುಮುಟೋ ಕೇಸ್ ದಾಖಲಿಸಬೇಕು ಎಂದರು.


ಇದನ್ನೂ ಓದಿ: ಇನ್ಮುಂದೆ ಸೈಲೆಂಟ್?: ದೇವೇಗೌಡರ ಭೇಟಿ ಸರಿಯಲ್ಲ ಎಂದಿದ್ದ ಪ್ರೀತಂ ಗೌಡನ ಕರೆಸಿ ವಾರ್ನ್ ಮಾಡಿದ ಸಿಎಂ


ಆದರೆ ಸಚಿವ ಈಶ್ವರಪ್ಪ ಮಾತ್ರ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಯಾರ ತಂಟೆಗೆ ಹೋಗೋದು ಬೇಡ, ನಮ್ಮ ತಂಟೆಗೆ ಬಂದ್ರೇ ಸುಮ್ನಿರೋದು ಬೇಡ ಎಂದು ನಮ್ಮ ಹಿರಿಯರು ಹೇಳಿದ್ದರು. ಅದನ್ನ ನಾನು ಉಲ್ಲೇಖ ಮಾಡಿದ್ದೇನೆ ಅಷ್ಟೇ, ಇದನ್ನ ವಿವಾದ ಮಾಡೋದು ಸರಿಯಲ್ಲ. ಇಲ್ಲಿಗೆ ನಿಲ್ಲಿಸೋಣ, ಮುಂದುವರೆಸೋದು ಬೇಡ. ಆದ್ರೂ ವಿವಾದ ಮಾಡ್ತೀನಿ, ಮುಂದುವರೆಸ್ತೀನಿ ಅಂದರೆ ಮುಂದುವರೆಸಿ ನಂಗೇನು ಅಭ್ಯಂತರ ಇಲ್ಲ ಎಂದರು.


ಈಶ್ವರಪ್ಪ ಅವಾಚ್ಯ ಪದ ಬಳಕೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಕೂಡ ಖಂಡಿಸಿದರು. ಅವರ ನಾಲಿಗೆ ಅವರ ಆಚಾರ ತೋರಿಸುತ್ತದೆ. ಬಿಜೆಪಿ ನಾಯಕರ ತಂದೆ-ತಾಯಂದಿರು ಇಂಥ ಸಂಸ್ಕೃತಿ ಕಲಿಸಿದ್ದಾರೆ. ಇಂಥ ಭಾಷೆ ಬಳಸುವವರನ್ನು ಪಕ್ಷದಿಂದ ಕಿತ್ತುಹಾಕಬೇಕು. ಈ ತರಹ ಕೆಟ್ಟ ಕೆಟ್ಟ ಭಾಷೆ, ಕೆಟ್ಟ ಕೆಟ್ಡ ಪದ ಬೇರೆಯವರಿಗೂ ಗೊತ್ತಿರತ್ತೆ. ಅದೇ ಪದವನ್ನು ಅವರ ಮೇಲೆ ಬಳಸಿದರೆ ಹೇಗಿರತ್ತೆ? ಬಿಜೆಪಿಗೆ ನಾಚಿಕಿಗೇಡಿನ ಸಂಗತಿ, ಬಿಜೆಪಿಗೇ ಒಂದು ಕಳಂಕ ಎಂದು ಕಿಡಿಕಾಡಿದರು.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Kavya V
First published: