ಬೆಂಗಳೂರು (ಜೂ. 11): ಕೋವಿಡ್ ಸೋಂಕಿನ ಹಿನ್ನಲೆ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯುಸಿ ಮತ್ತು ಪ್ರಥಮ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡುವುದಾಗಿ ಈ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿತ್ತು. ಆದರೆ, ಈಗ ಏಕಾಏಕಿ ವಿದ್ಯಾರ್ಥಿಗಳಿಗೆ ಆನ್ಲೈನ್ ಪರೀಕ್ಷೆ ನಡೆಸುವ ಮೂಲಕ ಶಾಕ್ ನೀಡಿದೆ. ವಿದ್ಯಾರ್ಥಿಗಳ ತೇರ್ಗಡೆಗೆ ಎರಡು ಪ್ರಶ್ನೆ ಪತ್ರಿಕೆಯ ಪರೀಕ್ಷೆ ನಡೆಸಲು ಪಿಯು ಮಂಡಳಿ ನಿರ್ಧರಿಸಿದೆ. ಪರೀಕ್ಷೆ ಯಾವ ಮಾದರಿ ನಡೆಯಲಿದೆ ಎಂಬುದರ ಕುರಿತು ಪಿಯು ಮಂಡಳಿಯ ವೆಬ್ಸೈಟ್ನಲ್ಲಿ ಮಾದರಿ ಪ್ರಶ್ನಾ ಪತ್ರಿಕೆಯನ್ನು ನೀಡಲಾಗಿದೆ. ಈ ಮೂಲಕ ಶಿಕ್ಷಣ ಸಚಿವರ ಮಾತಿನಿಂದ ಪರೀಕ್ಷೆಯಿಲ್ಲ ಎಂದು ಸಂತಸದಿಂದ ವಿದ್ಯಾರ್ಥಿಗಳಿಗೆ ಪಿಯು ಮಂಡಳಿ ಆಘಾತ ನೀಡಿದೆ. ಇಷ್ಟೇ ಅಲ್ಲದೇ, ಪರೀಕ್ಷೆ ಹೇಗೆ ನಡೆಸಬೇಕು. ಯಾವ ರೀತಿ ಮೌಲ್ಯ ಮಾಪನ ನಡೆಸಬೇಕು ಎಂಬ ಕುರಿತು ಕೂಡ ತಿಳಿಸಲಾಗಿದೆ.
ಹೇಗೆ ನಡೆಯಲಿದೆ ಆನ್ಲೈನ್ ಪರೀಕ್ಷೆ
- ಇಲಾಖೆ ವೆಬ್ ಸೈಟ್ ನಲ್ಲಿರುವ ಪ್ರಶ್ನೆ ಪತ್ರಿಕೆಯನ್ನ ವಿದ್ಯಾರ್ಥಿಗಳೇ ಡೌನ್ ಲೋಡ್ ಮಾಡಿಕೊಳ್ಳಬೇಕು
- ಪ್ರಶ್ನೆಗಳಿಗೆ ಉತ್ತರ ಬರೆದು ವಾಟ್ಸ್ ಅಪ್, ಇ-ಮೇಲ್, ಅಂಚೆ ಮೂಲಕ ರವಾನಿಸಬೇಕು
ವಿದ್ಯಾರ್ಥಿಗಳು ಉಪನ್ಯಾಸಕರಿಗೆ ಉತ್ತರ ಪತ್ರಿಕೆಯನ್ನ ಕಳುಹಿಸಬೇಕು
- ಉಪನ್ಯಾಸಕರು ಮೌಲ್ಯಮಾಪನ ಮಾಡಬೇಕು
- ಮೌಲ್ಯಮಾಪನದ ಬಳಿಕ ಉಪನ್ಯಾಸಕರು SATs (ಸ್ಟೂಡೆಂಟ್ಸ್ ಅಚಿವ್ ಮೆಂಟ್ ಟ್ರಾಕಿಂಗ್ ಸಿಸ್ಟಂ) ಮೂಲಕ ಫಲಿತಾಂಶ ಅಪ್ಲೋಡ್
- ಅಸಿಸ್ಮೆಂಟ್ ಲೆಕ್ಕಾಚಾರದಲ್ಲಿ ಪರೀಕ್ಷೆ ನಡೆಸಲು ಪಿಯು ಬೋರ್ಡ್ ನಿರ್ಧಾರ
- ಜು. 20ರೊಳಗೆ ಅಸಿಸ್ಮೆಂಟ್ ಪ್ರಕ್ರಿಯೆ ಪೂರ್ಣಗೊಳಿಸಲು ಆದೇಶ
- ಮೊದಲ ಅಸಿಸ್ಮೆಂಟ್ ಜೂ.20 ಕೊನೆಯ ದಿನವಾಗಿದೆ
- ಉಪನ್ಯಾಸಕರು ಜೂ.25ರೊಳಗೆ ಮೌಲ್ಯಮಾಪನ ಮಾಡಿರಬೇಕು
- ಅದೇ ರೀತಿ ಎರಡನೇ ಅಸಿಸ್ಮೆಂಟ್ ಜೂ. 26 ರಿಂದ ಜು.5ರ ಒಳಗೆ ಉಪನ್ಯಾಸಕರು ಜು.10ರೊಳಗೆ ಮೌಲ್ಯಮಾಪನ ಮಾಡಿರಬೇಕು
- 2 ಪತ್ರಿಕೆಗಳ ಅಂಕವನ್ನ ಸಮೀಕರಣ ಮಾಡಿ ಜು.15 ರೊಳಗೆ ಮುಗಿಸಿ ಜು.20ರೊಳಗೆ ಸ್ಯಾಟ್ಸ್ ನಲ್ಲಿ ಅಪ್ಲೋಡ್ ಮಾಡಬೇಕು
- ಎರಡೂ ಪರೀಕ್ಷೆಗಳ ಅಂಕವನ್ನ ಜು.20ರೊಳಗೆ ಅಪ್ಲೋಡ್ ಮಾಡಲು ಡೆಡ್ ಲೈನ್ ವಿಧಿಸಲಾಗಿದೆ
ಮೌಲ್ಯಮಾಪನ ಪ್ರಕ್ರಿಯೆ ಹೇಗೆ?
- ವಿದ್ಯಾರ್ಥಿಗಳಿಗೆ ಪ್ರತೀ ವಿಷಯದಲ್ಲಿ ಕನಿಷ್ಠ 35 ಅಂಕ ಕಡ್ಡಾಯವಾಗಿ ನೀಡಬೇಕು
- ಪ್ರತಿ ಪತ್ರಿಕೆಗೆ 30 ರಂತೆ 2 ಪತ್ರಿಕೆಗೆ 60 ಅಂಕ ನೀಡಬೇಕು
- 5 ಅಂಕವನ್ನ ಉಪನ್ಯಾಸಕರು ಆಂತರಿಕ ಅಂಕವೆಂದು ನೀಡಬೇಕು
- ಪ್ರಾಯೋಗಿಕ ಸಹಿತಿ ವಿಷಯಗಳಿಗೆ ಪ್ರತ್ಯೇಕ ಅಂಕ ನೀಡಬೇಕಿದೆ
- ಈ ಹಿಂದೆ ನಡೆಸಿದ ಪ್ರಾಯೋಗಿಕ ತರಗತಿಗಳ ಆಧಾರದ ಮೇಲೆ ನಿಷ್ಪಕ್ಷಪಾತವಾಗಿ ಅಂಕ ನೀಡಬೇಕು
ರಾಜ್ಯದ ಎಲ್ಲ ಪಿಯು ಕಾಲೇಜುಗಳಿಗೆ ಪಿಯು ಬೋರ್ಡ್ ನಿಂದ ಈಗಾಗಲೇ ಈ ಸುತ್ತೋಲೆ ಹೊರಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಾಗುವಂತೆ ಸೂಚನೆ ನೀಡಲಾಗಿದೆ.
ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವರು
ಮೊದಲ ಪಿಯುಸಿ ಆನ್ಲೈನ್ ಪರೀಕ್ಷೆ ಕುರಿತು ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಪ್ರಥಮ ಪಿಯು ಮೌಲ್ಯಮಾಪನವನ್ನು ಪರೀಕ್ಷೆ ಎಂದು ತಪ್ಪಾಗಿ ಪರಿಭಾವಿಸುವುದು ಬೇಡ. ಯಾವುದೇ ವಿದ್ಯಾರ್ಥಿ ಶಾಲೆಗೆ ಬಂದು ಅಸೈನ್ ಮೆಂಟ್ ಸಲ್ಲಿಸಬೇಕಿಲ್ಲ. ಮಕ್ಕಳ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಅನವಶ್ಯಕ ಗೊಂದಲ ಬೇಡ. ಉಪನ್ಯಾಸಕರು, ವಿದ್ಯಾರ್ಥಿಗಳ ಭವಿಷ್ಯ ಮುಖ್ಯವೆನ್ನುವುದನ್ನು ಗಮನದಲ್ಲಿರಿಸಿಕೊಂಡು ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.