ಬೆಂಗಳೂರು (ಜೂನ್ 6): ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಕಗ್ಗಂಟು ಇನ್ನೂ ಬಗೆಹರಿದಿಲ್ಲ. ಸಚಿವ ಸಿ.ಪಿ. ಯೋಗೇಶ್ವರ್ ಬಣ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಒತ್ತಾಯಿಸಲು ಮುಂದಾಗಿದ್ದರು. ಆದರೆ, ಅವರನ್ನು ಭೇಟಿಯಾಗಲು ಹೈಕಮಾಂಡ್ ನಾಯಕರು ನಿರಾಕರಿಸಿದ್ದರು. ರಾಜ್ಯದಲ್ಲಿ ಸಿಎಂ ಬದಲಾಗುತ್ತಾರೆಂದು ಕೆಲವು ಬಿಜೆಪಿ ನಾಯಕರೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ತಮ್ಮ ವಿರೋಧ ಬಣಕ್ಕೆ ಚುರುಕು ಮುಟ್ಟಿಸಲು ಸಿಎಂ ಯಡಿಯೂರಪ್ಪ ತಮ್ಮ ಮಗ ಬಿ.ವೈ. ವಿಜಯೇಂದ್ರ ಮೂಲಕ ದೆಹಲಿಯ ಹೈಕಮಾಂಡ್ ನಾಯಕರಿಗೆ ದೂರು ಕೊಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನನ್ನ ಮೇಲೆ ಹೈಕಮಾಂಡ್ ವಿಶ್ವಾಸ ಇಟ್ಟಿದೆ. ಅವರು ಎಷ್ಟು ದಿನ ವಿಶ್ವಾಸ ಇಟ್ಟು ಮುಂದುವರೆಯಿರಿ ಅನ್ನುತ್ತಾರೋ ಅಲ್ಲಿಯವರೆಗೂ ಇರುತ್ತೇನೆ. ಯಾವಾಗ ರಾಜೀನಾಮೆ ಕೊಡಿ ಅಂತಾರೋ ಆಗ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದಿದ್ದಾರೆ.
ಕರ್ನಾಟಕದಲ್ಲಿ ಯಡಿಯೂರಪ್ಪನವರಿಗೆ ಪರ್ಯಾಯ ನಾಯಕ ಇಲ್ಲವೆಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ಪರ್ಯಾಯ ನಾಯಕತ್ವ ಇಲ್ಲ ಎಂಬುದನ್ನು ನಾನು ಒಪ್ಪೋದಿಲ್ಲ. ದೇಶದಲ್ಲಿ, ರಾಜ್ಯದಲ್ಲಿ ಪರ್ಯಾಯ ನಾಯಕರು ಇದ್ದೇ ಇದ್ದಾರೆ. ಆಯಾಯ ಕಾಲಕ್ಕೆ ತಕ್ಕಂತೆ ಪರ್ಯಾಯ ನಾಯಕರು ಸಿಗುತ್ತಾರೆ. ರಾಜ್ಯದಲ್ಲೂ ಪರ್ಯಾಯ ನಾಯಕರು ಇಲ್ಲ ಅಂತ ಏನಿಲ್ಲ. ಇದನ್ನ ನಾನು ಒಪ್ಪುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Rohini Sindhuri: ಟ್ರಾನ್ಸ್ಫರ್ ಕ್ಯಾನ್ಸಲ್ ಮಾಡುವಂತೆ ರೋಹಿಣಿ ಸಿಂಧೂರಿ ಮನವಿ; ಬಿಲ್ಕುಲ್ ಆಗಲ್ಲ ಎಂದ ಸಿಎಂ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಹೈಕಮಾಂಡ್ ಸೂಚಿಸಿದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿರುವುದು ತೀವ್ರ ಕುತೂಹಲ ಉಂಟುಮಾಡಿದೆ. ರಾಜೀನಾಮೆ ಕೊಡುವ ವಿಚಾರವಾಗಿ RSS ನಾಯಕರ ಜತೆಗಿನ ಚರ್ಚೆ ಬಳಿಕ ನಿಲುವು ಪ್ರಕಟಿಸಿದ್ದಾರಾ? ಎಂಬ ಅನುಮಾನ ಉಂಟಾಗಿದೆ.
ಕಳೆದ ವಾರ RSS ನಾಯಕರ ಜತೆ ಫೋನ್ ಮೂಲಕ ಮಾತನಾಡಿದ್ದ ಯಡಿಯೂರಪ್ಪ ಅದಾದ ಬಳಿಕ ದೆಹಲಿ ನಾಯಕರನ್ನು ಭೇಟಿಯಾಗಲು ತಮ್ಮ ಮಗ ಬಿ.ವೈ. ವಿಜಯೇಂದ್ರರನ್ನು ಕಳುಹಿಸಿದ್ದರು. ಅಮಿತ್ ಶಾ, ಜೆ.ಪಿ. ನಡ್ಡಾ, ಅರುಣ್ ಸಿಂಗ್ ಭೇಟಿಗಾಗಿ ದೆಹಲಿ ಯಾತ್ರೆ ಕೈಗೊಂಡಿದ್ದ ವಿಜಯೇಂದ್ರಗೆ ಅಮಿತ್ ಷಾ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಮೂರು ದಿನ ಕಾಯಿಸಿ ಭೇಟಿಗೆ ಅವಕಾಶ ಕೊಟ್ಟಿದ್ದ ಜೆ.ಪಿ. ನಡ್ಡಾ ಕೂಡ ಸೂಕ್ತವಾಗಿ ಈ ಬಗ್ಗೆ ಸ್ಪಂದಿಸಿರಲಿಲ್ಲ ಎನ್ನಲಾಗುತ್ತಿದೆ. ನಿನ್ನೆ ದೆಹಲಿಯಲ್ಲಿ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದ ಬಿ.ಎಲ್. ಸಂತೋಷ್ ಯಡಿಯೂರಪ್ಪನವರ ರಾಜೀನಾಮೆ ಬಗ್ಗೆ ಸಂದೇಶ ರವಾನಿಸಿದ್ದಾರಾ? ಎಂಬ ಕುತೂಹಲವೂ ಸೃಷ್ಟಿಯಾಗಿದೆ.
ಇದನ್ನೂ ಓದಿ: Amazon Blunder: ಕೊನೆಗೂ ಎಚ್ಚೆತ್ತುಕೊಂಡ ಅಮೇಜಾನ್; ಕನ್ನಡ ಧ್ವಜವಿದ್ದ ಬಿಕಿನಿ ಚಿತ್ರ ಬದಲಾಯ್ತು!
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಗಲಾಟೆ ಕುರಿತು ಮಾತನಾಡಿರುವ ಸಿಎಂ ಯಡಿಯೂರಪ್ಪ, ಇಂದು ಬೆಳಗ್ಗೆ ರೋಹಿಣಿ ಸಿಂಧೂರಿ ನನ್ನನ್ನು ಭೇಟಿಯಾಗಲು ಬಂದಿದ್ದರು. ಅವರನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ರದ್ದು ಮಾಡಲು ಮನವಿ ಮಾಡಿದರು. ಆದರೆ ವರ್ಗಾವಣೆ ರದ್ದು ಮಾಡಲು ಸಾಧ್ಯವಿಲ್ಲ ಎಂದು ನಾನು ಸ್ಪಷ್ಟಪಡಿಸಿರುವೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ