Kodagu Covid: ಕೋವಿಡ್ ಸೋಂಕು ದೃಢಪಡುತ್ತಿದ್ದಂತೆ ಮನೆಯಿಂದ ಪರಾರಿಯಾದ ವ್ಯಕ್ತಿ

ಜಮಾಅತ್ ನಿಂದ ಹೊರಗೆ ಹಾಕುವ ಎಚ್ಚರಿಕೆ ನೀಡುತ್ತಿದ್ದಂತೆ ಅರ್ಧಗಂಟೆಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಆಸ್ಪತ್ರೆ ಸೇರಿದ್ದಾನೆ

ಕೋವಿಡ್ ಸೋಂಕು ದೃಢಪಡುತ್ತಿದ್ದಂತೆ ಮನೆಯಿಂದ ಪರಾರಿಯಾದ ವ್ಯಕ್ತಿ

ಕೋವಿಡ್ ಸೋಂಕು ದೃಢಪಡುತ್ತಿದ್ದಂತೆ ಮನೆಯಿಂದ ಪರಾರಿಯಾದ ವ್ಯಕ್ತಿ

  • Share this:
ಕೊಡಗು (ಅ. 16):  ಕೋವಿಡ್ ಸೋಂಕು ಭಾರತಕ್ಕೆ ಬಂದು ಒಂದೂವರೆ ವರ್ಷವೇ ಕಳೆದಿದೆ. ಇದರ ನಡುವೆ ವಾಕ್ಸಿನ್​ ಕಂಡು ಹಿಡಿದು ಈಗಾಗಲೇ 50 ಕೋಟಿ ಭಾರತೀಯರಿಗೆ ಲಸಿಕೆ ನೀಡಲಾಗಿದೆ.  ಆದರೂ ಇಂದಿಗೂ ಕೋವಿಡ್ ಸೋಂಕು ಎಂದರೆ ಎಷ್ಟೋ ಜನರಿಗೆ ಇನ್ನಿಲ್ಲದ ಮುಜುಗರ, ಆತಂಕ ದೂರವಾಗಿಲ್ಲ. ಅಂತಹದ್ದೇ ಒಂದು ವಿಶೇಷ ಘಟನೆ ಕೊಡಗಿನಲ್ಲಿ ದಾಖಲಾಗಿದೆ. ಹೌದು ಕೋವಿಡ್  ಸೋಂಕು ದೃಢಪಡುತ್ತಿದ್ದಂತೆ ಮನೆಯಲ್ಲಿದ್ದ ವ್ಯಕ್ತಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ದು ಏನಾದರು ಮಾಡಿಬಿಡುತ್ತಾರೆಂಬ ತಪ್ಪು ಕಲ್ಪನೆಯಿಂದ ಮನೆಯಿಂದ  ನಾಪತ್ತೆಯಾಗಿದ್ದಾರೆ.  ಜಿಲ್ಲೆ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದ ಪಯನರಿ ಮಸೀದಿ ಬಳಿಯ ನಿವಾಸಿಗೆ ಆಗಸ್ಟ್ 11 ರಂದು ಕೋವಿಡ್ ಸೋಂಕು ದೃಢಪಟ್ಟಿತ್ತು. ಸೋಂಕು ದೃಢಪಟ್ಟಿರುವ ಮೆಸೇಜ್ ಆತನ ಮೊಬೈಲ್ ಗೆ ರವಾನೆಯಾಗುತ್ತಿದ್ದಂತೆ ಆತ ಮನೆಗೆ ಬೀಗ ಹಾಕಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

11 ನೇ ತಾರೀಖಿನ ಸಂಜೆ ಅಂಗನವಾಡಿ, ಆಶಾ ಕಾರ್ಯಕರ್ತೆ ಮತ್ತು  ಪಂಚಾಯಿತಿ ಅಧಿಕಾರಿಗಳು ಪಾಸಿಟಿವ್ ಬಂದ ವ್ಯಕ್ತಿಗೆ ಕರೆ ಮಾಡಿ ನಾಳೆ ಬೆಳಿಗ್ಗೆ ಆಸ್ಪತ್ರೆಗೆ ಹೋಗಲು ರೆಡಿಯಾಗುವಂತೆ ಹೇಳಿದ್ದಾರೆ. ಮಡಿಕೇರಿಯಿಂದ ಅಂಬ್ಯುಲೆನ್ಸ್ ಕೂಡ ಬರಹೇಳಿಕೊಂಡು 12 ರ ಬೆಳಗ್ಗೆ ಎಲ್ಲರೂ ಅವರ ಮನೆ ಬಳಿಗೆ ಹೋಗಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಪಾಸಿಟಿವ್ ಬಂದ ವ್ಯಕ್ತಿ ಮನೆಗೆ ಬೀಗ ಹಾಕಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಅಂದಿನಿಂದ 16 ನೇ ತಾರೀಖಿನವರೆಗೆ ಅಂಗನವಾಡಿ, ಆಶಾ ಕಾರ್ಯಕರ್ತರು ಮತ್ತು ಪಂಚಾಯಿತಿ ಅಭಿವೃದ್ಧಿ  ಅಧಿಕಾರಿ ಅಶೋಕ್ ಕುಮಾರ್ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲು ನಿತ್ಯ ಪ್ರಯತ್ನಿಸಿದ್ದಾರೆ. ಆತನಿಗೆ ಕರೆ ಮಾಡಿ ಆಸ್ಪತ್ರೆಗೆ ಬರುವಂತೆ ಪರಿ ಪರಿಯಾಗಿ ಹೇಳಿದ್ದಾರೆ.

ಫೋನ್ ಕರೆ ಸ್ವೀಕರಿಸಿ ಮಾತನಾಡುತ್ತಿದ್ದ ಆತ ತಾನು ಎಲ್ಲಿ ಇರುವುದಾಗಿ ಮಾತ್ರ ಬಾಯಿ ಬಿಡುತ್ತಿರಲಿಲ್ಲ. ನಾನು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದು, ಆರೋಗ್ಯವಾಗಿದ್ದೇನೆ. ಆಸ್ಪತ್ರೆಗೆ ಮಾತ್ರ ಹೋಗುವುದಿಲ್ಲ ಎಂದು ಒಂದೇ ಹಠ ಹಿಡಿದಿದ್ದ. ಇದು ಗ್ರಾಮದ ಜನರಿಗೂ ಕೂಡ ಆತಂಕ ಸೃಷ್ಟಿಸಿತ್ತು. ಆತ ಯಾರ ಗಮನಕ್ಕೂ ಬರದಂತೆ ಎಲ್ಲೆಲ್ಲಿ ಓಡಾಡುತ್ತಾನೋ, ಯಾರಿಗೆಲ್ಲಾ ಸೋಂಕು ಹರಡಿಸುತ್ತಾನೋ ಎಂಬ ಆತಂಕ ಮನೆಮಾಡಿತ್ತು.

ಇದನ್ನು ಓದಿ: ವಿದ್ಯಾರ್ಥಿಗಳ ಕೋವಿಡ್​ ನೆಗಟಿವ್​ ವರದಿ ಕಡ್ಡಾಯ; ಶಾಲಾ ಆರಂಭಕ್ಕೆ ಮಾರ್ಗಸೂಚಿ ಪ್ರಕಟ

ವಿಷಯ ತಿಳಿದು ಸ್ಥಳಕ್ಕೆ ನ್ಯೂಸ್ 18 ಹೋಗುತ್ತಿದ್ದಂತೆ ಪಯನರಿ ಜಮಾಅತ್ ನ ಅಧ್ಯಕ್ಷ ಸೌಖತ್ ಅಲಿ ಮತ್ತು ಸದಸ್ಯರು ಸ್ಥಳಕ್ಕಾಗಮಿಸಿದರು. ಕೋವಿಡ್ ಪಾಸಿಟಿವ್ ಬಂದು ನಾಪತ್ತೆಯಾಗಿದ್ದ ವ್ಯಕ್ತಿಗೆ ಕರೆಮಾಡಿ, ನೀನು ಎಲ್ಲಿಯೇ ಇದ್ದರೂ ಕೂಡಲೇ ಬಂದು ಆಸ್ಪತ್ರೆಗೆ ಹೋಗಬೇಕು. ಇಲ್ಲದಿದ್ದರೆ ಜಮಾಅತ್ ನಿಂದ ನಿನ್ನನ್ನು ಹೊರ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೂಡಲೇ ಆ ವ್ಯಕ್ತಿ ಇನ್ನು ಅರ್ಧ ಗಂಟೆಯಲ್ಲಿ ನಾನು ಆಸ್ಪತ್ರೆಗೆ ಹೋಗುವುದಾಗಿ ಒಪ್ಪಿಕೊಂಡು ಭರವಸೆ ನೀಡಿದರು. ಕೋವಿಡ್ ಸೋಂಕು ದೃಢಪಟ್ಟು ಐದು ದಿನಗಳಾಗಿದ್ದರು ಆಸ್ಪತ್ರೆಗೆ ಹೋಗದೆ ಎಲ್ಲರಿಗೂ ತಲೆ ನೋವಾಗಿದ್ದ ವ್ಯಕ್ತಿ ಅಂತು ಐದು ದಿನಗಳ ಬಳಿಕ ಆಸ್ಪತ್ರೆಗೆ ಹೋಗಲು ಒಪ್ಪಿಕೊಂಡಿದ್ದಾನೆ. ಕೊನೆಗೆ ಕಕ್ಕಬ್ಬೆ ಗ್ರಾಮ ಪಂಚಾಯ್ತಿಯ ಸದಸ್ಯ ಬಷೀರ್ ಪಾಸಿಟಿವ್ ಬಂದು ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಮಡಿಕೇರಿ ಆಸ್ಪತ್ರೆಗೆ ಸೇರಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by:Seema R
First published: