ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜನಸಾಂದ್ರತೆ ಹೆಚ್ಚುತ್ತಲೇ ಇದೆ. ಈಗಾಗಲೇ ಒಂದೂವರೆ ಕೋಟಿಗೂ ಅಧಿಕ ಜನ ಬೆಂಗಳೂರಿನಲ್ಲಿ ವಾಸ ಇದ್ದಾರೆ. ದೇಶ, ವಿದೇಶದ ಜನರೂ ಇಲ್ಲೇ ನೆಲೆ ಕಂಡುಕೊಂಡಿದ್ದಾರೆ. ಜನಸಂಖ್ಯೆ ಹೆಚ್ಚಳವಾದಂತೆ ಮಾಲಿನ್ಯ ಪ್ರಮಾಣವೂ ಹೆಚ್ಚುತ್ತಿದೆ. ಇದನ್ನೆಲ್ಲ ತಡೆಯಲು ಮರ ಬೆಳೆಸುವುದು ಅತ್ಯಂತ ಅವಶ್ಯಕ. ಆದರೆ ಕಬ್ಬನ್ ಪಾರ್ಕ್ ಹಾಗೂ ಲಾಲ್‌ಬಾಗ್ ಹೊರತುಪಡಿಸಿದರೆ ಅಲ್ಲಲ್ಲಿ ಚಿಕ್ಕ ಪಾರ್ಕ್‌ಗಳಿವೆ. ಇದೇ ಕಾರಣಕ್ಕಾಗಿ ಲಾಲ್‌ಬಾಗ್‌ಗಿಂದ ದೊಡ್ಡದಾದ ಪಾರ್ಕ್ ಅಥವಾ ಸಸ್ಯೋದ್ಯಾನ ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಅಕ್ಟೋಬರ್ 4, ಸೋಮವಾರ ಮಹತ್ವದ ಸಭೆ ನಡೆಯಲಿದೆ.
ತೋಟಗಾರಿಕೆ ಸಚಿವ ಮುನಿರತ್ನ ಹಾಗೂ ಇಲಾಖೆ ಹಿರಿಯ ಅಧಿಕಾರಿಗಳು ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಸ್ಥಳ ಗುರುತಿಸಿ ಡಿಪಿಆರ್ (ಸಂಪೂರ್ಣ ಯೋಜನಾ ವರದಿ) ಸಿದ್ಧಪಡಿಸುವಂತೆ ಸಚಿವ ಮುನಿರತ್ನ ಸೂಚನೆ ನೀಡಿದ್ದರು.
ಲಾಲ್‌ಬಾಗ್ 240 ಎಕರೆ, ಕಬ್ಬನ್ ಪಾರ್ಕ್ 174ಎಕರೆ
ಲಾರ್ಡ್ ಕಬ್ಬನ್ ಮೈಸೂರು ರಾಜ್ಯದ ಚೀಫ್ ಕಮೀಷನರ್ ಆಗಿದ್ದ ವೇಳೆ 174ಎಕರೆಯಲ್ಲಿ ಪಾರ್ಕ್ ನಿರ್ಮಿಸಿದ್ದರು. ಹೈದರಾಲಿ ಕೂಡ ಹಿಂದೆ 240 ಎಕರೆ ವಿಸ್ತೀರ್ಣದ ಲಾಲ್‌ಬಾಗ್ ನಿರ್ಮಿಸಿದ್ದರು. ಇದೀಗ ಲಾಲ್‌ಬಾಗ್‌ಗಿಂತಲೂ ದೊಡ್ಡ ಪಾರ್ಕ್ ನಿರ್ಮಿಸಲು ಸರ್ಕಾರ ಹೊರಟಿದೆ. ಇದರ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯದ ಸುತ್ತಮುತ್ತಲಿನಲ್ಲಿ 600 ರಿಂದ 800 ಎಕರೆ ಸರ್ಕಾರಿ ಜಮೀನಿದ್ದು, ಅದರಲ್ಲಿ ಪಾರ್ಕ್ ನಿರ್ಮಾಣ ಮಾಡಲು ಮುನಿರತ್ನ ಚಿಂತನೆ ಮಾಡಿದ್ದಾರೆ. ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಆನೇಕಲ್ ಸುತ್ರಮುತ್ತಲಿನಲ್ಲಿ ಲಾಲ್‌ಬಾಗ್‌ಗಿಂತ ದೊಡ್ಡ ಪಾರ್ಕ್ ಮಾಡುವುದು ಅವರ ಉದ್ದೇಶವಾಗಿದೆ.
ಗುಜರಾತ್‌ನ ಸೈನ್ಸ್ ಸಿಟಿ ಮಾದರಿ
ಗುಜರಾತಿನ ಅಹ್ಮದಾಬಾದ್‌ನಲ್ಲಿರುವ ಸೈನ್ಸ್ ಸಿಟಿ ಮಾದರಿಯಲ್ಲಿ ಪಾರ್ಕ್ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಗುಜರಾತ್‌ನಲ್ಲಿ 260 ಎಕರೆ ಪ್ರದೇಶದಲ್ಲಿ ಪಾರ್ಕ್ ನಿರ್ಮಿಸಲಾಗಿದೆ. ಅದೇ ರೀತಿಯಲ್ಲಿಯೇ ಬೆಂಗಳೂರಿನಲ್ಲಿ ಪಾರ್ಕ್ ಮಾಡಲು ಮುಂದಾಗಿದೆ.
Breathing Space
ಬೆಂಗಳೂರಿನಲ್ಲಿ ಈಗಾಗಲೇ ಒಂದೂವರೆ ಕೋಟಿಗೂ ಅಧಿಕ ಜನರಿದ್ದಾರೆ. ಮುಂದುವರಿದು 2050ರ ವೇಳೆಗೆ 3 ಕೋಟಿ ದಾಟಿದರೂ ಅಚ್ಚರಿಯಿಲ್ಲ. ಹೆಚ್ಚುತ್ತಿರುವ ವಾಯುಮಾಲಿನ್ಯ ಅನೇಕ ಖಾಯಿಲೆಗಳನ್ನು ಸೃಷ್ಟಿಸುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೇ ಕಾರಣಕ್ಕೆ ಶ್ವಾಸಕೋಶ ಸಮಸ್ಯೆಯಿಂದ ಉಸಿರುಗಟ್ಟುವಂತ ದುಸ್ಥಿತಿ ಪದೇ ಪದೇ ನಿರ್ಮಾಣವಾಗುತ್ತಿದೆ. ಇಂತಹ ದುಸ್ಥಿತಿ ರಾಜ್ಯದಲ್ಲಿ ಎದುರಾಗಬಾರದು ಎಂದರೆ ಇಂತಹದ್ದೊಂದು ಪಾರ್ಕ್‌ನ ಅವಶ್ಯಕತೆ ಇದೆ. ರಸ್ತೆ, ಫ್ಲೈಓವರ್, ಮೆಟ್ರೋ ಕಾಮಗಾರಿ ನೆಪದಲ್ಲಿ ಈಗಾಗಲೇ ಅನೇಕ ಮರಗಳನ್ನು ಬುಡಮೇಲು ಮಾಡಲಾಗಿದೆ.
ಇದಕ್ಕೆ ಪರಿಹಾರ ಎಂಬಂತೆ ಸರ್ಕಾರ ಮರ ಬೆಳೆಸುತ್ತೇವೆ ಎಂದು ಹೇಳಿದ್ದರೂ ಅದು ಸಾಧ್ಯವಾಗಿಲ್ಲ. ಪ್ರತಿ ಒಂದು ಮರಕ್ಕೆ 30 ಜನ ಅವಲಂಬಿತವಾಗುವಂತೆ ಮಾಡಿದೆ. ಇದಿನ್ನೂ ಮುಂದುವರಿದರೆ ವಿಷಮ ಘಳಿಗೆ ಎದುರಾಗಲಿದೆ. ಬೆಂಗಳೂರಿನ ಜನತೆಗೆ ಇರುವ ಎರಡು Breathing Space ಜೊತೆಗೆ ಬೃಹತ್ ಪ್ರದೇಶದಲ್ಲಿ ಸಸ್ಯೋದ್ಯಾನ ನಿರ್ಮಾಣ ಮಾಡಲು ಹೊರಟಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ.
ವರದಿ: ದಶರಥ್ ಸಾವೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ