Mango: ರುಚಿರುಚಿಯಾದ ಮಾವು ರೈತರ ಹೊಲದಿಂದ ಬೆಂಗಳೂರಿನ ಟೆಕ್ ಪಾರ್ಕ್, ಅಪಾರ್ಟ್ಮೆಂಟ್ಗಳಿಗೇ ಬರುತ್ತೆ!
ಗ್ರಾಹಕರ ಜೊತೆ ನೇರವಾದ ಸಂಪರ್ಕ ಹೊಂದಿರುವುದು ರೈತರಿಗೆ, ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಿಂದ ಹೊರಗೆ, ಕೋಲಾರ, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ಇತರ ಸುತ್ತಲಿನ ಪ್ರದೇಶದ ರೈತರಿಗೆ ಲಾಭದಾಯಕವಾಗಿ ಸಾಬೀತಾಗಿದೆ.
ಮಾವಿನ ಹಣ್ಣಿನ ಕಾಲ ಮತ್ತೆ ಮರಳಿದೆ. ಮಾವಿನ ಹಣ್ಣಿನ ಕಾಲ ಬಂದರೆ ಸಾಕು ಎಲ್ಲರಿಗೂ, ತಮಗಿಷ್ಟ ಬಂದ ತಳಿಯ ತರಾವರಿ ಮಾವಿನ ಹಣ್ಣುಗಳನ್ನು (Mango) ಆರಿಸಿಕೊಂಡು ತರುವ ಸಂಭ್ರಮ. ಹಾಗಾಗಿ, ಹಣ್ಣುಗಳ ರಾಜ ಮಾವಿನ ಹಣ್ಣು ಮಾರುಕಟ್ಟೆಗೆ ಯಾವಾಗ ಲಗ್ಗೆ ಇಡುತ್ತದೆ ಎಂದು ಎಲ್ಲರೂ ತವಕದಿಂದ ಕಾಯುತ್ತಿದ್ದಾರೆ. ಇನ್ನು ಕೆಲವರಿಗೆ , ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳನ್ನು ಎಲ್ಲೆಲ್ಲಿ ದಾಸ್ತಾನು ಮಾಡಿಟ್ಟಿರುತ್ತಾರೋ, ರಾಸಾಯನಿಕಗಳನ್ನು ಬಳಸಿದ್ದಾರೋ, ಮಾವಿನ ಹಣ್ಣುಗಳ ಗುಣಮಟ್ಟ ಹೇಗಿದೆಯೋ ಹೀಗೆ ಹತ್ತು ಹಲವು ಸಂಶಯಗಳು. ಜೊತೆಗೆ ಮಾರುಕಟ್ಟೆವರೆಗೆ ಹೋಗಿ (Mango Market) ಹಣ್ಣುಗಳನ್ನು ಆರಿಸಿ ತರಲು ಸಮಯದ ಅಭಾವ ಅಥವಾ ಸೋಮಾರಿತನವೆನ್ನಿ.
ಅಂತವರು, ತಮಗಾಗಿ ಉತ್ತಮ ಮಾವಿನ ಹಣ್ಣುಗಳನ್ನು, ನೇರವಾಗಿ ಮಾವಿನ ಹಣ್ಣಿನ ತೋಪುಗಳಿಂದ ಆರ್ಡರ್ ಮಾಡಿ, ಅವು ತಮ್ಮ ಮನೆ ಬಾಗಿಲಿಗೆ ಬಂದು ತಲುಪುವ ಆಯ್ಕೆಗಳ ಮೊರೆ ಹೋಗುತ್ತಿದ್ದಾರೆ. ಬೆಂಗಳೂರಿನ ಹಲವಾರು ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ಗಳು, ಟೆಕ್ ಪಾರ್ಕ್ಗಳು ಮತ್ತು ಟೆಕ್ ಫರ್ಮ್ಗಳು, ಅತ್ಯುತ್ತಮ ಮಾವಿನ ಹಣ್ಣುಗಳನ್ನು ನೇರವಾಗಿ ಮಾವಿನ ತೋಟಗಳಿಂದಲೇ ತರಿಸಿಕೊಳ್ಳಲು, ರೈತರ ಜೊತೆ ನೇರವಾಗಿ ಪಾಲುದಾರಿಕೆ ಮಾಡಿಕೊಂಡಿವೆ.
ರೈತರಲ್ಲಿ ಮುಂಗಡ ಬುಕ್ಕಿಂಗ್ ಇನ್ನು ಕೆಲವರು ಈ ವಿಷಯದಲ್ಲಿ, ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಅದೇನೆಂದರೆ, ಅಪಾರ್ಟ್ಮೆಂಟ್ ಅಥವಾ ನಿರ್ದಿಷ್ಟ ಕಂಪೆನಿಯ ಟೆಕ್ಕಿಗಳಿಗೆ ನೇರವಾಗಿ ಮಾವಿನ ಹಣ್ಣುಗಳನ್ನು ಪೂರೈಸಲು, ಇಡೀ ಮಾವಿನ ತೋಟದ ಹಣ್ಣುಗಳನ್ನು ತಮಗೇ ಪೂರೈಸಬೇಕೆಂದು ರೈತರಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದಾರೆ.
ಯಾವ ಜಿಲ್ಲೆಗಳಲ್ಲಿ? ಗ್ರಾಹಕರ ಜೊತೆ ನೇರವಾದ ಸಂಪರ್ಕ ಹೊಂದಿರುವುದು ರೈತರಿಗೆ, ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಿಂದ ಹೊರಗೆ, ಕೋಲಾರ, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ಇತರ ಸುತ್ತಲಿನ ಪ್ರದೇಶದ ರೈತರಿಗೆ ಲಾಭದಾಯಕವಾಗಿ ಸಾಬೀತಾಗಿದೆ. ಈ ರೀತಿಯ ವ್ಯಾಪಾರಕ್ಕೆ, ಕರ್ನಾಟಕ ರಾಜ್ಯ ಮಾವಿನ ಹಣ್ಣು ಅಭಿವೃದ್ಧಿ ಮತ್ತು ಮಾರ್ಕೆಟಿಂಗ್ ಕಾರ್ಪೊರೇಶನ್ ಲಿಮಿಟೆಡ್ ಕೂಡ ತನ್ನ ಸಹಮತವನ್ನು ಸೂಚಿಸಿದೆ.
ಟೆಕ್ ಪಾರ್ಕ್ ಮತ್ತು ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ಗಳಲ್ಲಿ ವಿಶೇಷ ಮಾರಾಟ ಕೌಂಟರ್ ಕಳೆದ ಎರಡು ವರ್ಷಗಳಲ್ಲಿ ಜನರನ್ನು ಕಾಡಿದ ಕೊರೋನಾ ಸಾಂಕ್ರಾಮಿಕವೇ, ಈ ಹೊಸ ವ್ಯಾಪಾರ ವಿಧಾನ ಹುಟ್ಟಿಕೊಳ್ಳಲು ಕಾರಣವಾಗಿದೆ. ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ, ಮಾವಿನ ಹಣ್ಣಿನ ಮಾರಾಟದ ಮೇಲೆ ಪರಿಣಾಮ ಬೀರಿತು. ಹಲವಾರು ಮಂದಿ ಮಾವಿನ ಹಣ್ಣುಗಳನ್ನು ಖರೀದಿಸಲು ಸಂಚಾರಿ ಸೇವೆಗಳನ್ನು ಬಳಸಿದರು. ಪೋಸ್ಟಲ್ ಆರ್ಡರ್ ಮತ್ತು ಮಾರಾಟದ ಸಂಖ್ಯೆ ಕೂಡ ಹೆಚ್ಚಿತ್ತು. ಮಾವಿನ ಹಣ್ಣಿನ ಬೇಡಿಕೆ ಹೆಚ್ಚಾದಾಗ, ಹಾಪ್ಕಾಮ್ಸ್ ಮತ್ತು ಕರ್ನಾಟಕ ರಾಜ್ಯ ಮಾವಿನ ಹಣ್ಣು ಅಭಿವೃದ್ಧಿ ಹಾಗೂ ಮಾರ್ಕೆಟಿಂಗ್ ಕಾರ್ಪೊರೇಶನ್ ಲಿಮಿಟೆಡ್ (KSMDMCL), ಟೆಕ್ ಪಾರ್ಕ್ ಮತ್ತು ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ಗಳಲ್ಲಿ ವಿಶೇಷ ಮಾರಾಟ ಕೌಂಟರ್ಗಳನ್ನು ತೆರೆಯಿತು.
ಈ ಸಮಯದಲ್ಲಿ ರೈತರು, ಗ್ರಾಹಕರ ಜೊತೆ ತಮ್ಮ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಮತ್ತು ಆ ಮೂಲಕ ಒಂದು ವ್ಯಾಪಾರ ವೇದಿಕೆಯನ್ನು ನಿರ್ಮಿಸಿಕೊಂಡಿದ್ದಾರೆ. ಅದರಿಂದಾಗಿ, ಗ್ರಾಹಕರು ನೇರವಾಗಿ ರೈತರಿಂದಲೇ ಅವರು ಬೆಳೆಯುವ ಮಾವಿನ ಹಣ್ಣುಗಳನ್ನು ಕೊಳ್ಳುವಂತಾಗಿದೆ.
ಜನಪ್ರಿಯವಾಗುತ್ತಿದೆ ವ್ಯವಸ್ಥೆ ಎಷ್ಟೋ ಜನ ಗ್ರಾಹಕರು ಮಾವಿನ ತೋಟಗಳಿಗೆ ಹೋಗಿ, ಅಲ್ಲಿಯೇ ತಮಗಿಷ್ಟವಾದ ಮಾವಿನ ಹಣ್ಣುಗಳನ್ನು ಕೊಂಡು ತರುವ ಪರಿಪಾಠ ಕೂಡ ಈ ಚಾಲ್ತಿಯಲ್ಲಿದೆ. ಆನ್ಲೈನ್ ಮೂಲಕ ರೈತರನ್ನು ಸಂಪರ್ಕಿಸಿ, ಮಾವಿನ ಹಣ್ಣಿನ ತೋಟಕ್ಕೆ ಭೇಟಿ ನೀಡುವ ವ್ಯವಸ್ಥೆ ಕೂಡ ಜನಪ್ರಿಯವಾಗುತ್ತಿದೆ.
ಕರ್ನಾಟಕ ರಾಜ್ಯ ಮಾವಿನ ಹಣ್ಣು ಅಭಿವೃದ್ಧಿ ಮತ್ತು ಮಾರ್ಕೆಟಿಂಗ್ ಕಾರ್ಪೊರೇಶನ್ ಲಿಮಿಟೆಡ್ನ ಮ್ಯಾನೇಜಿಂಗ್ ಡೈರೆಕ್ಟರ್ ಸಿ. ನಾಗರಾಜ್ ಅವರು ಹೇಳುವ ಪ್ರಕಾರ, ತಮಗೆ ರೈತರು ಮತ್ತು ಗ್ರಾಹಕರ ನಡುವೆ ಈ ರೀತಿಯ ಒಡಬಂಡಿಕೆ ಏರ್ಪಟ್ಟಿರುವುದು ತಿಳಿದಿದೆ ಮತ್ತು ಇದು ಖಂಡಿತವಾಗಿಯೂ ಕೆಟ್ಟ ಪರಿಕಲ್ಪನೆ ಅಲ್ಲ. “ರೈತರಿಗೆ ಯಾವತ್ತಿನವರೆಗೆ ಈ ಡೀಲ್ನಿಂದ ಲಾಭ ಬರುತ್ತಿರುತ್ತದೆಯೋ, ಅಲ್ಲಿಯವರೆಗೆ ನಮಗೆ ಆ ಬಗ್ಗೆ ಯಾವುದೇ ತಕರಾರು ಇಲ್ಲ” ಎಂದು ಅವರು ತಿಳಿಸಿದ್ದಾರೆ.