ಬೆಂಗಳೂರು (ಏ. 26): ಸೋಂಕು ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ನಾಳೆಯಿಂದ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿದೆ. ಏ. 27ರಿಂದ ರಾತ್ರಿಯಿಂದ ಮೇ 10ರವರೆಗೆ ರಾಜ್ಯ ಸಂಪೂರ್ಣ ವಾಗಿ ಸ್ತಬ್ಧವಾಗಲಿದೆ. ಕೊರೋನಾ ನಿಯಂತ್ರಣಕ್ಕೆ ಈ ಕ್ರಮ ಅನಿವಾರ್ಯವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ಲಾಕ್ಡೌನ್ನಿಂದಾಗಿ ಬಡ ಮತ್ತು ಮದ್ಯಮ ವರ್ಗದವರು ಕಂಗೆಟ್ಟಿದ್ದಾರೆ. ಕಳೆದ ಬಾರಿ ಲಾಕ್ಡೌನ್ನಿಂದ ಉದ್ಯೋಗವಿಲ್ಲದೇ, ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದ ಜನರಿಗೆ ಈ ಬಾರಿಯ ಮತ್ತೊಂದು ಲಾಕ್ಡೌನ್ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಕಳೆದ ಬಾರಿ ಏಕಾಏಕಿ ಲಾಕ್ಡೌನ್ನಿಂದಾಗಿ ಊರು ತೊರೆಯದೇ ರಾಜಧಾನಿಯಲ್ಲಿ ತೊಂದರೆಗೆ ಒಳಗಾದ ಜನಸಾಮಾನ್ಯರು, ಈ ಬಾರಿ ಕೂಡ ತೊಂದರೆ ಅನುಭವಿಸುವುದು ಬೇಡ ಎಂದು ರಾಜಧಾನಿ ತೊರೆಯಲು ಮುಂದಾಗಿದ್ದಾರೆ.
ಲಾಕ್ಡೌನ್ ಜಾರಿಗೆ ಇನ್ನೂ ಒಂದು ದಿನ ಬಾಕಿ ಇದೆ. ಈ ನಡುವೆಯೇ ತಾರಾತುರಿಯಲ್ಲಿ ಮಧ್ಯಮ ಮತ್ತು ಬಡ ವರ್ಗದವರು ರಾಜಧಾನಿ ತೊರೆಯಲು ಮುಂದಾಗಿದ್ದಾರೆ. ಸರ್ಕಾರ ಕಟ್ಟಡ ಕೂಲಿ ಕಾರ್ಮಿಕರು ಮತ್ತು ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಅವಕಾಶ ನೀಡಿದೆ. ಆದರೆ, ಉಳಿದಂತೆ ಇತರೆ ಕಾರ್ಯದಲ್ಲಿ ನಿರತರಾಗಿವರುವ ವಲಸಿಗರು ಈ ಲಾಕ್ಡೌನ್ನಿಂದ ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಕೆಲಸವಿಲ್ಲದೇ ಅನಗತ್ಯ ಖರ್ಚಿನೊಂದಿಗೆ ದಿನ ದೂಡುವ ಬದಲು ಸ್ವಂತ ಊರಿಗೆ ತೆರಳುವುದು ಲೇಸು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಈಗಾಗಲೇ ವಿಕೇಂಡ್ ಲಾಕ್ಡೌನ್ ಘೋಷಣೆ ಮಾಡಿದ ಹಿನ್ನಲೆ ಕೆಲವು ವಲಸಿಗರು ಊರು ತೊರೆಯಲು ನಿರ್ಧರಿಸಿದ್ದು, ಇದೀಗ ರಾಜ್ಯ ಸಂಪೂರ್ಣ ಸ್ತಬ್ದವಾಗುತ್ತಿರುವ ಹಿನ್ನಲೆ ಜನರು ಮೆಜೆಸ್ಟಿಕ್ನತ್ತ ದಾಪುಗಾಲು ಇಡಲು ಮುಂದಾಗಿದ್ದಾರೆ. ಜನರು ಕುಟುಂಬ ಸಮೇತ ಸಾರಿಗೆ ಬಸ್ ನಿಲ್ದಾಣದತ್ತ ಮುಖ ಮಾಡಿರುವ ದೃಶ್ಯ ಕಂಡು ಬಂದಿದೆ
ಇದನ್ನು ಓದಿ: ಮದ್ಯದಂಗಡಿ ಮುಂದೆ ಸಾಲು ನಿಂತ ಪಾನಪ್ರಿಯರು
ಇನ್ನು ಕೊರೋನಾ ಹಿನ್ನಲೆ ಬಸ್ಗಳಲ್ಲಿ ಶೇ 50 ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೋವಿಡ್ ಮಾರ್ಗಸೂಚಿ ನಡುವೆ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗುತ್ತಿದ್ದು, ಕೆಸ್ಆರ್ಟಿಸಿ ಹೆಚ್ಚುವರಿ ಬಸ್ ನಿಯೋಜಿಸುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗಿದೆ. ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗಟ್ಟು ಮೂಟೆ ಕಟ್ಟಿಕೊಂಡು ಆಗಮಿಸುತ್ತಿದ್ದು, ಸಂಜೆ ಹೊತ್ತಿಗೆ ಮೆಜೆಸ್ಟಿಕ್ ಬರುವವರ ಸಂಖ್ಯೆ ಮತ್ತಷ್ಟು ಹೆಚ್ಚುವ ನೀರಿಕ್ಷೆ ಇದೆ.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಕರ್ನಾಟಕದ ವಲಸಿಗರು ಕಂಡು ಬಂದಿದ್ದಾರೆ. ಸೋಂಕು ಕಡಿಮೆಯಾದ ಹಿನ್ನಲೆ ಇವರೆಲ್ಲಾ ಕಳೆದೆರಡೂ ಮೂರು ತಿಂಗಳ ಹಿಂದೆ ರಾಜಧಾನಿಗೆ ಮತ್ತೆ ಕೆಲಸ ಅರಸಿ ವಲಸೆ ಬಂದಿದ್ದರು. ಈಗ ಮತ್ತೊಮ್ಮೆ ಲಾಕ್ಡೌನ್ ಘೋಷಣೆಯಾದ ಬಳಿಕ ತಮ್ಮೂರಿನತ್ತ ಪ್ರಯಾಣಕ್ಕೆ ಮುಂದಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ