ಬೆಂಗಳೂರು(ಮೇ1): ಕರ್ನಾಟಕದಲ್ಲಿ ಜನತಾ ಕರ್ಫ್ಯೂ ನಾಲ್ಕನೇ ದಿನವಾದ ಇಂದು ಕೂಡಾ ಮುಂದುವರೆದಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಾರ್ಮಿಕರ ವಲಸೆಯೂ ನಿರಂತರವಾಗಿ ಮುಂದುವರೆದಿದೆ. 14 ದಿನಗಳ ಕರ್ಫ್ಯೂ ಘೋಷಣೆಯಾದಾಗಿನಿಂದ ನಿರಂತರವಾಗಿ ವಲಸೆ ಪರ್ವ ನಡೆಯುತ್ತಿದೆ.
ಬೆಂಗಳೂರಿನ ಮೆಜೆಸ್ಟಿಕ್ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಮುಂಜಾನೆಯೇ ಅನೇಕ ಕಾರ್ಮಿಕರು ತಂತಮ್ಮ ಊರುಗಳಿಗೆ ಹೋಗಲು ಜಮಾಯಿಸಿದ್ದಾರೆ. ಬೆಳಗ್ಗೆ 9 ಮತ್ತು 9.30ರ ರೈಲಿನಲ್ಲಿ ತಂತಮ್ಮ ಊರುಗಳಿಗೆ ಹೋಗಲು ಕಾರ್ಮಿಕರು ಮುಂಜಾನೆಯೇ ಬಂದು ಕಾಯುತ್ತಿದ್ದಾರೆ. ಬಸ್ ಗಳಿಲ್ಲದ ಹಿನ್ನಲೆಯಲ್ಲಿ ಬೆಳಿಗ್ಗೆಯೇ ಕ್ಯಾಬ್ ಗಳಲ್ಲಿ ರೈಲ್ವೇ ನಿಲ್ದಾಣಕ್ಕೆ ಕಾರ್ಮಿಕರು ಆಗಮಿಸುತ್ತಿದ್ದು, ಎಲ್ಲರೂ ಗಂಟು ಮೂಟೆ ಸಮೇತ ತಮ್ಮ ಊರುಗಳತ್ತ ಹೊರಟು ನಿಂತಿದ್ದಾರೆ.
ಕೆಲವರು ಬಸ್ ಗಳಿಲ್ಲದೆ ಇರೋದ್ರಿಂದ ಮೂರು ನಾಲ್ಕು ದಿನದ ಹಿಂದೆಯೇ ಬಂದು ರೈಲ್ವೇ ನಿಲ್ದಾಣದಲ್ಲಿ ಠಿಕಾಣಿ ಹೂಡಿದ್ದಾರೆ. ಹೆಚ್ಚಿನ ಕಾರ್ಮಿಕರು ಬಿಹಾರ,ಪಶ್ವಿಮ ಬಂಗಾಳ, ಮಣಿಪುರ, ಉತ್ತರಪ್ರದೇಶದ, ರಾಜಸ್ತಾನದ ಕಡೆ ಪ್ರಯಾಣ ಬೆಳಸುತ್ತಿದ್ದಾರೆ. ಈ ರೈಲುಗಳಲ್ಲಿ ಅರ್ಧ ದಾರಿಯವರಗೆ ಸಾಗಿ ಅಲ್ಲಿಂದ ಬೇರೆ ರೈಲು ಹಿಡಿಯುವ ಆಲೋಚನೆಯೂ ಹಲವರದ್ದಾಗಿದೆ.
ರಾಜ್ಯ ಸರ್ಕಾರ ಇದು ತಾತ್ಕಾಲಿಕ ಕರ್ಫ್ಯೂ, ಹಾಗಾಗಿ ಯಾರೂ ವಲಸೆ ಹೋಗಬಾರದು ಎಂದು ಕೂಲಿ ಕಾರ್ಮಿಕರಲ್ಲಿ ಮನವಿ ಮಾಡಿತ್ತು. ಆದ್ರೆ ಈಗ 14 ದಿನ ಇರುವ ಕರ್ಫ್ಯೂ ಮುಂದೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗದೆ ಮತ್ತಷ್ಟು ದಿನ ಮುಂದುವರೆದರೆ ಆಗೇನು ಮಾಡುವುದು ಎನ್ನುವ ಆತಂಕ ಈ ಕಾರ್ಮಿಕರಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ