ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Benglauru) ಜನಸಂಖ್ಯೆ (Population) ಮಿತಿ ಮೀರುತ್ತಿರೋದು ನಿಮಗೆಲ್ಲ ಗೊತ್ತೇ ಇದೆ. ಬೇರೆ ಬೇರೆ ಜಿಲ್ಲೆಗಳಿಂದ ಅಷ್ಟೇ ಅಲ್ಲ, ಬೇರೆ ಬೇರೆ ರಾಜ್ಯಗಳಿಂದಲೂ ಜನರು ಇಲ್ಲಿ ಬಂದು ನೆಲೆಸಿದ್ದಾರೆ. ಹೀಗೆ ಬಂದವರು ಕೆಲವರು ನೌಕರಿ (Jobs) ಮಾಡ್ತಾರೆ, ಇನ್ನು ಕೆಲವರು ಕೂಲಿ ಮಾಡ್ತಾರೆ. ಆದ್ರೆ ಹೀಗೆ ಜನ ಬರುತ್ತಿದ್ದರೆ ಇಲ್ಲಿ ಉಳಿದುಕೊಳ್ಳುವುದಕ್ಕೆ ಜಾಗ ಎಲ್ಲಿ ಸಿಗಬೇಕು ಹೇಳಿ? ಬದುಕುವವರ ಮಾತು ಆಮೇಲೆ ಸತ್ತವರಿಗೂ ಆರು ಅಡಿ, ಮೂರು ಅಡಿ ಜಾಗ ಸಿಗೋದು ಕಷ್ಟದ ಮಾತು ಅಂದ್ರೆ ನೀವು ನಂಬುತ್ತೀರಾ? ಇದು ವಿಚಿತ್ರ ಆದರೂ ಸತ್ಯ ಕಣ್ರೀ. ಬೆಂಗಳೂರಲ್ಲಿ ಇದ್ದವರಿಗೆ ನೆಮ್ಮದಿ ಇದೆಯೋ ಗೊತ್ತಿಲ್ಲ, ಆದರೆ ಸತ್ತವರಿಗೆ ಮಾತ್ರ ನೆಮ್ಮದಿ ಇಲ್ಲ ಅನ್ನೋದು ಈಗ ಗೊತ್ತಾಗುತ್ತಿದೆ. ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಇಂತಹ ವಿಚಿತ್ರ ಘಟನೆಯೊಂದು ನಡೆದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ಲಾನಿಂಗ್ನ (Planning) ವಿಫಲತೆಯೋ ಏನೋ ಗೊತ್ತಿಲ್ಲ. ಇಲ್ಲಿ ವ್ಯಕ್ತಿಯೊಬ್ಬರ ಶವ (Dead Body) ಸಂಸ್ಕಾರಕ್ಕೂ ಜಾಗ ಸಿಗದೇ, ಅವರ ಕುಟುಂಬಸ್ಥರು ‘ಹೆಣ’ಗಾಡುವಂತಾಗಿದೆ.
ಮನೆ ಮುಂದೆಯೇ ವೃದ್ಧೆಯ ಶವ ಸಂಸ್ಕಾರ!
ಹೌದು, ಬೆಂಗಳೂರಿನ ಪುಟ್ಟೇನಹಳ್ಳಿ ಬಳಿ ಇಂಥದ್ದೊಂದು ಘಟನೆ ನಡೆದಿದೆ. ಬೊಮ್ಮನಹಳ್ಳಿ ವಲಯದ, ಪುಟ್ಟೇನಹಳ್ಳಿ ವಾರ್ಡ್ನ ಪಾಂಡುರಂಗ ನಗರದಲ್ಲಿ 80 ವರ್ಷದ ವೃದ್ಧ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಆದರೆ ಕುಟುಂಬಸ್ಥರು ವೃದ್ಧೆಯ ಶವವನ್ನು ಚಿತಾಗಾರಕ್ಕೆ ತೆಗೆದುಕೊಂಡು ಹೋಗಲಿಲ್ಲ. ಬದಲಾಗಿ ತಮ್ಮದೇ ಮನೆಯ ಹಿಂಭಾಗದಲ್ಲಿ ಶವ ಸಂಸ್ಕಾರ ಮಾಡಿದ್ದಾರೆ.
ಜನ ವಸತಿ ಪ್ರದೇಶದಲ್ಲಿ ಶವ ಸಂಸ್ಕಾರಕ್ಕೆ ಭಾರೀ ವಿರೋಧ
ವೃದ್ಧೆಯ ಮನೆ ಬಳಿಯೇ ಶವವನ್ನು ಹೂಳುವ ಕಾರ್ಯ ನಡೆಸಿದ್ದರೆ. ಇದಕ್ಕೆ ಅಕ್ಕ ಪಕ್ಕದ ಮನೆ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಶವ ಸಂಸ್ಕಾರ ಮಾಡಿರುವ ಜಾಗದ ಪಕ್ಕದಲ್ಲಿಯೇ ಮನೆಗಳು, ಅಪಾರ್ಟ್ಮೆಂಟ್ ಇದೆ. ಹೀಗಾಗಿ ಇಲ್ಲಿ ಶವ ಸಂಸ್ಕಾರ ಮಾಡಬೇಡಿ ಎಂದಿದ್ದಾರೆ. ಶವವನ್ನು ಚಿತಾಗಾರಕ್ಕೆ ಕೊಂಡೊಯ್ಯುವಂತೆ ಪಟ್ಟು ಹಿಡಿದಿದ್ದಾರೆ.
ಮನೆ ಮಳಿಯೇ ವೃದ್ಧೆಯ ಶವ ಹೂಳುತ್ತಿರುವುದಕ್ಕೆ ಸ್ಥಳೀಯರೆಲ್ಲ ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲಿ ಜನರು ವಾಸಿಸುತ್ತಾರೆ. ಹೀಗಾಗಿ ಬೇರೆ ಕಡೆ ಶವ ತೆಗೆದುಕೊಂಡು ಹೋಗಿ ಅಂತ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಮೃತಳ ಕುಟುಂಬಸ್ಥರೂ ಸಹ ತಕರಾರು ಮಾಡಿದ್ದಾರೆ. ಸ್ಥಳೀಯರ ಜೊತೆಯೇ ವಾಗ್ವಾದ ನಡೆಸಿದ್ದಾರೆ. ಗುಂಡಿಯಲ್ಲಿ ಶವಕ್ಕೆ ಪೂಜೆ ಮಾಡಿ, ಮಣ್ಣು ಮುಚ್ಚೋಕೆ ಸಿದ್ಧತೆ ನಡೆಯುತ್ತಿದ್ದಂತೆ ಶವ ಹೊರ ತೆಗೆಯಿರಿ ಎಂದು ಅಕ್ಕಪಕ್ಕದ ಜನರು, ಅಪಾರ್ಟ್ಮೆಂಟ್ ನಿವಾಸಿಗಳು ಬಿಗಿಪಟ್ಟು ಹಿಡಿದಿದ್ದಾರೆ. ಈ ವೇಳೆ ಮೃತ ವೃದ್ಧೆಯ ಕುಟುಂಬಸ್ಥರು ಸ್ಥಳೀಯರಿಗೆ ಕಲ್ಲಿನಿಂದಲೂ ಹೊಡೆದಿದ್ದಾರೆ ಎನ್ನಲಾಗುತ್ತಿದೆ.
ಶವ ಸಂಸ್ಕಾರ ವಿಚಾರದಲ್ಲಿ ನಿಯಮ ಉಲ್ಲಂಘನೆ
ಜನವಸತಿ ಪ್ರದೇಶಗಳಲ್ಲಿ ಮೃತರ ಅಂತ್ಯ ಸಂಸ್ಕಾರ ಮಾಡುವ ಹಾಗಿಲ್ಲ ಎಂಬ ನಿಯಮವಿದೆ. ಸ್ವಂತ ಜಾಗವಿದ್ರೆ, ಭೂ ಮಾಲೀಕನ ಜಾಗದಲ್ಲಿಯೇ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕೊಟ್ರೂ, ಅಕ್ಕಪಕ್ಕದ ಮನೆಯವರ ಅನುಮತಿ ಅನಿವಾರ್ಯವಾಗಿದೆ. ಆದರೆ ಇಲ್ಲಿ ನಿಯಮ ಉಲ್ಲಂಘಿಸಲಾಗಿತ್ತು.
ಬಿಬಿಎಂಪಿ, ಪೊಲೀಸರ ವಿರುದ್ಧ ಆಕ್ರೋಶ
ಅಕ್ಕಪಕ್ಕದ ಮನೆಯವ್ರು ಅಂತ್ಯ ಸಂಸ್ಕಾರಕ್ಕೆ ಇಲ್ಲಿ ಬೇಡ ಎಂದ ಮೇಲೆಯೂ, ಪೊಲೀಸರ ಭದ್ರತೆಯಲ್ಲಿ ಅಂತ್ಯ ಸಂಸ್ಕಾರಕ್ಕೆ ಮುಂದಾದ್ರು. ಆಗ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ರು. ಸ್ವಂತ ಜಾಗದಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ಕೊಡೋದಾದ್ರೆ, ನಮ್ಮ ಸ್ವಂತ ಜಾಗಗಳಲ್ಲಿ ಬಾಂಬ್ ಕೂಡ ತಯಾರಿಸಬಹುದಾ? ಅಂತ ಪ್ರಶ್ನಿಸಿದ್ರು. ಕೊರೋನಾ 2ನೇ ಅಲೆಯ ಸಮಯದಲ್ಲಿ , ಕೋವಿಡ್, ನಾನ್ ಕೋವಿಡ್ ನಿಂದ ಮೃತಪಟ್ಟವರನ್ನ ಸ್ವಂತ ಜಾಗಗಳಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ನೀಡಿಲ್ಲ ಯಾಕೆ ಅಂತ ಸ್ಥಳೀಯರು ಕಿಡಿಕಾರಿದ್ರು.
ಶವ ಹೂಳುವ ಕುರಿತಂತೆ ಉಂಟಾದ ಘರ್ಷಣೆ ವಿಚಾರ ಸ್ಥಳೀಯ ಬಿಬಿಎಂಪಿ ಕಚೇರಿಗೆ ಮುಟ್ಟಿದೆ. ಕೂಡಲೇ ಬಿಬಿಎಂಪಿ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಬಂದಿದ್ದಾರೆ. ಇದು ಜನವಸತಿ ಪ್ರದೇಶ. ಹೀಗಾಗಿ ಇಲ್ಲಿ ಶವಸಂಸ್ಕಾರ ಮಾಡಬಾರದು ಅಂತ ತಿಳಿ ಹೇಳಿದ್ದಾರೆ ಹೆಚ್ಚಿನ ಘರ್ಷಣೆ ನಡೆಯದಂತೆ ಪೊಲೀಸರು ಸಹ ಧಾವಿಸಿದ್ದಾರೆ. ಕೊನೆಗೆ ಬಿಬಿಎಂಪಿ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳೀಯ ನಿವಾಸಿಗಳನ್ನ ಮನವೊಲಿಸಿ ಅಂತ್ಯ ಸಂಸ್ಕಾರ ಪೂರ್ತಿ ಮಾಡಲಾಗಿದೆ.