ಬೆಂಗಳೂರು, ಸೆ. 8: ತರಕಾರಿ ಖರೀದಿಸಲು ಸರದಿಯಲ್ಲಿ ಬನ್ನಿ ಎಂದು ಹೇಳಿದ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಮನಬಂದಂತೆ ಹಲ್ಲೆ ನಡೆಸಿದ ಘಟನೆ ಸೂಪರ್ ಮಾರ್ಕೆಟ್ವೊಂದರಲ್ಲಿ (Assault incident at Supermarket in Mico Layout, Bengaluru) ನಡೆದಿರುವುದು ಬೆಳಕಿಗೆ ಬಂದಿದೆ. ಮೈಕೋ ಲೇಔಟ್ನ ಏಳನೇ ಮುಖ್ಯ ರಸ್ತೆಯಲ್ಲಿರುವ ಶಾಪಿಂಗ್ ಮಾಲ್ನಲ್ಲಿ ಸೆಪ್ಟೆಂಬರ್ 5ರಂದು ಬೆಳಗ್ಗೆ 8:30ಕ್ಕೆ ಈ ಘಟನೆ ನಡೆದಿದೆ. ಲಾವಣ್ಯ (Lavanya) ಅವರು ಹಲ್ಲೆಗೊಳಗಾದ ಮಹಿಳೆ. ಕಿಶೋರ್ ಕುಮಾರ್ ಎಂಬಾತ ಲಾವಣ್ಯರ ಮೇಲೆ ಹಲ್ಲೆ ಎಸಗಿದ ಆರೋಪಿ. ಸರದಿ ಸಾಲಿನಲ್ಲಿ ಬನ್ನಿ ಎಂದು ಆರೋಪಿಗೆ ಲಾವಣ್ಯ ಹೇಳಿದ್ದಳೆನ್ನಲಾಗಿದೆ. ಇದರಿಂದ ಕೋಪಗೊಂಡ ಆರೋಪಿಯು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮಹಿಳೆ ವಿಡಿಯೋ ಮಾಡಲು ಮುಂದಾದಾಗ ಆರೋಪಿ ಕಿಶೋರ್ ಕುಮಾರ್ ಆ ಮಹಿಳೆ ಮೇಲೆ ಹಲ್ಲೆ ಎಸಗಿರುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.
ಆರೋಪಿ ಕಿಶೋರ್ ಕುಮಾರ್ (Accused name Kishore Kumar) ಎರಡು ಬಾರಿ ಆ ಮಹಿಳೆ ಮೇಲೆ ಹಲ್ಲೆ ಎಸಗುತ್ತಾನೆ. ಎರಡನೇ ಬಾರಿ ಹಲ್ಲೆ ನಡೆಸುವಾಗ ಪಕ್ಕದಲ್ಲಿದ್ದ ವ್ಯಕ್ತಿ ಆತನನ್ನು ತಡೆಯುತ್ತಾನೆ. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ (Mico Layout Police Station) ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಕಿಶೋರ್ ಕುಮಾರ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ಧಾರೆ.
ಅತ್ಯಾಚಾರಕ್ಕೆ ಯತ್ನಿಸಿದ ಘಟನೆ:
ಕ್ರೈಮ್ ಸಿಟಿಯಾಗಿ ಮಾರ್ಪಾಡುಗೊಂಡಿರುವ ಬೆಂಗಳೂರಿನಲ್ಲಿ ಇಂಥ ಹಲವು ಘಟನೆಗಳು ಸಿಸಿಟಿವಿಗಳಲ್ಲಿ ಸೆರೆಯಾದ ನಿದರ್ಶನಗಳಿವೆ. ಪುಡಿರೌಡಿಗಳು ಕತ್ತಿ, ಮಚ್ಚುಗಳನ್ನಿಡಿದು ರಸ್ತೆಗಳಲ್ಲಿ ಅಟ್ಟಹಾಸ ಮೆರೆಯುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಕಳೆದ ವರ್ಷ ಜೆಸಿ ನಗರದಲ್ಲಿ ಯುವಕನೊಬ್ಬ 40 ವರ್ಷದ ಮಹಿಳೆ ಮೇಲೆ ಲೈಂಗಿಕ ಹಲ್ಲೆ ನಡೆಸಲು ಪ್ರಯತ್ನಿಸಿದ ದೃಶ್ಯವೂ ಸಿಸಿಟಿವಿ ಮೂಲಕ ಬಹಿರಂಗವಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ನಡೆದ ಆ ಘಟನೆಯಲ್ಲಿ ಮಹಿಳೆ ಡಿ ಜೆ ಹಳ್ಳಿ ಸಮೀಪ ಗಲ್ಲಿಯಲ್ಲಿ ನಡೆದು ಹೋಗುತ್ತಿದ್ದಾಗ ತತಾ ದತ್ ಎಂಬ ಆರೋಪಿ ಅಲ್ಲಿಗೆ ಬಂದು ಆಕೆಯನ್ನು ತಡೆಯುತ್ತಾನೆ. ನಂತರ ಪ್ಯಾಂಟ್ ಬಿಚ್ಚುತ್ತಾನೆ. ಮಹಿಳೆ ಅಲ್ಲಿಂದ ಹೋಗಲು ಪ್ರಯತ್ನಿಸಿದರೂ ಮತ್ತೆ ತಡೆಯುತ್ತಾನೆ. ಆಕೆ ಚಪ್ಪಲಿಯಿಂದ ಹೊಡೆಯಲು ಮುಂದಾಗುತ್ತಾಳೆ. ಆಗ ಆರೋಪಿಯು ಆಕೆಯನ್ನ ಗೋಡೆಗೆ ಒರಗಿಸಿ ಬಟ್ಟೆ ಬಿಚ್ಚಲು ಯತ್ನಿಸುತ್ತಾನೆ. ಆಗ ಮಹಿಳೆ ಕಿರುಚತೊಡಗುತ್ತಾಳೆ. ಬೆಳಗಿನ ಜಾವ 5 ಗಂಟೆಗೆ ಈ ಘಟನೆ ನಡೆದಿದೆ. ಮಹಿಳೆಯ ಕಿರುಚಾಟ ಕೇಳಿ ಅಲ್ಲಿನ ಮನೆಗಳವರು ಬಾಗಿಲು ತೆರೆದು ಧಾವಿಸಿ ಬರುತ್ತಾರೆ. ಆಗ ಆರೋಪಿ ಪರಾರಿಯಾಗುತ್ತಾನೆ.
ಪೊಲೀಸರು ಕ್ಷಿಪ್ರವಾಗಿ ಕಾರ್ಯಾಚರಣೆಗೆ ಇಳಿದು ಅಪರಾಧ ನಡೆದ ಒಂದೇ ಗಂಟೆಯಲ್ಲಿ ಆರೋಪಿಯನ್ನ ಹಿಡಿದು ಜೈಲಿಗೆ ಅಟ್ಟುತ್ತಾರೆ. ಆರೋಪಿಯ ಆ ಹೊತ್ತಿನ ಚಲನವಲನಗಳು ಆ ಪ್ರದೇಶದ ವಿವಿಧ ಸ್ಥಳಗಳಲ್ಲಿದ್ದ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದವು. ಆತನೇ ಆ ಕೃತ್ಯ ಎಸಗಿದ್ದಕ್ಕೆ ಸ್ಪಷ್ಟ ಸಾಕ್ಷ್ಯಗಳಿದ್ದವು. ಪೊಲೀಸರು ಆರೋಪಿ ತತಾ ದತ್ನನ್ನು ಬಂಧಿಸುತ್ತಾರೆ.
ಎಟಿಎಂ ಹಲ್ಲೆ ಘಟನೆ:
ಬೆಂಗಳೂರಿನಲ್ಲಿ ಹಲ್ಲೆ ಘಟನೆ ದೇಶಾದ್ಯಂತ ಸದ್ದು ಮಾಡಿದ್ದು ಎಂದರೆ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ನಡೆದಿದ್ದ ಘಟನೆ. ಎಂಟು ವರ್ಷಗಳ ಹಿಂದೆ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಅವರು ಬೆಳಗ್ಗೆ ಜಾವ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದಾಗ ವ್ಯಕ್ತಿಯೊಬ್ಬ ಅಲ್ಲಿಗೆ ಬಂದು ಹಣ ವಸೂಲಿಗೆ ಮುಂದಾಗುತ್ತಾನೆ. ಈ ವೇಳೆ ಜ್ಯೊತಿ ಅವರ ಮೇಲೆ ಆತ ಮಚ್ಚಿನಿಂದ ಹಲವು ಬಾರಿ ಹಲ್ಲೆ ಮಾಡಿ ಹಣ, ಎಟಿಎಂ ಕಿತ್ತುಕೊಂಡು ನಿರ್ಭೀತಿಯಿಂದ ಕಾಲ್ಕೀಳುತ್ತಾನೆ. ಜ್ಯೋತಿ ಅವರು ಗಂಭೀರವಾಗಿ ಗಾಯಗೊಂಡು ಮತ್ತೆ ಚೇತರಿಸಿಕೊಳ್ಳಲು ಕೆಲ ವರ್ಷಗಳೇ ಹಿಡಿಯುತ್ತವೆ. ನಾಲ್ಕು ವರ್ಷಗಳ ಬಳಿಕ ಆರೋಪಿಯು ಪೊಲೀಸರ ಕೈಗೆ ಸಿಕ್ಕಿಬೀಳುತ್ತಾನೆ.