ಸಿನಿಮಾ-ಕಿರುತೆರೆ ಕ್ಷೇತ್ರಕ್ಕೆ 6.60 ಕೋಟಿ ಪ್ಯಾಕೇಜ್: ಕಲಾವಿದರಿಗೆ ತಲಾ 3 ಸಾವಿರ ರೂ. ಘೋಷಿಸಿದ ಸರ್ಕಾರ

ರಾಜ್ಯ ಸರ್ಕಾರ 6.60 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಸಿನಿಮಾ-ಕಿರುತೆರೆಯ ಕಲಾವಿದರು, ತಂತ್ರಜ್ಞರಿಗೆ ತಲಾ 3 ಸಾವಿರ ರೂಪಾಯಿಯನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಸಿನಿಮಾ, ಕಿರುತೆರೆ ಕ್ಷೇತ್ರದ 22 ಸಾವಿರ ಮಂದಿಗೆ ತಲಾ ಮೂರು ಸಾವಿರ ರೂ. ಸಿಗಲಿದೆ.

ಚಿತ್ರರಂಗ ಸಿಎಂಗೆ ಮನವಿ ಮಾಡಿತ್ತು

ಚಿತ್ರರಂಗ ಸಿಎಂಗೆ ಮನವಿ ಮಾಡಿತ್ತು

  • Share this:
ಬೆಂಗಳೂರು : ಕೊರೊನಾ ಸಂಕಷ್ಟ, ಲಾಕ್​ಡೌನ್​ನಿಂದಾಗಿ ಸಿನಿಮಾ, ಕಿರುತೆರೆ ಕ್ಷೇತ್ರವೂ ನಷ್ಟಕ್ಕೆ ತುತ್ತಾಗಿದೆ. ಸಿನಿಮಾ ಕ್ಷೇತ್ರವನ್ನೇ ನಂಬಿಕೊಂಡಿರುವ ಸಾವಿರಾರು ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತರೆ ಕ್ಷೇತ್ರಗಳಿಗೆ ಘೋಷಿಸಿದಂತೆ ಸಿನಿಮಾ ಕ್ಷೇತ್ರಕ್ಕೂ ವಿಶೇಷ ಪ್ಯಾಕೇಜ್​ ಘೋಷಿಸಬೇಕು ಎಂಬ ಒತ್ತಾಯ ಕಲಾವಿದರಿಂದ ಕೇಳಿ ಬಂದಿತ್ತು. ಇದಕ್ಕೆ ಮನ್ನಣೆ ನೀಡಿರುವ ಸಿಎಂ ಬಿ.ಎಸ್​.ಯಡಿಯೂರಪ್ಪ ಇಂದು ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್​ ಘೋಷಿಸಿದ್ದಾರೆ.

ಸಿನಿಮಾ ಕ್ಷೇತ್ರ ಮತ್ತು ಕಿರುತೆರೆ ಕಲಾವಿದರು, ತಂತ್ರಜ್ಞರಿಗೆ ರಾಜ್ಯ ಸರ್ಕಾರ 6.60 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಸಿನಿಮಾ-ಕಿರುತೆರೆಯ ಕಲಾವಿದರು, ತಂತ್ರಜ್ಞರಿಗೆ ತಲಾ 3 ಸಾವಿರ ರೂಪಾಯಿಯನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಸಿನಿಮಾ, ಕಿರುತೆರೆ ಕ್ಷೇತ್ರದ 22 ಸಾವಿರ ಮಂದಿಗೆ ತಲಾ ಮೂರು ಸಾವಿರ ರೂ. ಸಿಗಲಿದೆ. ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್​​ ಹೀರೋ ಸೇರಿದಂತೆ ಕಲಾವಿದರ ತಂಡು ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ವಿಶೇಷ ಪ್ಯಾಕೇಜ್​ ಘೋಷಿಸುವಂತೆ ಮನವಿ ಮಾಡಿದ್ದರು.

ನಟರಾದ ಉಪೇಂದ್ರ, ಸುದೀಪ್​​, ಹರ್ಷಿತಾ ಪೂಣಚ್ಚ, ಪ್ರಥಮ್​​ ಸೇರಿದಂತೆ ಹಲವು ನಟನಟಿಯರು ಸಂಕಷ್ಟದಲ್ಲಿರುವ ಕಲಾವಿದರಿಗೆ ಫುಡ್​ ಕಿಟ್​ ನೀಡಿ ಸಹಾಯ ಮಾಡಿದ್ದರು. ಸರ್ಕಾರ ಪ್ಯಾಕೇಜ್ ಘೋಷಣೆ ಮಾಡುವುದಕ್ಕೂ ಮುನ್ನವೇ ನ್ಯಾಷನಲ್ ಐಕಾನ್, ರಾಕಿಂಗ್ ಸ್ಟಾರ್ ಯಶ್ ತಾವೇ ಚಿತ್ರರಂಗಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ನಟ ಯಶ್ ಚಿತ್ರರಂಗದ ಬರೋಬ್ಬರಿ 3220ಕ್ಕೂ ಹೆಚ್ಚು ಮಂದಿ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರಿಗೆ ತಲಾ ಐದು ಸಾವಿರ ರೂಪಾಯಿ ಧನಸಹಾಯ ಮಾಡಲು ಮುಂದಾಗಿದ್ದಾರೆ. ಈ ಕುರಿತು ಈಗಾಗಲೇ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸಾರಾ ಗೋವಿಂದು ಹಾಗೂ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಅವರ ಜೊತೆ ಕುಳಿತು ಚರ್ಚಿಸಿದ್ದಾರೆ. ಎಲ್ಲ ಸದಸ್ಯರ ಅಧಿಕೃತ ಬ್ಯಾಂಕ್ ವಿವರ ತಮಗೆ ಸಿಕ್ಕ ತಕ್ಷಣ ಎಲ್ಲರ ಅಕೌಂಟ್‌ಗಳಿಗೇ ನೇರವಾಗಿ ಹಣ ಜಮೆ ಮಾಡುವುದಾಗಿ ರಾಕಿಂಗ್ ಸ್ಟಾರ್ ಯಶ್ ತಿಳಿಸಿದ್ದಾರೆ.

ಇದನ್ನೂ ಓದಿ: Darshan: ಮೃಗಾಲಯಗಳ ರಕ್ಷಣೆಗೆ ನಿಂತ ದರ್ಶನ್​: ಧನ್ಯವಾದ ಸಲ್ಲಿಸಿದ ಅರವಿಂದ ಲಿಂಬಾವಳಿ

ಕೊರೊನಾ ಮಾಹಾಮಾರಿಯ ಆರ್ಭಟ ಹಾಗೂ ಲಾಕ್‌ಡೌನ್‌ನಿಂದಾಗಿ ಅತಿ ಹೆಚ್ಚು ಪೆಟ್ಟು ತಿಂದಿರುವ, ಈಗಲೂ ಪೆಟ್ಟು ತಿನ್ನುತ್ತಿರುವ ಹಾಗೂ ಲಾಕ್‌ಡೌನ್ ಅನ್‌ಲಾಕ್ ಬಳಿಕವೂ ಹಲವು ದಿನಗಳ ಕಾಲ ಹೆಚ್ಚು ಸಮಸ್ಯೆ ಎದುರಿಸಲಿರುವ ಕ್ಷೇತ್ರ ಅಂದರೆ ಅದು ಚಿತ್ರರಂಗ. ಅದರಲ್ಲಂತೂ ಸ್ಯಾಂಡಲ್‌ವುಡ್ ಕಳೆದ ವರ್ಷದ ಕೊರೊನಾ ಮೊದಲ ಅಲೆಯ ಲಾಕ್ಡೌನ್‌ನಿಂದಲೇ ಇನ್ನೂ ಚೇತರಿಸಿಕೊಂಡಿರಲಿಲ್ಲ. ಈ ವರ್ಷ ಥಿಯೇಟರ್‌ಗಳು ನೂರು ಪ್ರತಿಶತಃ ಹೌಸ್‌ಫುಲ್ ಆಗಿ ಇನ್ನೇನು ಸ್ಯಾಂಡಲ್‌ವುಡ್‌ನಲ್ಲಿ ಸುವರ್ಣ ಕಾಲ ಆರಂಭವಾಯಿತು ಎನ್ನುತ್ತಿರುವಾಗಲೇ ಮತ್ತೆ ಎರಡನೇ ಅಲೆಯ ಆರ್ಭಟ ಪ್ರಾರಂಭವಾಗಿ ಇನ್ನಷ್ಟು ದೊಡ್ಡ ಪೆಟ್ಟು ನೀಡಿದೆ.

ಹೀಗಾಗಿಯೇ ಈ ಎರಡನೇ ಅಲೆಯ ಸಂದರ್ಭದಲ್ಲೂ ಕೊರೊನಾ ಮಹಾಮಾರಿಯನ್ನು ಕಟ್ಟಿಹಾಕಲು ಲಾಕ್‌ಡೌನ್ ಘೋಷಿಸಲಾಗಿದೆ. ಇದರಿಂದಾಗಿ ಥಿಯೇಟರ್‌ಗಳು ಮತ್ತೆ ಬಂದ್ ಆಗಿವೆ, ಸಿನಿಮಾ ಚಿತ್ರೀಕರಣ, ಚಿತ್ರೀಕರಣೋತ್ತರ ಕೆಲಸಗಳು, ಪ್ರಚಾರ, ಸೇರಿದಂತೆ ಎಲ್ಲ ಕೆಲಸಗಳಿಗೂ ಬ್ರೇಕ್ ಬಿದ್ದಿದೆ. ಲಾಕ್‌ಡೌನ್ ಅನ್‌ಲಾಕ್ ಆಗುತ್ತಾ ಎಂಬ ಪ್ರಶ್ನೆಯೂ ಎಲ್ಲರನ್ನೂ ಕಾಡುತ್ತಿದೆ. ಹೀಗೆ ಅನಿಶ್ಚಿತತೆಯ ಕಾರ್ಮೋಡ ಸ್ಯಾಂಡಲ್‌ವುಡ್ ಮೇಲೆ ಆವರಿಸಿದೆ. ಕೆಲಸವಿಲ್ಲದೇ ಕಾರ್ಮಿಕರು, ತಂತ್ರಜ್ಞರು ಮಾತ್ರವಲ್ಲ ಕಲಾವಿದರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆರ್ಥಿಕ ಸಮಸ್ಯೆಯಲ್ಲಿ ನೂರಾರು ಮಂದಿ ಬಳಲಿ ಬೆಂಡಾಗಿದ್ದಾರೆ. ಈಗ ಸರ್ಕಾರದ ವಿಶೇಷ ಪ್ಯಾಕೇಜ್​ನಿಂದ ಕಲಾವಿದರ ಕೊಂಚ ಮಟ್ಟಿಗೆ ನಿಟ್ಟುಸಿರುವ ಬಿಡಬಹುದು ಎಂದು ನಿರೀಕ್ಷಿಸಲಾಗಿದೆ.
Published by:Kavya V
First published: