Namma Metro- ತುಮಕೂರು ರಸ್ತೆಯಲ್ಲಿ ಮೆಟ್ರೋ ಫ್ಲೈಓವರ್ ಹತ್ತಿ ಜನರ ಪ್ರತಿಭಟನೆ; ಕಾರಣ ಇದು

ನಾಗಸಂದ್ರದಿಂದ ಕೇವಲ 1 ಕಿಮೀ ದೂರದಲ್ಲಿರುವ ಸ್ಥಳದಲ್ಲಿ ಮೆಟ್ರೋ ನಿಲ್ದಾಣ ನಿರ್ಮಿಸುವ ನಿರ್ಧಾರದ ಹಿಂದೆ ಭ್ರಷ್ಟಾಚಾರ ಇದೆ ಎಂದು ಆರೋಪಿಸಿರುವ ಜನರು, ಅಂಚೆಪಾಳ್ಯದಲ್ಲಿ ನಿಲ್ದಾಣ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಅಂಚೆಪಾಳ್ಯ ಬಳಿ ಮೆಟ್ರೋ ಫ್ಲೈ ಓವರ್ ಮೇಲೆ ಹತ್ತಿ ಜನರ ಪ್ರತಿಭಟನೆ

ಅಂಚೆಪಾಳ್ಯ ಬಳಿ ಮೆಟ್ರೋ ಫ್ಲೈ ಓವರ್ ಮೇಲೆ ಹತ್ತಿ ಜನರ ಪ್ರತಿಭಟನೆ

  • Share this:
ಬೆಂಗಳೂರು: ತುಮಕೂರು ರಸ್ತೆಯ ಶ್ರೀಕಂಠಪುರ ಅಂಚೆಪಾಳ್ಯದಲ್ಲಿ ಮೆಟ್ರೋ ರೈಲು ನಿಲ್ದಾಣ ನಿರ್ಮಿಸಬೇಕೆಂದು ಆಗ್ರಹಿಸಿ ಶ್ರೀಕಂಠಪುರ ಮೆಟ್ರೋ ರೈಲು ಹೋರಾಟ ಸಮಿತಿ ನೇತೃತ್ವದಲ್ಲಿ ಸ್ಥಳೀಯ ನಾಗರಿಕರು ಶನಿವಾರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಮೆಟ್ರೋ ಫ್ಲೈ ಓವರ್ ಏರಿ ಹಳಿ ಮೇಲೆ ಕಪ್ಪು ಪಟ್ಟಿ ಧರಿಸಿ ವಿನೂತನ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಮೆಟ್ರೋ ಫ್ಲೈ ಓವರ್ ಕೆಳಗಡೆ ಪ್ರತಿಭಟನೆಗೆ ಮಾದನಾಯಕನ ಹಳ್ಳಿ ಪೊಲೀಸರು ಅನುಮತಿ ನೀಡಿದ್ದರು. ಆದರೆ ಪ್ರತಿಭಟನೆಗೆ ನೂರಾರು ಜನ ಜಮಾವಣೆಗೊಂಡ ಸಂದರ್ಭದಲ್ಲಿ ಬೆಂಗಳೂರು- ತುಮಕೂರು ಹೆದ್ದಾರಿಯಲ್ಲಿ ಒಂದೆರಡು ಗಂಟೆ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಸಮಯದಲ್ಲಿ ಕೆಲ ಯುವಕರು ಪೊಲೀಸರ ಕಣ್ತಪ್ಪಿಸಿ ಪಿಲ್ಲರ್ ಮೂಲಕ ಫ್ಲೈ ಓವರ್ ಏರಿ ಅಲ್ಲಿ ಪ್ರತಿಭಟನೆಗೆ ಮುಂದಾದರು.

ಮೆಟ್ರೋ ಹಸಿರು ಮಾರ್ಗ ಫೇಸ್2 ರ ಕಾಮಗಾರಿ ನಡೆಯುತ್ತಿದ್ದು, ಬೆಂಗಳೂರು ಉತ್ತರ ತಾಲ್ಲೂಕಿನ ಅಂಚೆಪಾಳ್ಯ ಬಳಿ ನಿಲ್ದಾಣ ನಿರ್ಮಿಸದೆ ಬಿಎಂಆರ್​ಸಿಎಲ್ ಕಾಮಗಾರಿ ಮುಂದುವರೆಸಿದೆ. ಕೇಳಿದರೆ, ಇಲ್ಲಿ ನಿಲ್ದಾಣ ಗುರುತಿಸಲಾಗಿಲ್ಲ ಎಂದು ಹೇಳುತ್ತಿದೆ. ಇಲ್ಲಿ ನಿಲ್ದಾಣ ಮಾಡದೆ ಇದ್ದರೆ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಅಂಚೆ ಪಾಳ್ಯ ಗ್ರಾಮಸ್ಥರು ಕಳೆದ ಕೆಲವು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮೆಟ್ರೋ ಕಾಮಗಾರಿ ಶುರುವಾದಾಗಿನಿಂದಲೂ ಶ್ರೀಕಂಠಪುರದಲ್ಲಿ ನಿಲ್ದಾಣ ಮಾಡಲೇ ಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಾ ಬಂದಿದ್ದಾರೆ. ಆದರೆ ಬಿಎಂಆರ್​ಸಿಎಲ್ ಅವರು ಪ್ರೆಸ್ಟೀಜ್ ಜಿಂದಾಲ್ ಅವರಿಂದ ಲಂಚ ಪಡೆದು ಅವರ ಅಪಾರ್ಟ್ ಮೆಂಟ್ ಬಳಿ ಮೆಟ್ರೋ ನಿಲ್ದಾಣ ಮಾಡುತ್ತಿದ್ದಾರೆ ಎಂಬ ಆರೋಪ ಇದೆ.

ಮೊದಲಿಗೆ ಅಂಚೆಪಾಳ್ಯದಲ್ಲಿ ನಿಲ್ದಾಣ ಗುರುತಿಸಲಾಗಿತ್ತು. ಆದರೆ ಚಿತಾವಣೆ ನಡೆದು ಬದಲಿಸಲಾಗಿದೆ. ನಾಗಸಂದ್ರ ನಿಲ್ದಾಣದಿಂದ ಈಗ ಗುರುತಿಸಿರುವ ಸ್ಟೇಷನ್ ಕೇವಲ ಒಂದು ಕಿಮೀ ಇದೆ. ಅದನ್ನು ನಿರ್ಮಿಸುವುದರ ಹಿಂದೆ ಭ್ರಷ್ಟಾಚಾರ ನಡೆದಿದೆ ಎಂಬುದು ಕಣ್ಣಿಗೆ ರಾಚುತ್ತದೆ. ಹಳೆಯ ಗ್ರಾಮವಾದ ಅಂಚೆಪಾಳ್ಯದಲ್ಲಿ ನಿಲ್ದಾಣ ನಿರ್ಮಿಸಿದರೆ ಹತ್ತಾರು ಬಡಾವಣೆಗಳ ಸಾವಿರಾರು ನಾಗರಿಕರಿಗೆ, ನೈಸ್ ರಸ್ತೆ ಕಡೆ ಹೋಗುವವರಿಗೆಲ್ಲಾ ಅನುಕೂಲವಾಗಲಿದೆ. ಆದ್ದರಿಂದ ಅಂಚೆಪಾಳ್ಯದಲ್ಲೇ ನಿಲ್ದಾಣ ನಿರ್ಮಿಸಬೇಕೆಂದು ಮುಷ್ಕರ ನಿರತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Afghanistan Crisis: ಅತಿದೊಡ್ಡ ಯುದ್ಧತಂತ್ರದ ತಪ್ಪು ಮಾಡಿದ ಜೋ ಬಿಡೆನ್: ಟ್ರಂಪ್

ಬಿಎಂಆರ್​ಸಿಎಲ್ ಅಂಚೆಪಾಳ್ಯದಲ್ಲಿ ಮೆಟ್ರೋ ನಿಲ್ದಾಣ ನಿರ್ಮಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಫ್ಲೈ ಓವರ್ ಮೇಲೆ ಪ್ರತಿಭಟನೆ ನಡೆಸುತ್ತಿದ್ದ ಯುವಕರನ್ನು ಪೊಲೀಸರು ಮನವೊಲಿಸಿ ಕೆಳಗಿಳಿಸಲು ಪ್ರಯತ್ನಪಟ್ಟರು ಪ್ರತಿಭಟನಾಕಾರರು ಬಿಎಂಆರ್​ಸಿಎಲ್ ಎಂಡಿ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವವರೆಗೂ ಕೆಳಗಿಳಿಯುವುದಿಲ್ಲ ಎಂದು ಪಟ್ಟು ಹಿಡಿದರು. ಅಲ್ಲದೆ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ4 ರಲ್ಲಿ ವಾಹನಗಳು ಕಿಮೀ ಗಟ್ಟಲೆ ಜಮಾಯಿಸಿ ಸಂಚಾರ ಸ್ಥಗಿತಗೊಂಡಿದ್ದು ವಾಹನ ಸವಾರರು ಪರದಾಡಿದರು. ಕೊನೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿಎಂಆರ್​ಸಿಎಲ್ ಅಧಿಕಾರಿ ಪ್ರತಿಭಟನಾ ನಿರತರ ಮನವೊಲಿಸುವ ಪ್ರಯತ್ನ ಮಾಡಿದರು. ಈ ಸಮಯದಲ್ಲಿ ಮಾತನಾಡಿದ ಅವರು, ಈ ತಿಂಗಳ 25ನೇ ತಾರೀಖು ಬುಧವಾರದಂದು ನಮ್ಮ ಎಂಡಿ ಅವರ ಜೊತೆ ಮಾತುಕತೆ ನಡೆಯಲಿದ್ದು ಅಂದು ವರ್ಷಗಳಿಂದ ತಲೆದೋರಿದ್ದ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಅಭಿಷೇಕ್ ಚಿಕ್ಕಮಾರನಹಳ್ಳಿ
Published by:Vijayasarthy SN
First published: