Karnataka Rains: ರಾಜ್ಯದಲ್ಲಿ ಜು. 23ರವರೆಗೆ ಅಬ್ಬರಿಸಲಿದೆ ಮಳೆ, ಬೆಂಗಳೂರಲ್ಲಿ ಇನ್ನೂ 2 ದಿನ ವರುಣನ ಆರ್ಭಟ; ಯೆಲ್ಲೋ-ಆರೆಂಜ್ ಅಲರ್ಟ್ !

Karnataka Weather Today: ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜು.19 ಮತ್ತು 20ರಂದು ಹಳದಿ ಅಲರ್ಟ್​ ಘೋಷಿಸಲಾಗಿದೆ. ಜೊತೆಗೆ ಜು.21,22 ಮತ್ತು 23ರಂದು ಈ ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​​ನ್ನು ಘೋಷಣೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಜು.19): ಪೂರ್ವ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ರಾಜ್ಯದಲ್ಲಿ ಜುಲೈ 19ರಿಂದ 23ರವರೆಗೆ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸಿಎಸ್​ ಪಾಟೀಲ್​ ಇಂದು ಮುನ್ಸೂಚನೆ ನೀಡಿದ್ದಾರೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮನೆಗಳು ಜಲಾವೃತಗೊಂಡಿವೆ. ಮಳೆಯ ಆರ್ಭಟಕ್ಕೆ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ.

  ನಿನ್ನೆ ಕರಾವಳಿಯಲ್ಲಿ ಗರಿಷ್ಠ 10 ಸೆಂ.ಮೀ., ಉತ್ತರ ಒಳನಾಡಿನಲ್ಲಿ 6 ಸೆಂ.ಮೀ ಹಾಗೂ ಶಿವಮೊಗ್ಗದಲ್ಲಿ 8. ಸೆಂ.ಮೀ ಮಳೆಯಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಲಿದೆ.

  ಕರ್ನಾಟಕದ ಕರಾವಳಿಯಲ್ಲಿ ಕಡಿಮೆ ಒತ್ತಡ ಇರುವ ವಿಸ್ತರಿಸಿರುವ ಪ್ರದೇಶವಿದೆ. ಹೀಗಾಗಿ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಜುಲೈ 19ರಿಂದ 23 ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಅದರಂತೆ ದಕ್ಷಿಣ ಒಳನಾಡಿನಲ್ಲಿ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ.

  ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ..!

  ರಾಜ್ಯದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜು.19 ಮತ್ತು 20ರಂದು ಹಳದಿ ಅಲರ್ಟ್​ ಘೋಷಿಸಲಾಗಿದೆ. ಜೊತೆಗೆ ಜು.21,22 ಮತ್ತು 23ರಂದು ಈ ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​​ನ್ನು ಘೋಷಣೆ ಮಾಡಲಾಗಿದೆ.

  ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಜು.19, 21 ಮತ್ತು 22ರಂದು ಹಳದಿ ಅಲರ್ಟ್​​ನ್ನು, ಹಾಗೂ ಜು.23ರಂದು ಆರೆಂಜ್​ ಅಲರ್ಟ್​​ನ್ನು ಘೋಷಿಸಲಾಗಿದೆ.

  ಬೆಳಗಾವಿ, ಹಾವೇರಿ, ಧಾರವಾಡ, ಗದಗ, ಬೀದರ್, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜು.19, 22 ಮತ್ತು 23ರಂದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

  ಇದನ್ನೂ ಓದಿ:Karnataka 2nd PUC Result: ನಾಳೆ ಸಂಜೆ ಪಿಯು ಫಲಿತಾಂಶ ಪ್ರಕಟ; ರಿಸಲ್ಟ್​ ನೋಡಲು ಹೀಗೆ ಮಾಡಿ...!

  ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಜಿಟಿ ಜಿಟಿ ಮಳೆಯಾಗುತ್ತಿತ್ತು. ನಿನ್ನೆ ಮಧ್ಯಾಹ್ನದಿಂದ ಮಳೆರಾಯ ತುಸು ವಿರಾಮ ಕೊಟ್ಟಿದ್ದಾನೆ. ಇಂದು ಬಿಸಿಲು ಬಂದಿದ್ದು, ಬೆಂಗಳೂರಿಗರು ಬಿಸಿಲಿಗೆ ಮೈಯೊಡ್ಡಿದ್ದಾರೆ. ಆದರೆ ಮುಂದಿನ ಎರಡು ದಿನಗಳ ಕಾಲ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
  Published by:Latha CG
  First published: