ಬೆಂಗಳೂರು (ಮೇ 25): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಮೆಟ್ರೋ ರೈಲು ಯೋಜನೆಯ ಹಂತ-2ರ ರೀಚ್-2 ವಿಸ್ತರಿಸಿದ (ಮೈಸೂರು ರಸ್ತೆಯ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗೆ) ನೂತನ ಸಂಚಾರ ಮಾರ್ಗದ ಪರಿವೀಕ್ಷಣೆ ನಡೆಸಿದರು. ನೂತನ ಸಂಚಾರ ಮಾರ್ಗದ ಪರಿವೀಕ್ಷಣೆಯ ನಂತರ ಮುಖ್ಯಮಂತ್ರಿ ಬಿಎಸ್ವೈ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆಯ ಪ್ರಮುಖಾಂಶಗಳು ಹೀಗಿವೆ
1. ನಮ್ಮ ಮೆಟ್ರೋ ಯೋಜನೆಯ ಹಂತ-2 ರಡಿ ನಾಯಂಡಹಳ್ಳಿಯಿಂದ ಕೆಂಗೇರಿ ವರೆಗಿನ ರೀಚ್-2ರ ವಿಸ್ತರಣಾ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಜುಲೈನಲ್ಲಿ ಪ್ರಯಾಣಿಕರಿಗೆ ಮುಕ್ತವಾಗಲಿದೆ.
2. ಇದಕ್ಕೆ ಪೂರ್ವಭಾವಿಯಾಗಿ ನಾನು ಇಂದು ಈ ಮಾರ್ಗದ ಪರಿವೀಕ್ಷಣೆ ನಡೆಸಿದ್ದೇನೆ.
3. ಒಟ್ಟು 7.53 ಕಿ.ಮೀ. ಉದ್ದದ ಈ ವಿಸ್ತರಣೆ ಕಾಮಗಾರಿಗೆ 1,560 ಕೋಟಿ ರೂ. ವೆಚ್ಚ ತಗುಲಿದೆ. ಭೂ-ಸ್ವಾಧೀನಕ್ಕೆ 360 ಕೋಟಿ ರೂ. ವೆಚ್ಚವಾಗಿದೆ.
4. ಇದರಿಂದಾಗಿ ಪೂರ್ವ-ಪಶ್ಚಿಮ ಕಾರಿಡಾರ್ ಮಾರ್ಗದ ಉದ್ದ 18.1 ಕಿ.ಮೀ. ಗೆ ಹೆಚ್ಚಳವಾಗಿದೆ. ಇದರಲ್ಲಿ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್-ಟರ್ಮಿನಲ್ ಹಾಗೂ ಕೆಂಗೇರಿ - ಒಟ್ಟು 6 ನಿಲ್ದಾಣಗಳಿವೆ.
5. ಇದರಲ್ಲಿ ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿಗಳಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಕೆಂಗೇರಿ ಬಸ್-ಟರ್ಮಿನಲ್ ನಿಲ್ದಾಣದಲ್ಲಿ ಎರಡು ಅಂತಸ್ತಿನ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ.
6. ಕೆಂಗೇರಿ ಬಸ್-ಟರ್ಮಿನಲ್ ನಿಲ್ದಾಣ ಹೊರತು ಪಡಿಸಿ ಉಳಿದ ಎಲ್ಲ ನಿಲ್ದಾಣಗಳನ್ನು ರಸ್ತೆ ದಾಟಲು ಪಾದಚಾರಿಗಳು ಬಳಸಬಹುದಾಗಿದೆ.
7. ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಪ್ರಯಾಣಿಸಲು 56 ರೂ. ದರ ನಿಗದಿಪಡಿಸಲಾಗಿದೆ. ಮೆಟ್ರೋ ಜಾಲದ ಅತಿ ಉದ್ದದ ಮಾರ್ಗ, ಕೆಂಗೇರಿಯಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ 60 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ.
8. ಈ ವಿಸ್ತರಣೆಯ ಕಾರ್ಯಾಚರಣೆಯಿಂದ ಪ್ರತಿದಿನ ಸರಾಸರಿ 75,000 ಪ್ರಯಾಣಿಕರಿಗೆ ಅನುಕೂಲವಾಗಲಿದೆ.
9. ಈ ಮಾರ್ಗದಲ್ಲಿ ಒನ್-ನೇಷನ್-ಒನ್-ಕಾರ್ಡ್ ಯೋಜನೆಯ ಅನುಷ್ಠಾನಕ್ಕೆ ಪೂರಕವಾಗಿ ಆಟೊಮ್ಯಾಟಿಕ್ ಫೇರ್ ಕಲೆಕ್ಷನ್ ವ್ಯವಸ್ಥೆ ಅಳವಡಿಸಲಾಗಿದೆ.
10. ಟ್ರೈನಿನ ಪರೀಕ್ಷಾರ್ಥ ಓಡಾಟವೂ ಪೂರ್ಣವಾಗಿದೆ.
11. ಪ್ರತಿ ನಿಲ್ದಾಣದ ಛಾವಣಿಯಲ್ಲಿ 250 ಕಿಲೋ ವ್ಯಾಟ್ ಸೌರವಿದ್ಯುತ್ ಪ್ಯಾನೆಲ್ ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ.
12. ಕೆಂಗೇರಿಯಿಂದ ಚಲ್ಲಘಟ್ಟ ವರೆಗಿನ ವಿಸ್ತರಣೆ ಕಾಮಗಾರಿಯೂ ಪ್ರಗತಿಯಲ್ಲಿದೆ. ಮಾರ್ಚ್-2022ರ ಅಂತ್ಯದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
13. ಬೆಂಗಳೂರು ನಗರದ ಸಂಚಾರ ವ್ಯವಸ್ಥೆ ಸುಗಮಗೊಳ್ಳಲು ಹಾಗೂ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸುಲಭವಾಗಿ ಸಂಚರಿಸಲು ನಮ್ಮ ಮೆಟ್ರೋ ರೈಲು ವರದಾನವಾಗಲಿದೆ.
14. ನಮ್ಮ ಮೆಟ್ರೋ ವಿಸ್ತರಿತ ಯೋಜನೆ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ನಮ್ಮ ಸರ್ಕಾರ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ.
15. ಇದೀಗ ಕೇಂದ್ರ ಸರ್ಕಾರವು ಹಂತ-2 ಮತ್ತು ಹಂತ 2ಂ ನೆಯ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ನಮ್ಮ ಮೆಟ್ರೋ ರೈಲು ಮಾರ್ಗ ನಿರ್ಮಾಣ ಆಗಲಿದೆ.
16. ಪ್ರಯಾಣಿಕರ ಅನುಕೂಲ ಹಾಗೂ ಸಮಯದ ಉಳಿತಾಯವಾಗುವುದರೊಂದಿಗೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಬಳಕೆಗೆ ಉತ್ತೇಜನ ನೀಡಲು ಸಹ ಈ ಯೋಜನೆ ಮಹತ್ವದ ಪಾತ್ರ ವಹಿಸಲಿದೆ ಎಂದು ಸಿಎಂ ಬಿಎಸ್ವೈ ತಿಳಿಸಿದರು.
ಇದನ್ನು ಓದಿ: ಕೊರೋನಾ ಸೋಂಕು; ವಾತಾವರಣ ಶುದ್ಧಿಗೆ ಕ್ಷೇತ್ರದಾದ್ಯಂತ ಹೋಮ ಮಾಡಿಸಿದ ಬಿಜೆಪಿ ಶಾಸಕ ಅಭಯ ಪಾಟೀಲ್!
ಮುಖ್ಯಮಂತ್ರಿ ಸಿಎಂ ಬಿಎಸ್ವೈ ಅವರ ಮೆಟ್ರೊ ಮಾರ್ಗ ಪರಿವೀಕ್ಷಣೆ ವೇಳೆ ವಸತಿ ಸಚಿವ ವಿ. ಸೋಮಣ್ಣ, ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಎಸ್. ಮುನಿರತ್ನ ಹಾಗೂ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ನಮ್ಮ ಮೆಟ್ರೋ ರೈಲು ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಅವರು ಉಪಸ್ಥಿತರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ