ಬೆಂಗಳೂರು: ಮಕ್ಕಳು ಧೂಳು ಹಿಡಿದಿರುವ ಬ್ಯಾಗ್ನತ್ತ ಮುಖ ಮಾಡುವ ಸಮಯ ಬಂದಿದೆ. ಕಳೆದ ಒಂದೂವರೆ ವರ್ಷದಿಂದ ಮನೆಯಲ್ಲಿದ್ದ ಮಕ್ಕಳಿಗೆ ಇದೀಗ ಶಾಲೆ ಭಾಗ್ಯ ದೊರೆತಿದೆ. ಇದೇ ತಿಂಗಳ 23ರಿಂದ 9ನೇ ತರಗತಿಯಿಂದ ಪಿಯುಸಿವರೆಗೆ ಶಾಲಾ-ಕಾಲೇಜು ತೆರೆಯಲು ಸರ್ಕಾರ ನಿರ್ಧರಿಸಿದೆ. ಕೊರೊನಾದಿಂದ ನಮ್ಮಿಡೀ ಜೀವನದ ವ್ಯವಸ್ಥೆ ಬದಲಾಗಿತ್ತು. ಅದರಲ್ಲೂ ಶಿಕ್ಷಣ ರಂಗ ಶಾಲಾ-ಕಾಲೇಜುಗಳ ಬಾಗಿಲು ತೆರೆಯದೇ ಮನೆಯಲ್ಲಿಯೇ ಆನ್ ಲೈನ್ ಕ್ಲಾಸ್ ಗತಿಯಾಗಿತ್ತು. ಇದರಿಂದ ಮಕ್ಕಳಿಗೆ ಆಟಪಾಠವಿಲ್ಲದೆ ಉಲ್ಲಾಸ, ಉತ್ಸಾಹವಿಲ್ಲದಂತಾಗಿತ್ತು. ಗ್ರಾಮೀಣ ಭಾಗದಲ್ಲಿ ಅನಕ್ಷರತೆ, ಬಾಲ್ಯವಿವಾಹ, ಬಾಲಕಾರ್ಮಿಕತೆ ಹೆಚ್ಚಾಗಿತ್ತು. ಇದೀಗ ಕೊರೊನಾ ಕೇಸ್ ತುಸು ಕಡಿಮೆಯಾಗಿದೆ.
ಕೊರೊನಾ ಮೂರನೇ ಅಲೆ ಆತಂಕದ ವೇಳೆ ಶಾಲೆ ತೆರೆಯಬೇಕೇ ಬೇಡವೇ ಎಂಬ ಗೊಂದಲಕ್ಕೆ ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಇತಿಶ್ರೀ ಹಾಡಲಾಗಿದೆ. ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ತಜ್ಞರ ಅಭಿಪ್ರಾಯಕ್ಕೆ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಕೊನೆಗೂ ಶಾಲೆ ತೆರೆಯಲು ನಿರ್ಧರಿಸಿದ್ದಾರೆ. ಇದೇ ಆಗಸ್ಟ್ 23 ರಿಂದ 9, 10 ಮತ್ತು ಪಿಯುಸಿ ತರಗತಿಯನ್ನು ಪ್ರಾರಂಭಿಸಲು ಸಿಎಂ ಒಪ್ಪಿಗೆ ನೀಡಿದ್ದಾರೆ. ಇಂದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಪುನರಾರಂಭಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಸಭೆ ನಡೆಸಿ ವಿಸ್ತೃತವಾಗಿ ಚರ್ಚಿಸಿದರು. ಸಭೆಯಲ್ಲಿ ಆಗಸ್ಟ್ 23 ರಿಂದ 9, 10 ಮತ್ತು ಪಿಯುಸಿ ತರಗತಿಯನ್ನು ಪ್ರಾರಂಭಿಸಲು ಸೂಚಿಸಲಾಯಿತು.
ವಿದ್ಯಾರ್ಥಿಗಳಿಗೆ ದಿನ ಬಿಟ್ಟು ದಿನ ತರಗತಿ ನಡೆಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಕಡಿಮೆ ಮಾಡಿ ಪಾಳಿ ಪದ್ಧತಿಯಲ್ಲಿ ನಡೆಸಲಾಗುವುದು. ಕಡ್ಡಾಯವಾಗಿ ಶಾಲೆಯ ಶಿಕ್ಷಕರು, ಸಿಬ್ಬಂದಿ ಒಂದು ಲಸಿಕೆಯನ್ನಾದ್ರೂ ಹಾಕಿಸಿಕೊಂಡಿರಬೇಕು. ಹೀಗೆ ಶಾಲೆ ಕಾಲೇಜುಗಳನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಕೊರೊನಾ ಮಾರ್ಗಸೂಚಿಗಳ ಕುರಿತು ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಿಎಂ ತಿಳಿಸಿದರು.
ರಾಜ್ಯದ ಕೋವಿಡ್ ಸ್ಥಿತಿಗತಿಯನ್ನು ಆಧರಿಸಿ, ಪ್ರಾಥಮಿಕ ಶಾಲೆ ಮತ್ತು 8ನೇ ತರಗತಿ ಪ್ರಾರಂಭಿಸುವ ಬಗ್ಗೆ ಆಗಸ್ಟ್ ತಿಂಗಳ ಅಂತ್ಯದಲ್ಲಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. ಶಾಲಾ-ಕಾಲೇಜು ಆರಂಭಕ್ಕೆ ಖಾಸಗಿ ಶಿಕ್ಷಣ ಒಕ್ಕೂಟಗಳು ಸ್ವಾಗತಿಸಿವೆ. ರುಪ್ಸಾ ಕರ್ನಾಟಕ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪಾಳಿ ಪದ್ಧತಿಯಲ್ಲಿ ಎಲ್ಲ ತರಗತಿ ಆರಂಭಿಸುವಂತೆ ಒತ್ತಾಯಿಸಿದೆ.
ಇದನ್ನೂ ಓದಿ: SSLC Result: ನಾಳೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗುವುದಿಲ್ಲ; ಶಿಕ್ಷಣ ಇಲಾಖೆ
ಇನ್ನು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶವೂ ಇನ್ನೆರಡು ದಿನದಲ್ಲಿ ಪ್ರಕಟವಾಗಲಿದೆ. ಈಗಾಗಲೇ ಸರ್ವ ಸಿದ್ದತೆ ಮಾಡಿಕೊಂಡಿರುವ ಪರೀಕ್ಷಾ ಮಂಡಳಿಗೆ ನೂತನ ಶಿಕ್ಷಣ ಸಚಿವರು ಘೋಷಣೆ ಮಾಡುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಕಳೆದೊಂದು ವರುಷದ ನಂತರ ಶಾಲಾಕಾಲೇಜು ತೆರೆಯಲಿದೆ. ಸಭೆಯಲ್ಲಿ ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಡಾ. ಕೆ. ಸುಧಾಕರ್, ತಜ್ಞರಾದ ಡಾ. ಸಿ.ಎನ್. ಮಂಜುನಾಥ್, ಡಾ. ದೇವಿಪ್ರಸಾದ್ ಶೆಟ್ಟಿ, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ