ಬೆಂಗಳೂರು(ಮೇ 24): ಇಂದಿನಿಂದ ರಾಜ್ಯದಲ್ಲಿ ಎರಡನೇ ಹಂತದ ಲಾಕ್ಡೌನ್ ಜಾರಿಯಾಗಿದ್ದು, ಮತ್ತಷ್ಟು ಬಿಗಿಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಅನಗತ್ಯವಾಗಿ ರಸ್ತೆಗಿಳಿಯುವ ವಾಹನ ಸವಾರರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ(Home Minister Basavaraj Bommai) ಖಡಕ್ ಸಂದೇಶ ರವಾನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದ ರಾಜ್ಯದಲ್ಲಿ 2ನೇ ಹಂತದ ಲಾಕ್ಡೌನ್ ಜಾರಿಯಾಗಿದ್ದು, ಇನ್ನಷ್ಟು ಬಿಗಿ ಕ್ರಮಕ್ಕೆ ರಾಜ್ಯದ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಅನಗತ್ಯವಾಗಿ ಓಡಾಡುವ ವಾಹನಗಳನ್ನು ಸೀಜ್ ಮಾಡುವ ಪರಿಪಾಠವನ್ನು ಮುಂದುವರೆಸಲಾಗುತ್ತದೆ. ಯಾವುದೇ ಕಾರಣಕ್ಕೂ ಅನಗತ್ಯವಾಗಿ ಓಡಾಡುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಇನ್ನು, ಗ್ರಾಮೀಣ ಪ್ರದೇಶಗಳಲ್ಲಿ ಲಾಕ್ಡೌನ್ ಪರಿಣಾಮಕಾರಿಯಾಗ್ತಿದೆ. ಆದರೆ ಪಟ್ಟಣ ಪ್ರದೇಶದಲ್ಲಿ ಉಲ್ಲಂಘನೆ ಪ್ರಕರಣ ಜಾಸ್ತಿಯಾಗುತ್ತಿವೆ. ಹೀಗಾಗಿ ಬಿಗಿ ಕ್ರಮದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಇನ್ಮುಂದೆ ಬಿಗಿ ಕ್ರಮಕ್ಕೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. ಆ ಮೂಲಕ ರಾಜ್ಯ ರಾಜಧಾನಿಯಲ್ಲಿ ಲಾಕ್ಡೌನ್ ಮತ್ತಷ್ಟು ಬಿಗಿಯಾಗುವ ಸುಳಿವು ನೀಡಿದರು.
ಜಿಲ್ಲೆಗಳಲ್ಲಿ ಮೂರು ದಿವಸ, ನಾಲ್ಕು ದಿವಸ ಲಾಕ್ಡೌನ್ ಯಶಸ್ವಿಯಾಗಿದೆ. ಮಾರ್ಕೆಟ್ ಇರೋಕಡೆ ಸ್ವಲ್ಪ ಕಷ್ಟ ಆಗುತ್ತಿದೆ. ಹಾಗಾಗಿ ಮಾರ್ಕೆಟ್ ವಿಕೇಂದ್ರೀಕರಣಕ್ಕೆ ಸೂಚನೆ ನೀಡಲಾಗಿದೆ ಎಂದರು.
ಇನ್ನು, ಕೊರೋನಾ ಲಸಿಕೆ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ವ್ಯಾಕ್ಸಿನ್ ಅಕ್ರಮ ಮಾಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಂತವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ರೆಮ್ಡಿಸಿವಿರ್ ಇಂಜೆಕ್ಷನ್ ವಿಷಯದಲ್ಲಿ ಈ ರೀತಿ ಮಾಡಿದರು. ಆ ನಂತರ ಇವಾಗ ಅದು ಸರಿ ಹೋಗಿದೆ. ಇವಾಗ ವ್ಯಾಕ್ಸಿನೇಷನ್ ದಂಧೆ ಬಿಡಲ್ಲ. ಇಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ರೆಮಿಡಿಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಈಗಾಗಲೇ ಪೋಲಿಸರು ಕ್ರಮ ಕೈಗೊಂಡಿದ್ದಾರೆ. ಕೇಸ್ ಹಾಕಲಾಗ್ತಿದೆ. ಬ್ಲಾಕ್ ಮಾರ್ಕೆಟ್ ಕಂಟ್ರೋಲ್ ಮಾಡಲಾಗ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ವ್ಯಾಕ್ಸಿನೇಷನ್ ಕೊರತೆ ವಿಚಾರವಾಗಿ, ಕೊರತೆ ನೀಗಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗ್ತಿದೆ. ಖಾಸಗಿಯವರು ಹೆಚ್ಚಿನ ದರದಲ್ಲಿ ವ್ಯಾಕ್ಸಿನೇಷನ್ ನೀಡುವ ಸಂಬಂಧ ಕೇಂದ್ರ ಒಂದು ನಿಯಮ ರೂಪಿಸುವ ಅಗತ್ಯ ಇದೆ ಎಂದರು.
50 ವರ್ಷ ದಾಟಿದ ಪೋಲಿಸರಿಗೆ ಶಿಫ್ಟ್ ವೈಸ್ ಕೆಲಸ ಮಾಡಲಿಕ್ಕೆ ಅವಕಾಶ ಮಾಡಿಕೊಲಾಗಿದೆ. ಅವರಿಗೆ ಸುರಕ್ಷತಾ ಕ್ರಮಕ್ಕೆ ಒತ್ತು ನೀಡಿದ್ದೇವೆ. ಪೊಲೀಸರ ಸುರಕ್ಷತೆಗೆ ಗೃಹ ಇಲಾಖೆ ಆದ್ಯತೆ ನೀಡಿದೆ. ಬೆಂಗಳೂರಿನಲ್ಲಿ ಸ್ಟ್ರಿಕ್ಟ್ ಆಗಿ ಸೂಚನೆ ಕೊಡಲಾಗಿದೆ. ಬಿಬಿಎಂಪಿಯವರು ಒಂದಷ್ಟು ಕೈಜೋಡಿಸಬೇಕಾಗಿದೆ. ಮಾರ್ಕೆಟ್ ಇರುವ ಜಾಗದಲ್ಲಿ ಸ್ವಲ್ಪ ಕಂಟ್ರೋಲ್ ತರಬೇಕಾಗಿದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ