ಬೆಂಗಳೂರು: ಕಲಬುರಗಿ ಪಾಲಿಕೆ ಗದ್ದುಗೆ ಗುದ್ದಾಟ ಸಂಬಂಧ ಪ್ರತಿಕ್ರಿಯಿಸಿದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ 27 ಸ್ಥಾನ ಗೆದ್ದಿದೆ. ಬಿಜೆಪಿಯವರು ಅವರು 23 ಗೆದ್ದಿದ್ದಾರೆ, ಅವರು ಬೇರೆ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಜೊತೆ ನಾನು ಮಾತನಾಡಿದ್ದೇನೆ. ಜಾತ್ಯಾತೀತ ಪಕ್ಷಕ್ಕೆ ಬೆಂಬಲ ಕೊಡಿ ಎಂದಿದ್ದೇನೆ. ಅವರು ತಮ್ಮ ಪಕ್ಷದ ನಾಯಕರ ಜೊತೆ ಮಾತನಾಡ್ತೇನೆ ಎಂದಿದ್ದಾರೆ. ನಮಗೆ ದೇವೇಗೌಡರು ಸಹಾಯ ಮಾಡ್ತಾರೆ ಎಂದು ವಿಶ್ವಾಸವಿದೆ. ಸೆಕ್ಯುಲರ್ ಪಾರ್ಟಿಗಳು ಒಂದಾಗಬೇಕು ಅಂತ ಕೇಳಿದ್ದೇನೆ ಎಂದು ತಿಳಿಸಿದರು.
ಬಿಜೆಪಿಗೆ ಜನ ಬೆಂಬಲವಿಲ್ಲ
ಜೆಡಿಎಸ್ಗೆ ಮೇಯರ್ ಸ್ಥಾನ ಕೊಡಬೇಕೆಂಬ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ ನೊಡೋಣ. ಕಲಬುರಗಿಯಲ್ಲಿ ಬಿಜೆಪಿ ವಿರುದ್ಧ ಜನರ ಮತದಾನವಿದೆ. ಜಾತ್ಯಾತೀತ ಮನೋಭಾವ ಹೊಂದಿರುವ ಕಾಂಗ್ರೆಸ್ ಹಾಗು ಜೆಡಿಎಸ್ ಗೆ ಪಾಲಿಕೆಯಲ್ಲಿ ಅಧಿಕಾರ ನಡೆಸಲು ಜನರು ಬೆಂಬಲಿಸಿದ್ದಾರೆ. ಬಿಜೆಪಿಗೆ ಜನ ಬೆಂಬಲವಿಲ್ಲ, ಬಿಜೆಪಿಯು ಎಂಪಿ, ಎಂಎಲ್ ಸಿ ಮತಗಳನ್ನ ಪಡೆದು ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಹೊರಟಿದೆ. ಇದು ಜನರ ತೀರ್ಮಾನದ ವಿರುದ್ಧ ಎಂದು ಕಿಡಿ ಕಾರಿದರು. ದೇವೇಗೌಡರು ಹಿರಿಯರು, ಹಿರಿಯರು ಒಂದು ಮಾತು ಹೇಳಿರುವಾಗ ಏನಾಗುತ್ತೆ ಕಾದು ನೋಡ್ತೇನೆ ಎಂದರು.
ನಮ್ಮಲ್ಲಿ ಯಾವುದೇ ಜಗಳ ಇಲ್ಲ
ಇನ್ನು ಪಾಲಿಕೆ ಚುನಾವಣೆಯಲ್ಲಿ ಹಿನ್ನಡೆಗೆ ಕಾಂಗ್ರೆಸ್- ಜೆಡಿಎಸ್ ನಾಯಕರ ಕೋಲ್ಡ್ ವಾರ್ ಕಾರಣ ಎಂಬ ವಿಚಾರವನ್ನು ಖರ್ಗೆ ಅಲ್ಲಗಳೆದರು. ನಮ್ಮಲ್ಲಿ ಒಡಕು ಮೂಡಿಸುವ ಕೆಲಸ ಬೇಡ, ನಾವು ಸಿದ್ಧಾಂತದ ಮೇಲೆ ಬಂದವರು. ಹಾಗಾಗಿಯೇ ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು. ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಕೈಜೋಡಿಸಿದ್ದು, ಸೈದ್ಧಾಂತಿಕ ತಳಹದಿಯ ಮೇಲೆ ನಿಂತವರು ನಾವು. ನಮ್ಮಲ್ಲಿ ಯಾವುದೇ ಜಗಳವೂ ಇಲ್ಲ ಏನೂ ಇಲ್ಲ. ನಮ್ಮಲ್ಲಿ ಒಡಕು ಮೂಡಿಸಬೇಡಿ ಎಂದರು.
ಇದನ್ನೂ ಓದಿ: ಶಾಸಕ ಅಭಯ ಪಾಟೀಲ್ ಗೆ ಸಿಎಂ ಬುಲಾವ್; ಪಾಲಿಕೆ ಸೋಲಿಗೆ ಗುಂಪುಗಾರಿಕೆ ಕಾರಣ ಎಂದ ಸತೀಶ ಜಾರಕಿಹೊಳಿ
ತೆರಿಗೆ ಹೆಸರಲ್ಲಿ ಕೇಂದ್ರದಿಂದ ಸುಲಿಗೆ
ತೈಲ ಬೆಲೆ ಏರಿಕೆ ವಿಚಾರವಾಗಿ ಸಂಸತ್ ನಲ್ಲೂ ಧ್ವನಿ ಎತ್ತಿದ್ದೇವೆ. ನಮ್ಮ ಧ್ವನಿಗೆ ಸಹಾಯ ಮಾಡುವವರು ಕಡಿಮೆ. ಪ್ರಧಾನಿ ಮೋದಿ ಎಲ್ಲರಿಗೆ ಹೆದರಿಸುತ್ತಿದ್ದಾರೆ, ಮಾಧ್ಯಮದವರನ್ನು ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದರು. ಪೆಟ್ರೋಲ್,ಡಿಸೇಲ್ ರೇಟ್ ಹೆಚ್ಚಾಗ್ತಿದೆ. ಆಯಿಲ್ ಬಾಂಡ್ ಎಷ್ಟು ಕೋಟಿಗೆ ತೆಗೆದುಕೊಂಡಿದ್ದು ಕೇಂದ್ರ ಹೇಳಲಿ. 1.34 ಲಕ್ಷ ಕೋಟಿ ಬಾಂಡ್, ಇಲ್ಲಿಯ ವರೆಗೆ ಪೆಟ್ರೋಲ್ ಡಿಸೇಲ್ ನಿಂದ ವಸೂಲಿ ಮಾಡಿರುವ ತೆರಿಗೆ 24 ಲಕ್ಷ ಕೋಟಿ. 1.34 ಲಕ್ಷ ಕೋಟಿ ಆಯಿಲ್ ಬಾಂಡ್ ಸಾಲದ ಹೆಸರು ಹೇಳಿ 24 ಲಕ್ಷ ಕೋಟಿ ತೆರಿಗೆ ವಸೂಲಿ ಮಾಡಿದ್ದೀರಲ್ಲ, ಇದಕ್ಕಿಂತ ಸುಲಿಗೆ ಬೇಕಾ ಎಂದು ಖರ್ಗೆ ಕೇಂದ್ರವನ್ನು ಪ್ರಶ್ನಿಸಿದರು.
ಮೋದಿ ಕೊಟ್ಟ ಮಾತನ್ನು ಮರೆತಿದ್ದಾರೆ
ಅಚ್ಚೇ ದಿನ ಆಯೇಂಗೆ ಅನ್ನುತ್ತಿದ್ದರು. ಒಂದು ಕಡೆ ರೈತರ ಕಾನೂನು ಹಿಂಪಡೆಯಲಿಲ್ಲ, ಬಾರ್ಡರ್ ನಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿದ್ರು. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದರು, ಜನರಿಗೆ ಉತ್ತಮ ಆಶ್ವಾಸನೆ ಕೊಟ್ಟರು. ಯುವಕರನ್ನ ಆನೇಕ ಬಾರಿ ಪುಸಲಾಯಿಸಿದ್ರು ಆದರೆ ಅವರು ಮಾಡ್ತಿರೋದೇನು. ಜನರನ್ನ ಸಮಸ್ಯೆಗೆ ದೂಡಿದ್ದಾರೆ. ರಾಜ್ಯಸಭೆಯಲ್ಲಿ ೧೫ ಮೀಟಿಂಗ್ ನಡೆಸಿದ್ದೆ. ಸಂಸತ್ ನಲ್ಲಿ ಧ್ವನಿಎತ್ತುವ ಬಗ್ಗೆ ಮೀಟಿಂಗ್ ಮಾಡಿದ್ದೆ ಎಂದು ಅಸಮಾಧಾನ ಹೊರ ಹಾಕಿದರು. ಮಾಧ್ಯಮಗಳನ್ನು ಬಿಜೆಪಿ ಸರ್ಕಾರ ಹೆಸರಿಸಿದೆ, ಹಲವು ಮಾಧ್ಯಮಗಳು ನಾನು ಮಾತನಾಡುವುದನ್ನು ಪ್ರಸಾರ ಮಾಡಲು, ನಮ್ಮ ಹೇಳಿಕೆಯನ್ನು ಪ್ರಕಟಿಸಲ್ಲ ಎಂದು ದೂರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ