ಬೆಂಗಳೂರಿನಲ್ಲಿ 15 ವರ್ಷಗಳಿಂದ ಮರಗಿಡ ಪೋಷಿಸುತ್ತಿರುವ ‘ಮಿಂಚು ತಿಮ್ಮಕ್ಕ’ ಶೈಲಜಾ

ಮಿಂಚು ತಿಮ್ಮಕ್ಕ ಎಂದು ಖ್ಯಾತರಾಗಿರುವ ಶೈಲಜಾ ಬೆಂಗಳೂರಿನಲ್ಲಿ ಕಳೆದ 15 ವರ್ಷದಿಂದ ಮರ ಗಿಡಗಳನ್ನು ಪೋಷಿಸುತ್ತಿದ್ದಾರೆ. ಹದಿನೈದು ವರ್ಷಗಳ ಹಿಂದೆ ಇವರು ಪೋಷಿಸಿ ಬೆಳೆಸಿದ ಗಿಡಗಳು ಈಗ ಮರವಾಗಿ ಸಾರ್ವಜನಿಕರಿಗೆ ನೆರಳಾಗಿವೆ.

ಮಲ್ಲೇಶ್ವರಂನ ಮಿಂಚು ತಿಮ್ಮಕ್ಕ ಎಂದು ಖ್ಯಾತರಾಗಿರುವ ಶೈಲಜಾ

ಮಲ್ಲೇಶ್ವರಂನ ಮಿಂಚು ತಿಮ್ಮಕ್ಕ ಎಂದು ಖ್ಯಾತರಾಗಿರುವ ಶೈಲಜಾ

 • Share this:
  ಬೆಂಗಳೂರು: ನಗರದ ಮಲ್ಲೇಶ್ವರಂ ರೈಲ್ವೇ ಸ್ಟೇಷನ್ ಮುಖ್ಯ ರಸ್ತೆಯ ಉದ್ದಗಲಕ್ಕೂ ಮರಗಳು ಬೆಳೆದು ಹಚ್ಚಹಸಿರಾಗಿ ಕಂಗೊಳಿಸುತ್ತಿದೆ. ದಾರಿ ಉದ್ದಕ್ಕೂ ನೆರಳು ಹರಡಿದೆ. ಇವೆಲ್ಲಾ ಒಂದು ದಿನದಲ್ಲಿ ಮೊಳಕೆಯಾಗಿ ಬೆಳೆದು ನಿಂತಿದ್ದಲ್ಲ. ಇದರ ಹಿಂದೆ 13-15 ವರ್ಷಗಳ ಪರಿಶ್ರಮವಿದೆ. ಈ ನೆರಳಿನ ಹಿಂದಿರುವುದು ಶೈಲಜಾ ಎನ್ನುವ ಒಬ್ಬ ಮಹಿಳೆ. ಹೌದು, ಮಲ್ಲೇಶ್ವರಂ ರೈಲು ನಿಲ್ದಾಣದ ಈ ರಸ್ತೆಯಲ್ಲಿ ಮರಗಳು ಬೆಳೆದು ನಿಲ್ಲೋದಕ್ಕೆ ಕಾರಣವಾದವರು ಈ ಶೈಲಜಾ. ಹದಿನೈದು ವರ್ಷಗಳ ಹಿಂದೆ ತನ್ನ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಸಮಯದಲ್ಲಿ ಬಿಸಿಲಿಗೆ ನೀರು ಸಿಗದೆ ಸಾವಿನಂವಿಗೆ ತಲುಪಿದ್ದ ಗಿಡಗಳನ್ನು ಕಂಡ ಇವರು ಪ್ರತಿ ದಿನ ಈ ಗಿಡಗಳಿಗೆ ನೀರುಣಿಸುವ ಕೆಲಸ ಮಾಡಿದ್ದರು‌. 15 ವರ್ಷದ ನಿರಂತರ ಕೆಲಸದ ಬಳಿಕ ಈ ಗಿಡಗಳು ಮರಗಳಾಗಿ ಎದ್ದು ನಿಂತಿವೆ. 

  ಮಿಂಚು ಐಡಿಯಾಸ್ ಎಂಬ ಸಂಸ್ಥೆ ಕಟ್ಟಿಕೊಂಡಿರುವ ಶೈಲಜಾ ಅವರು ಹಲವು ಬಗೆಯ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಮರಗಿಡಗಳನ್ನು ಪರಿಪಾಲನೆ ಮಾಡುವುದು ಇವರ ಇಷ್ಟದ ಕೆಲಸ. ಇದೇ ಕಾರಣಕ್ಕೆ ಗಿಡ ನೆಡುವುದು, ಮರಗಳನ್ನು ಪೋಷಿಸುವುದು ಮಾಡುತ್ತಿದ್ದಾರೆ. ಪ್ರಖ್ಯಾತ ವೃಕ್ಷಪ್ರೇಮಿ ಸಾಲು ಮರದ ತಿಮ್ಮಕ್ಕ ಅವರೇ ಸ್ಫೂರ್ತಿ. ಇದೇ ಕಾರಣಕ್ಕೆ ಇವರನ್ನ ಮಿಂಚು ತಿಮ್ಮಕ್ಕ ಎಂಬ ಹೆಸರಿನಿಂದ ಸ್ಥಳೀಯರು ಕರೀತಾರೆ. ಹೀಗೆ ಇವರು ಮಲ್ಲೇಶ್ವರಂ ಭಾಗದಲ್ಲಿ ಬಿಬಿಎಂಪಿ ನೆಟ್ಟಿರುವ 100ಕ್ಕೂ ಹೆಚ್ಚು ಮರಗಳಿಗೆ ಆಸರೆಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ 150ಕ್ಕೂ ಹೆಚ್ಚು ಗಿಡ ನೆಟ್ಟು ಪೋಷಿಸಿದ್ದಾರೆ. ಹದಿನೈದು ವರ್ಷಗಳ ಹಿಂದೆ ಪ್ರತಿ ದಿನ ಬಾಟಲಿಯಲ್ಲಿ ನೀರು ತಂದು ಗಿಡಗಳಿಗೆ ಹಾಕುತ್ತಿದ್ದರಂತೆ ಶೈಲಜಾ. ಇವರು ಗಿಡ ಮರಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ ಎನ್ನುವುದು ಸ್ಥಳೀಯರ ಮಾತು.

  ಇದನ್ನೂ ಓದಿ: ಕೋವಿಡ್​ಗೆ ಪೋಷಕರ ಕಳೆದುಕೊಂಡ ಮಕ್ಕಳು; ಧಾರವಾಡದಲ್ಲಿ ನೂರಾರು ಕಂದಮ್ಮಗಳು ತಬ್ಬಲಿ

  ಆರಂಭದಲ್ಲಿ ಎರಡು ಗಿಡಗಳು ನೀರುಣಿಸುತ್ತಿದ್ದರು ಇವರು. ನಂತರ ಅದೇ ಒಂದು ಹವ್ಯಾಸವಾಗಿ 100ಕ್ಕೂ ಹೆಚ್ಚು ಗಿಡಗಳಿಗೆ ಆಸರೆಯಾದರು. ಈಗ ಅಂಥಾ ಗಿಡಗಳೆಲ್ಲಾ ಬೆಳೆದು ಮರವಾಗಿ ಸಾರ್ವಜನಿಕರಿಗೆ ನೆರಳಾಗಿ ನಿಂತಿದೆ. ವಾರದಲ್ಲಿ ಐದಾರು ಬಾರಿಯಾದರೂ ತಾನು ಬೆಳೆಸಿದ ಮರಗಳ ತಳಗೆ ಬಂದು ಕಾಲ ಕಳೆಯುತ್ತಾರೆ. ಇದರ ಜೊತೆಗೆ ತಾನು ಪೋಷಿಸಿದ ಮರಗಳಿಗೆ ಒದೊಂದೊ ಹೆಸರು ಇಟ್ಟಿಡಲಾಗಿದೆ. ಬ್ರಹ್ಮ, ವಿಷ್ಣು, ಮಹೇಶ್ವರ, ಆಕಾಶ, ಭೂಮಿ, ಸೂರ್ಯ, ಚಂದ್ರ, ಜಲ, ಅಗ್ನಿ ಹೀಗೆ ತಾನು ಪೋಷಿಸಿದ ಒಂದೊಂದು ಮರಕ್ಕೂ ಹೆಸರಿಟ್ಟು ಕರೆಯುತ್ತಾರೆ. ಮಲ್ಲೇಶ್ವರಂನ 11 ಮುಖ್ಯ ರಸ್ತೆಯಲ್ಲಿ ಪೋಷಿಸಿದ ಏಳು ಮರಗಳಿಗೆ ಸ.ರಿ.ಗ.ಮ.ಪ.ದ.ನಿ ಎಂದು ಹೆಸರಿಟ್ಟುವ ಮಿಂಚು ತಿಮ್ಮಕ್ಕ, ಪರಿಚಯಸ್ಥರಿಗೆ ಸಸಿಗಳನ್ನ ಉಡುಗೊರೆ ಕೊಟ್ಟು ನೀರು, ಹೂವು ಪೋಷಣೆ ಬಗ್ಗೆ ಕರೆ ಮಾಡಿ ವಿಚಾರಿಸುತ್ತಾರೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

  - ಆಶಿಕ್ ಮುಲ್ಕಿ
  Published by:Vijayasarthy SN
  First published: