ಇಲ್ಲಿಂದಲೇ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇವೆ ಹುಷಾರ್.. BBMP ಇಂಜಿನಿಯರ್​ಗೆ ಹೈಕೋರ್ಟ್ ತರಾಟೆ!

ರಸ್ತೆ ಗುಂಡಿಗೆ 9 ಜನರು ಪ್ರಾಣ ಕಳೆದುಕೊಂಡಿದ್ದಾರೆ. ನಿಮ್ಮ ಮುಖ್ಯ ಇಂಜಿನಿಯರ್ ಮೇಲೇಕೆ ಎಫ್ಐಆರ್ ದಾಖಲಿಸಬಾರದು..? ನಿಮ್ಮ ಇಂಜಿನಿಯರ್ ಗಳು ಜೈಲಿಗೆ ಹೋಗಲಿ. ಇಂಜಿನಿಯರ್ ಗಳು ಜನರ ಜೀವನದ ಜೊತೆ ಆಟವಾಡುತ್ತಿದ್ದಾರೆ.

ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್

  • Share this:
ಬೆಂಗಳೂರು: ರಾಜ್ಯ ರಾಜಧಾನಿ (Bengaluru) ಎಷ್ಟೋ ಅಭಿವೃದ್ಧಿ ಕಂಡಿದ್ದರೂ ರಸ್ತೆ ಗುಂಡಿಗಳು (Potholes) ಮಾತ್ರ ನಗರಕ್ಕೆ ಕಪ್ಪು ಚುಕ್ಕೆಯಂತಿವೆ. ವಾಹನ ಸವಾರರು ದಿನನಿತ್ಯ ಗುಂಡಿಗಳಿಂದ ಬಿಬಿಎಂಪಿಗೆ (BBMP) ಹಿಡಿಶಾಪ ಹಾಕೋದು ಸಾಮಾನ್ಯವಾಗಿಬಿಟ್ಟಿದೆ. ಇಂದು ಕರ್ನಾಟಕ ಹೈಕೋರ್ಟ್​​ (Karnataka High Court) ರಸ್ತೆ ಗುಂಡಿಗಳ ಸಂಬಂಧ ಬೆಂಗಳೂರು ಮಹಾನಗರ ಪಾಲಿಕೆಗೆ ಚಾಟಿ ಬೀಸಿದೆ. ಬಿಬಿಎಂಪಿ ನಿರ್ಮಿಸಿದ ರಸ್ತೆಗಳಲ್ಲಿ ಗುಂಡಿ ವಿಚಾರವಾಗಿ ಹೈಕೋರ್ಟ್ ಗೆ ಬಿಬಿಎಂಪಿ ಮುಖ್ಯ ಇಂಜಿನಿಯರ್ ಇಂದು ಹಾಜರಾಗಿದ್ದರು. ರಸ್ತೆ ಗುಂಡಿಗಳ ಸಂಬಂಧ ಬಿಬಿಎಂಪಿ ಕೈಗೊಂಡ ಕ್ರಮದ ಬಗ್ಗೆ ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿತು. ರಸ್ತೆ ಗುಂಡಿಗೆ 9 ಜನರು ಪ್ರಾಣ ಕಳೆದುಕೊಂಡಿದ್ದಾರೆ. ನಿಮ್ಮ ಮುಖ್ಯ ಇಂಜಿನಿಯರ್ ಮೇಲೇಕೆ ಎಫ್ಐಆರ್ ದಾಖಲಿಸಬಾರದು..? ನಿಮ್ಮ ಇಂಜಿನಿಯರ್ ಗಳು ಜೈಲಿಗೆ ಹೋಗಲಿ. ಇಂಜಿನಿಯರ್ ಗಳು ಜನರ ಜೀವನದ ಜೊತೆ ಆಟವಾಡುತ್ತಿದ್ದಾರೆ. ಪ್ರತಿ ಮಳೆಯ ನಂತರ ರಸ್ತೆ ಗುಂಡಿಗಳು  ಏಕೆ ಹಾಳಾಗುತ್ತವೆ. ಡಾಂಬರು ಗುಣಮಟ್ಟ ಕಾಪಾಡದವರ ಮೇಲೆ ಯಾವ ಕ್ರಮ ತೆಗೆದುಕೊಂಡಿದ್ದೀರಾ..? ಇಂತಹ ಕೆಟ್ಟ ದುರಸ್ತಿ ಮಾಡಲು ಎಂತಹ ತಂತ್ರಜ್ಞಾನ ಬಳಸುತ್ತೀರಿ?  ಜನರ ಹಣ ಪೋಲಾಗುತ್ತಿರುವ ಬಗ್ಗೆ ಆತಂಕವಿದೆ. ರಿಪೇರಿಯಾದ ರಸ್ತೆಗಳೇ ಗುಂಡಿ ಏಕೆ ಬೀಳುತ್ತಿವೆ. ಕಳಪೆ ರಸ್ತೆಗಳಿಗೆ ಕಾರಣರಾದ ಅಧಿಕಾರಿಗಳನ್ನು ಬಿಡಲ್ಲ ಎಂದು ಬಿಬಿಎಂಪಿಗೆ ಸಿಜೆ ರಿತುರಾಜ್ ಅವಸ್ಥಿ ಎಚ್ಚರಿಕೆ ನೀಡಿದರು.

ಇಲ್ಲಿಂದಲೇ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇವೆ..

ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು. ನೀವು ಯಾಂತ್ರಿಕ ಗುಂಡಿ ಮುಚ್ಚುವ ಯಂತ್ರ ಬಳಸಿದ್ದೀರಾ ಎಂಬ ಹೈಕೋರ್ಟ್ ಪ್ರಶ್ನೆಗೆ ಪ್ರಹ್ಲಾದ್ ಗೊಂದಲಕಾರಿ ಉತ್ತರ ನೀಡಿದರು. ಮೊದಲಿಗೆ ಹೌದು ಎಂದು ನಂತರ ಇಲ್ಲ ಎಂದ ಮುಖ್ಯ ಇಂಜಿನಿಯರ್ ವಿರುದ್ಧ ಹೈಕೋರ್ಟ್ ಗರಂ ಆಯಿತು. ಕೋರ್ಟ್ ಅನ್ನು ದಾರಿ ತಪ್ಪಿಸಲು ಯತ್ನಿಸಿದರೆ ಹುಷಾರ್.. ಇಲ್ಲಿಂದಲೇ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇವೆ. ನೀವು ಕೋರ್ಟ್ ನಲ್ಲಿದ್ದೀರಾ ಎಚ್ಚರವಿರಲಿ ಎಂದು ಮುಖ್ಯ ಇಂಜಿನಿಯರ್ .ಎಸ್.ಪ್ರಹ್ಲಾದ್ ಗೆ ಸಿಜೆ ರಿತುರಾಜ್ ಅವಸ್ಥಿ ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: Hijab And Saffron Shawl: ಹಿಜಾಬ್-ಕೇಸರಿ ವಿವಾದದ ನಡುವೆ ನೀಲಿ ಶಾಲ್ ಧರಿಸಿ ಬಂದು ವಿದ್ಯಾರ್ಥಿಗಳು; ಪ್ರಾಂಶುಪಾಲರು ಶಾಕ್!

ಪ್ರಕರಣ ಸಂಬಂಧ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ 1 ವಾರಗಳ ಕಾಲ ಸಮಯ ಕೋರಿದ್ರು. ಈ ಹಿನ್ನೆಲೆಯಲ್ಲಿ ಫೆ.15 ಕ್ಕೆ ವಿಚಾರಣೆಯನ್ನು  ಹೈಕೋರ್ಟ್ ಮುಂದೂಡಿತು. ಜೊತೆಗೆ ರಸ್ತೆ ಗುಂಡಿ ಮುಚ್ಚುವ ನೀಲನಕ್ಷೆಗೆ ಕೋರ್ಟ್​​ ಸೂಚನೆ ನೀಡಿತು. ಯಾಂತ್ರಿಕ ರಸ್ತೆ ಗುಂಡಿ ಮುಚ್ಚುವ ತಂತ್ರಜ್ಞಾನ ಬಳಸಿ, ಗುಣಮಟ್ಟ ಉತ್ತಮವಾಗಿದ್ದರೆ ಮಾತ್ರ ಈ ತಂತ್ರಜ್ಞಾನ ಬಳಸಿ ಎಂದು ಸೂಚಿಸಿದೆ.

ನಗರ ಪೊಲೀಸ್ ಆಯುಕ್ತರಿಗೆ BBMP ಪತ್ರ

ಬಿಬಿಎಂಪಿಗೆ  ಕೆಟ್ಟ ಮೇಲೆ ಬುದ್ಧಿ ಬಂದಂತೆ ಕಾಣುತ್ತಿದೆ. ಇತ್ತೀಚೆಗೆ ರಸ್ತೆಗುಂಡಿಗೆ ಮಹಿಳೆಯೊಬ್ಬರು ಬಲಿಯಾಗಿದ್ದರು. ಈ ಸಂಬಂಧ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ರಸ್ತೆಯಲ್ಲಿ ಬೇಕಾಬಿಟ್ಟಿ ಗುಂಡಿ ಅಗೆಯುವವರ ವಿರುದ್ಧ ಶಿಸ್ತುಬದ್ಧ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ. ಬೆಂಗಳೂರಿನಲ್ಲಿ ಬೇಕಾಬಿಟ್ಟಿ ರಸ್ತೆ ಅಗೆದವರ ವಿರುದ್ಧ ಎಫ್ಐಆರ್ ಹಾಕುವಂತೆ ನಗರ ಪೊಲೀಸ್ ಆಯುಕ್ತರಿಗೆ ಬಿಬಿಎಂಪಿ ಪತ್ರ ಬರೆದಿದೆ. ರಸ್ತೆ ಹಾಗೂ ಮೂಲಭೂತ ಸೌಕರ್ಯ ವಿಭಾಗ ಮುಖ್ಯ ಅಭಿಯಂತರರು ಈ ಪತ್ರವನ್ನು ಬರೆದಿದ್ದಾರೆ. ಬೆಂಗಳೂರಿನಲ್ಲಿ ಅನುಮತಿ ಇಲ್ಲದೇ ರಸ್ತೆ ಅಗೆದ್ರೆ ಇನ್ಮುಂದೆ ಎಫ್ಐಆರ್ ದಾಖಲಾಗುತ್ತದೆ. BESCOM, BWSSB ಅಥವಾ ಸಾರ್ವಜನಿಕರು ಯಾರೇ ರಸ್ತೆ ಅಗೆದರೂ ಕಡ್ಡಾಯವಾಗಿ ಅನುಮತಿ ತೆಗೆದುಕೊಳ್ಳಬೇಕು ಮತ್ತು  ಕಾಮಗಾರಿ ಸ್ಥಳದಲ್ಲಿ ಕಡ್ಡಾಯವಾಗಿ ಬೋರ್ಡ್ ಹಾಕಬೇಕೆಂದು ಬಿಬಿಎಂಪಿ ಸೂಚಿಸಿದೆ.
Published by:Kavya V
First published: