ಬೆಂಗಳೂರು (ಮೇ 6): ಕರ್ನಾಟಕದಲ್ಲಿ ಕೊರೋನಾ ಕೇಸುಗಳು ಮಿತಿ ಮೀರುತ್ತಿದ್ದರೂ ರಾಜ್ಯದ ಬಿಜೆಪಿ ಸಂಸದರು ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂದೆ ಧ್ವನಿಯೆತ್ತುತ್ತಿಲ್ಲ. ಅವರೆಲ್ಲರೂ ಅಡಗಿ ಕುಳಿತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಿದ್ದರಾಮಯ್ಯ ಅವರು ಕೊರೊನಾ ಪೇಷೆಂಟ್ ಆಗಿದ್ದರೋ ಅಥವಾ ಮಾನಸಿಕ ಪೇಷೆಂಟ್ ಆಗಿದ್ದರೋ ಗೊತ್ತಿಲ್ಲ. ರೆಮಿಡಿಸಿವಿರ್ ಉತ್ಪಾದನೆಯೇ ಇರಲಿಲ್ಲ. ಆಕ್ಸಿಜನ್ ಎಲ್ಲವನ್ನೂ ಕಂಟ್ರೋಲ್ ಮಾಡಿದ್ದೇವೆ. ಬೇರೆ ಕಡೆ ಕೊಡುವುದನ್ನು ಇಲ್ಲಿಗೆ ಡೈವರ್ಟ್ ಮಾಡಿದ್ದೇವೆ. ದೇಶದಲ್ಲಿ ಬೆಡ್ಗಳ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಿದ್ದೇವೆ. ಇದನ್ನೆಲ್ಲ ಯಾರ ಮಾಡಿದ್ದು? ದಿನಪೂರ್ತಿ ಮಾತನಾಡುವ ಸಿದ್ದರಾಮಯ್ಯನವರಾ? ಅಥವಾ 24 ಗಂಟೆ ಕೆಲಸ ಮಾಡುವ ಬಿಜೆಪಿಯವರಾ? ಎಂದು ಪ್ರಶ್ನಿಸಿದ್ದಾರೆ.
ಲಾಕ್ ಡೌನ್ ಮಾಡುವ ವಿವೇಚನೆ ರಾಜ್ಯಗಳಿಗೆ ಬಿಟ್ಟಿದ್ದು ಎನ್ನುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿಚಾರವಾಗಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿಕೆ ನೀಡಿದ್ದು, ಇವತ್ತಿನ ಪರಿಸ್ಥಿತಿಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅದರಲ್ಲೂ ವಿಶೇಷವಾಗಿ ಕರ್ನಾಟಕ ಈ ಬಗ್ಗೆ ಯೋಚಿಸಬೇಕು. ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಮಾಡಿದಕ್ಕೆ ಪ್ರಕರಣ ಕಡಿಮೆ ಆಗಿದೆ. 10 ಸಾವಿರದಿಂದ 2 ಸಾವಿರಕ್ಕೆ ಇಳಿದಿವೆ. ಇದನ್ನು ಸುಪ್ರೀಂ ಕೋರ್ಟ್ ಕೂಡ ಗಮನಿಸಿದೆ. ಹೀಗಾಗಿ, ಮಹಾರಾಷ್ಟ್ರ ಮಾದರಿಯಲ್ಲಿ ಲಾಕ್ ಡೌನ್ ಮಾಡಿ ಎಂದು ಸೂಚನೆ ಕೊಟ್ಟಿದೆ. ಹೆಚ್ಚು ಪ್ರಕರಣಗಳು ಎಲ್ಲಿವೆಯೋ ಅಲ್ಲಿ ಲಾಕ್ಡೌನ್ ಮಾಡಬೇಕು ಎಂದು ಹೇಳಿದೆ. ನನ್ನ ಪ್ರಕಾರ ಮೊದಲು ಜೀವ ಉಳಿಸಿಕೊಂಡು ಜೀವನ ಮಾಡಬೇಕು. ಜೀವ ಉಳಿಸುವುದಕ್ಕೆ ಏನು ಮಾಡಬೇಕೋ ಅದನ್ನು ನಾವೆಲ್ಲರೂ ಮಾಡಲೇಬೇಕು. ಪ್ರಧಾನ ಮಂತ್ರಿ ಅವರ ಮಾರ್ಗಸೂಚಿಗಳನ್ನು ಫಾಲೋ ಮಾಡಬೇಕು ಎಂದಿದ್ದಾರೆ.
ಬೆಂಗಳೂರಿನಲ್ಲಿ ಸೆಮಿ ಲಾಕ್ಡೌನ್ ಮಾಡಿದ್ದಕ್ಕೆ ಬೆಂಗಳೂರಿನ ಜನರು ಗ್ರಾಮೀಣ ಭಾಗಕ್ಕೆ ಹೋಗಿದ್ದಾರೆ. ಇದರಿಂದ ಗ್ರಾಮೀಣ ಭಾಗದಲ್ಲೂ ಕೊರೋನಾ ಹಬ್ಬುತ್ತಿದೆ. ಬೆಂಗಳೂರಿನಷ್ಟೇ ಗಂಭೀರವಾಗಿ ಬೇರೆ ಜಿಲ್ಲೆಗಳಲ್ಲೂ ಕ್ರಮ ತೆಗೆದುಕೊಳ್ಳಬೇಕು ಎಂದು ಪರೋಕ್ಷವಾಗಿ ಕರ್ನಾಟಕದಲ್ಲಿ ಕಂಪ್ಲೀಟ್ ಲಾಕ್ಡೌನ್ ಬಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಒಲವು ತೋರಿದ್ದಾರೆ.
ಇದನ್ನೂ ಓದಿ: Karnataka Lockdown: ಕರ್ನಾಟಕದಲ್ಲಿ ಜನತಾ ಲಾಕ್ಡೌನ್ ವಿಫಲ; ಸಂಪೂರ್ಣ ಲಾಕ್ಡೌನ್ಗೆ ಸರ್ಕಾರ ನಿರ್ಧಾರ?
ನಾನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಜೊತೆ ಮಾತಾಡಿದ್ದೇನೆ. ಆಕ್ಸಿಜನ್ ಬಗ್ಗೆ ನಿನ್ನೆ ಮಾತಾಡಿದ್ದೇನೆ. ಮಹಾರಾಷ್ಟ್ರ ಹಾಗೂ ತೆಲಂಗಾಣಕ್ಕೆ ರಾಜ್ಯದಿಂದ ಹೋಗುವ ಆಕ್ಸಿಜನ್ ಅನ್ನು ಇಲ್ಲೇ ಕೊಡಿಸುವ ಕೆಲಸ ಮಾಡಬೇಕು ಎಂದು ಹೇಳಿದ್ದೇನೆ. ಇವತ್ತು 975 ಮೆಟ್ರಿಕ್ ಟನ್ ಆಕ್ಸಿಜನ್ ಕೊಡುತ್ತಿದ್ದಾರೆ.
ಸಿಎಂ ಯಡಿಯೂರಪ್ಪನವರ ವಿರುದ್ಧ ಸ್ವಪಕ್ಷದವರೇ ಮುನಿಸಿಕೊಂಡ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಸದಾನಂದ ಗೌಡ, ನಾನು ಈ ಆರೋಪವನ್ನು ಒಪ್ಪುವುದಿಲ್ಲ. ಸತ್ಯ ಸಂಗತಿಗಳನ್ನು ಹಲವಾರು ಸಂದರ್ಭದಲ್ಲಿ ಹೇಳುವ ಅನಿವಾರ್ಯತೆಯಿದ್ದಾಗ ಹೇಳಬೇಕು. ಅದರ ಬಗ್ಗೆ ಹೆಚ್ಚೆಚ್ಚು ಮಾಹಿತಿ ಪಡೆದುಕೊಳ್ಳಬೇಕು. ಹಾಗಾಗಿ, ದೋಷಾರೋಪ ಹಾಗೂ ರಾಜಕೀಯ ಭಾಗ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.
ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಸಂಸದ ತೇಜಸ್ವಿ ಸೂರ್ಯ ಒಂದು ಕೋಮಿಗೆ ಸೇರಿದ ಪಟ್ಟಿ ಬಿಡುಗಡೆ ಮಾಡಿದ್ದಾರೆ ಎಂಬ ಆರೋಪದ ವಿಚಾರವಾಗಿ ಕಿಡಿ ಕಾರಿರುವ ಡಿ.ವಿ. ಸದಾನಂದ ಗೌಡ, ಒಂದೇ ಕೋಮಿನವರೇ ಮಾಡಿದ್ದರೆ ಬೇರೆ ಕೋಮಿನವರ ಬಗ್ಗೆ ಹೇಳೋಕೆ ಆಗುತ್ತಾ? ಆ ಕೋಮಿನವರೇ ಹೆಚ್ಚಿರುವ ಕಾರಣ ಅವರಿಗೆ ಸಿಕ್ಕ ಮಾಹಿತಿ ಪ್ರಕಾರ ಹೇಳಿದ್ದಾರೆ. ತನಿಖೆಯಿಂದ ಸತ್ಯ ಹೊರ ಬರಬೇಕು. ನಿನ್ನೆ ಬಂಧನಕ್ಕೆ ಒಳಗಾದವರು ಆ ಕೋಮಿನವರು ಅಲ್ಲವೇ ಅಲ್ಲ. ಹಾಗಾಗಿ ಕೋಮಿನ ಹೆಸರು ಜೋಡಿಸುವುದು ಅಷ್ಟು ಸರಿಯಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ