ಬೆಂಗಳೂರು: ನಾಲ್ಕೈದು ದಿನಗಳ ಹಿಂದೆ ಬೈಕ್ ಸವಾರನೊಬ್ಬ ಗಾಳಿಪಟದ ಮಾಂಜಾ ದಾರಕ್ಕೆ ಸಿಕ್ಕಿ ವಿಲವಿಲ ಒದ್ದಾಡಿ ಹೋಗಿದ್ದ. ಅದಾದ ಬಳಿಕ ಆತ ಚಿಕಿತ್ಸೆ ಪಡೆಯುತ್ತಿರುವ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರಾಜ್ಯದಲ್ಲಿ ಬ್ಯಾನ್ ಆಗಿರುವ ಮಾಂಜಾ ದಾರದಿಂದ ಅಂದು ಕತ್ತು ಸೀಳಿಸಿಕೊಂಡಿದ್ದ ಮಲ್ಲಿಕ್ ಅರ್ಜುನ್ ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ್ದಾರೆ. ಅಲ್ಲದೇ ನಗರದಲ್ಲಿ ಗಾಳಿಪಟ ಹಾರಿಸುವುದನ್ನೂ ನಿಷೇಧಿಸ ಬೇಕು ಅಂತ ಮನವಿ ಮಾಡಿಕೊಂಡಿದ್ದಾರೆ.
ಗಾಳಿಪಟದ ಮಾಂಜಾ ದಾರಕ್ಕೆ ಸಿಕ್ಕಿ ನರಳಾಡಿದ್ದ ಬೈಕ್ ಸವಾರ:
ಅದು ಜೂನ್ 23ರ ಮಟಮಟ ಮಧ್ಯಾಹ್ನ. ತರಾತುರಿಯಲ್ಲಿ ಬ್ಯಾಂಕ್ ಕೆಲಸದ ಮೇಲೆ ಬೈಕ್ ಏರಿ ಬರುತ್ತಿದ್ದ ಮಲ್ಲಿಕ್ ಅರ್ಜುನ್ ಅವರಿಗೆ ನಗರದ ಅಡುಗೋಡಿ ಸಂಚಾರಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಕತ್ತಿಗೇನೋ ಸುತ್ತಿಕೊಂಡಂತೆ ಭಾಸವಾಯ್ತು. ಹಾಗೆ ನೋಡಿದರೆ ಅದು ಯಾವುದೋ ಗಾಳಿಪಟದಿಂದ ಬಂದ ಮಾಂಜಾ ದಾರ. ಅಷ್ಟೊತ್ತಿಗಾಗಲೆ ಆ ಮಾಂಜಾ ದಾರ ಮಲ್ಲಿಕ್ ನ ಕತ್ತು ಸೀಳಿ ಬಿಟ್ಟಿತು. ತಕ್ಷಣ ಆ ದಾರವನ್ನು ತನ್ನ ಕೈಯಿಂದ ಎಳೆದಿದ್ದೇ ತಡ, ಬಲಗೈಯ ಎರಡು ಬೆರಳುಗಳೂ ಅರ್ಧದಷ್ಟು ತುಂಡಾಯ್ತು. ಬೇರೆ ವಿಧಿಯಲ್ಲದೆ ಅಲ್ಲೇ ನೆಲದಲ್ಲಿ ಕುಸಿದು ಬಿದ್ದ ಮಲ್ಲಿಕ್ ಅರ್ಜುನ್ ನನ್ನು ದಾರಿಹೋಕರು ಯಾರೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರು. ಅದಾದ ಬಳಿಕ ಮಲ್ಲಿಕ್ ಅರ್ಜುನ್ ಒಂದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟರು. ಅದು ಸಿಕ್ಕಾಪಟ್ಟೆ ವೈರಲ್ ಆಯಿತು. ಅಂದು ಸಾವು ಗೆದ್ದು ಬದುಕಿ ಬಂದ ಮಲ್ಲಿಕ್ ಅರ್ಜುನ್ ಅಂದಿನ ಹೋರಾಟವನ್ನು ಎಳೆ ಎಳೆಯಾಗಿ ನ್ಯೂಸ್ 18 ಕನ್ನಡದ ಜೊತೆ ಹೀಗೆ ಬಿಚ್ಚಿಟ್ಟರು.
2016ರಲ್ಲಿ ಸರ್ಕಾರ ರಾಜ್ಯದಿಂದ ಚೈನೀಸ್ ಮಾಂಜಾ ದಾರ ಬಳಕೆ ನಿಷೇಧ:
ಹಾಗೆ ನೋಡಿದರೆ ರಾಜ್ಯದಲ್ಲಿ ಮಾಂಜಾ ದಾರ ಬಳಕೆಯ ಮೇಲೆ ನಿಷೇಧ ಹೇರಲಾಗಿದೆ. ಪ್ರತಿ ದಿನ ಹಕ್ಕಿಗಳು ಈ ದಾರಕ್ಕೆ ಸಿಲುಕಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ, 2008ರಲ್ಲಿ ಪಾಲಿಕೆ ವನ್ಯಜೀವಿ ಸಂರಕ್ಷಕ ಘಟಕದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅದಾಗಿ ಎಂಟು ವರ್ಷಗಳ ಬಳಿಕ ಕೂಲಂಕಷ ವಿಮರ್ಶೆಯ ಬಳಿಕ ಮಾಂಜಾ ದಾರ 2016ರಲ್ಲಿ ನಿಷೇಧಿಸಲಾಯ್ತು. ರಾಜ್ಯದಲ್ಲಿ ಮೊದಲ ಬಾರಿಗೆ ಮಾಂಜಾ ದಾರ ನಿಷೇದಕ್ಕೊಳಗಾದ ಬೆನ್ನಲ್ಲೇ, ದೇಶದ ಇತರೆ ರಾಜ್ಯದಲ್ಲೂ ಬ್ಯಾನ್ ಆಯಿತು. 2018ರಲ್ಲಿ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ನಿಂದ ಮಾಂಜಾ ದಾರ ನಿಷೇಧ ಆದೇಶ ಹೊರಡಿಸಲಾಗಿದೆ. ಮಾಂಜಾ ದಾರ ಉಪಯೋಗಿಸುವುದು, ಮಾರಾಟ ಮಾಡುವುದು, ಸಾಗಿಸುವುದು ಅಪರಾಧ ಎಂದು ಘೋಷಿಸಲಾಗಿದೆ.
ಇದನ್ನೂ ಓದಿ: Dhoni Trolled - ಒಳ್ಳೆಯ ಮೆಸೇಜ್ ಕೊಡಲು ಹೋಗಿ ಟ್ರೋಲ್ ಆಗುತ್ತಿರುವ ಎಂಎಸ್ ಧೋನಿ
ಆದರೂ ಸಾರ್ವಜನಿಕರಿಂದ ಬೇಡಿಕೆ ಇರುವ ಕಾರಣ ಅನಧಿಕೃತವಾಗಿ ಮಾಂಜಾ ದಾರ ಮಾರಾಟವಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ದಿನ 50-60 ಕರೆಗಳು ಮಾಂಜಾ ದಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸಂಬಂಧಿಸಿದ್ದಾಗಿವೆ. ಆದರೆ ಪಾಲಿಕೆಯ ವನ್ಯಜೀವಿ ಸಂರಕ್ಷಣಾ ಘಟಕಕ್ಕೆ 6-8 ಸಮಸ್ಯೆಯನ್ನು ಮಾತ್ರ ಬಗೆಹರಿಸಲು ಸಾಧ್ಯವಾಗುತ್ತಿದೆ. ಮಾಂಜಾ ದಾರಕ್ಕೆ ಹಕ್ಕಿಗಳು ಸಿಲುಕಿ ಸಾವನ್ನಪ್ಪುತ್ತಿರುವ ಘಟನೆಗಳೇ ಘಟಿಸುತ್ತಿವೆ. ಈ ಬಗ್ಗೆ ಸ್ವತಃ ಸಾರ್ವಜನಿಕರೇ ಎಚ್ಚೆತ್ತುಕೊಂಡು ಮಾಂಜಾ ಬಳಕೆಯನ್ನು ದೂರವಿಡಬೇಕು.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ವರದಿ: ಆಶಿಕ್ ಮುಲ್ಕಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ