ಬೆಂಗಳೂರು: ಸಿಲಿಕಾನ್ ಸಿಟಿ ಹೊರವಲಯದಲ್ಲಿ ಸಿನಿಮೀಯ ರೀತಿಯಲ್ಲಿ ವ್ಯಕ್ತಿಯ ಭೀಕರ ಹತ್ಯೆಯಾಗಿದೆ. ನಡುರಸ್ತೆಯಲ್ಲಿ ದುಷ್ಕರ್ಮಿಗಳು ಲಾಂಗ್ ಮಚ್ಚು ಬೀಸಿದ್ದು ರಸ್ತೆಯಲ್ಲಿ ನೆತ್ತರು ಹರಿಸಿ ಎಸ್ಕೇಪ್ ಆಗಿದ್ದಾರೆ. ಹಾಡಹಗಲೇ ನಡೆದ ಈ ಕೊಲೆ ಸ್ಥಳೀಯರನ್ನ ಬೆಚ್ಚಿ ಬೀಳಿಸಿದೆ. ಹೊರವಲಯದಲ್ಲಿ ದುಷ್ಕರ್ಮಿಗಳ ಗ್ಯಾಂಗ್ ವೊಂದು ಲಾಂಗ್ ಮಚ್ಚು ಜಳಪಿಸಿದ್ದಾರೆ. ಜಮೀನು ನೋಡಲು ಅಂತ ಹೊರಟಿದ್ದ ವ್ಯಕ್ತಿ ನಡುರಸ್ತೆಯಲ್ಲಿ ಭೀಕರ ಹತ್ಯೆಯಾಗಿದ್ದು ಸಾರ್ವಜನಿಕರನ್ನ ಬೆಚ್ಚಿ ಬೀಳುವಂತೆ ಮಾಡಿದೆ. ನಗರದ ಕಣ್ಣಂಚಿನಲ್ಲೆ ಇರುವ ಆವಲಹಳ್ಳಿ ಬಳಿಯ ಮಾರ್ಕೋಂಡನಹಳ್ಳಿಯಲ್ಲಿ ಘಟನೆ ನಡೆದಿದ್ದು, ದುಷ್ಕರ್ಮಿಗಳ ದಾಳಿಯಿಂದ ವೆಂಕಟೇಶ್ ಎಂಬುವರು ಹತ್ಯೆಯಾಗಿದ್ದಾರೆ.
ಕುಳ್ಳ ವೆಂಕಟೇಶ್ ಬರ್ಬರ ಹತ್ಯೆ
ರಾಮಮೂರ್ತಿನಗರ ನಿವಾಸಿಯಾದ ಕುಳ್ಳ ವೆಂಕಟೇಶ್ ತನ್ನ ಜಮೀನು ನೋಡುವ ಸಲುವಾಗಿ ಮಾರ್ಕೊಂಡನಹಳ್ಳಿಗೆ ಬೈಕ್ ನಲ್ಲಿ ಹೊರಟಿದ್ದರು. ಬೆಳಗ್ಗೆ 10.30ರ ಸುಮಾರಿಗೆ ಮನೆಯಿಂದ ಆನಂದಪುರ ಮಾರ್ಗವಾಗಿ ಹೋಗ್ತಿದ್ದ ವೇಳೆ ಹಿಂದೆಯಿಂದ ಬಂದ ಆಟೋವೊಂದು ಬೈಕ್ ಗೆ ಡಿಕ್ಕಿ ಹೊಡೆದಿದೆ. ಆಟೋ ಡಿಕ್ಕಿ ಹೊಡೆದ ರಭಸಕ್ಕೆ ವೆಂಕಟೇಶ್ ಕೆಳಗೆ ಬಿದ್ದಿದ್ದಾರೆ. ಈ ವೇಳೆ ನೋಡ ನೋಡುತ್ತಿದ್ದಂತೆ ಐದಾರು ಜನ ದುಷ್ಕರ್ಮಿಗಳ ಗ್ಯಾಂಗ್ ವೆಂಕಟೇಶ್ ಮೇಲೆ ಲಾಂಗ್ ಮಚ್ಚುಗಳಿಂದ ತಲೆ ಮತ್ತು ಕೈಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಿಂದ ತೀವ್ರ ಗಾಯಗೊಂಡ ವೆಂಕಟೇಶ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಹಾಡಹಗಲೇ ನಡೆದ ಭೀಕರ ಕೊಲೆ ವಿಚಾರ ತಿಳಿದು ಸ್ಥಳಕ್ಕೆ ಕೆ ಆರ್ ಪುರ ಮತ್ತು ಆವಲಹಳ್ಳಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದರು. ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಜಮೀನು ವಿವಾದ ಇಲ್ಲವೇ, ಹಣಕಾಸು ವಿಚಾರಕ್ಕೆ ಕೊಲೆ ನಡೆದಿರೋ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಅಪಘಾತ ಮಾಡಿ ನಂತರ ಕೊಲೆ ಮಾಡಿದ್ರು..!
ಇನ್ನೂ ವೆಂಕಟೇಶ್ ಹತ್ಯೆ ಬಳಿಕ ಆರೋಪಿಗಳು ತಾವು ಬಂದ ಆಟೋದಲ್ಲೆ ಎಸ್ಕೇಪ್ ಆಗಿದ್ದಾರೆ. ಮೃತ ವೆಂಕಟೇಶ್ ರಾಮಮೂರ್ತಿನಗರದಲ್ಲಿ ನೆಲೆಸಿದ್ದ. ವೆಂಕಟೇಶ್ ಗೆ ಸೇರಿದ ಸ್ವಲ್ಪ ಜಮೀನು ಮಾರ್ಕೊಂಡನಹಳ್ಳಿ ಬಳಿಯಿದ್ದು ಅದನ್ನ ನೋಡಲು ಬೈಕ್ ನಲ್ಲಿ ಬರ್ತಿದ್ದ. ಈ ವೇಳೆ ಅವರನ್ನ ಪಾಲೋ ಮಾಡಿದ ಕೆಲವು ದುಷ್ಕರ್ಮಿಗಳು ಆಕ್ಸಿಡೆಂಟ್ ರೀತಿಯಲ್ಲಿ ಬೈಕ್ ಗೆ ಡಿಕ್ಕಿ ಹೊಡೆದು ಕೊಲೆ ಮಾಡಿದ್ದಾರೆ ಎಂದು ಮೃತನ ಕುಟುಂಬದವರ ಆರೋಪಿಸಿದ್ದಾರೆ.
ನಡುರಸ್ತೆ ಮರ್ಡರ್ಗೆ ಬೆಚ್ಚಿ ಬಿದ್ದ ಸ್ಥಳೀಯರು
ಇನ್ನೂ ಮೃತ ವೆಂಕಟೇಶ್ ಮನೆಯ ಜವಬ್ದಾರಿ ವಹಿಸಿಕೊಂಡು ಎಲ್ಲಾ ನಿರ್ವಹಣೆ ತಾನೇ ಮಾಡುತ್ತಿದ್ದ. ಮನೆ ಯಜಮಾನನ್ನ ಕಳೆದುಕೊಂಡ ಕುಟುಂಬದವರು ಘಟನಾ ಸ್ಥಳಕ್ಕೆ ಅಗಮಿಸಿ ವೆಂಕಟೇಶ್ ಮೃತದೇಹ ನೋಡುತ್ತಿದ್ದಂತೆ ಅಕ್ರಂದನ ಮುಗಿಲು ಮುಟ್ಟಿತ್ತು. ಹಾಡಹಗಲೇ ನಡೆದ ಭೀಕರ ಕೊಲೆ ವಿಚಾರ ತಿಳಿದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ ಪಿ ವಂಶಿಕೃಷ್ಣ, ಎಎಸ್ ಪಿ ಲಕ್ಷ್ಮೀ ಗಣೇಶ್, ವೈಟ್ ಫೀಲ್ಡ್ ಡಿಸಿಪಿ ದೇವರಾಜ್ ಸ್ಥಳಕ್ಕೆ ದೌಡಾಯಿಸಿದರು. ಊರಿನ ನಡುರಸ್ತೆಯಲ್ಲಿ ನಡೆದ ಭೀಕರ ಕೊಲೆ ಸಾರ್ವಜನಿಕರನ್ನ ಬೆಚ್ಚಿ ಬೀಳುವಂತೆ ಮಾಡಿತ್ತು. ಸದ್ಯ ಈ ಬಗ್ಗೆ ಆವಲಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ವರದಿ: ಮುನಿರಾಜು
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ