Rohini Sindhuri vs Shlipa Nag: ರೋಹಿಣಿ ಸಿಂಧೂರಿ, ಶಿಲ್ಪಾನಾಗ್​ ವರ್ಗಾವಣೆ ಮಾಡಿ ಆದೇಶ

ಇಬ್ಬರು ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಇವರ ಜಟಾಪಟಿಗೆ ಸರ್ಕಾರ ಅಂತ್ಯ ಹಾಡಿದೆ

ರೋಹಿಣಿ ಸಿಂಧೂರಿ-ಶಿಲ್ಪಾನಾಗ್

ರೋಹಿಣಿ ಸಿಂಧೂರಿ-ಶಿಲ್ಪಾನಾಗ್

 • Share this:
  ಬೆಂಗಳೂರು : ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಇಬ್ಬರು ಅಧಿಕಾರಿಗಳು ಪರಸ್ಪರ ಆರೋಪ ಪ್ರತ್ಯಾರೋಪ ನಡೆಸುವ ಮೂಲಕ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದರು.  ಈ ಹಿನ್ನೆಲೆ ಇವರನ್ನು ವರ್ಗಾಯಿಸುವ  ಮೂಲಕ ಇಬ್ಬರು ಐಎಎಸ್​ ಅಧಿಕಾರಿಗಳ ಕಿತ್ತಾಟಕ್ಕೆ ಅಂತ್ಯ ಹಾಡಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.

  ಮೈಸೂರು ನೂತನ ಜಿಲ್ಲಾಧಿಕಾರಿ ಯಾಗಿ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಡಾ. ಬಗಾದಿ ಗೌತಮ್​ ಅವನರನ್ನು  ನೇಮಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಆಡಳಿತ ವ್ಯವಸ್ಥಾಪಕ ಲಕ್ಷ್ಮೀಕಾಂತ್​ ರೆಡ್ಡಿ ಅವರನ್ನು ಮೈಸೂರು ಪಾಲಿಕೆ ಆಯುಕ್ತರಾಗಿ ನೇಮಕ ಮಾಡಲಾಗಿದೆ.

  ಕೋವಿಡ್​ ನಿರ್ವಹಣೆ ವಿಚಾರ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿ ಅವರ ನಡೆಗೆ ಬೇಸತ್ತು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ಹುದ್ದೆಗೆ ರಾಜೀನಾಮೆ ನೀಡಿದ್ದರು.  ರಾಜ್ಯ ಮುಖ್ಯ ಕಾರ್ಯದರ್ಶಿಗೆ ಈ ಕುರಿತು ಪತ್ರ ಬರೆದಿದ್ದು, ಅವರು ಜಿಲ್ಲೆಗೆ ಆಗಮಿಸಿದಾಗ ಖುದ್ದು ಪತ್ರವನ್ನು ನೀಡಿದ್ದರು. ಕೆಲಸ ಮಾಡಿದರೂ ಪಾಲಿಕೆ ಕೆಲಸ ಮಾಡುತ್ತಿಲ್ಲ ಎಂದು ನಮ್ಮನ್ನು ಗುರಿಯಾಗಿಸಿಕೊಂಡು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಈ ರೀತಿಯ ಜಿಲ್ಲಾಧಿಕಾರಿ ಯಾವುದೇ ಜಿಲ್ಲೆಗೂ ಸಿಗಬಾರದು ಎಂದು ಶಿಲ್ಪಾ ನಾಗ್​ ಕಳೆದೆರಡು ದಿನಗಳ ಹಿಂದೆ ಪತ್ರಿಕಾಗೋಷ್ಟಿ ನಡೆಸಿದ್ದರು.

  ಈ ನಡೆ ಬೆನ್ನಲ್ಲೇ ಪಾಲಿಕೆ ಸದಸ್ಯರು ಸೇರಿದಂತೆ ಮೈಸೂರಿನ ಎಲ್ಲಾ ಜನಪ್ರತಿನಿಧಿಗಳು ಪಾಲಿಕೆ ಆಯುಕ್ತೆ ಬೆನ್ನಿಗೆ ನಿಂತಿದ್ದು, ರಾಜೀನಾಮೆ ವಾಪಸ್​ ಪಡೆಯುವಂತೆ ಒತ್ತಾಯಿಸುತ್ತಿದ್ದರು. ಈ ನಡುವೆ ಡಿಸಿ ರೋಹಿಣಿ ಸಿಂಧೂರಿ ಬಗ್ಗೆ ವಿರೋಧಿ ಅಲೆ ಹೆಚ್ಚಾಗಿತ್ತು.

  ಶಿಲ್ಪಾ ನಾಗ್​ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಡಿಸಿ ರೋಹಿಣಿ ಸಿಂಧೂರಿ, ನನ್ನ ವಿರುದ್ಧ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಮಾಡಿರುವ ಕಿರುಕುಳದ ಆರೋಪಕ್ಕೆ ಯಾವುದೇ ಆಧಾರ ಇಲ್ಲ. ನನ್ನ ಮೇಲಿನ ಆರೋಪ ಆಧಾರ ರಹಿತವಾಗಿದೆ. ನನ್ನಿಂದ ಕಿರುಕುಳ ನಡೆದಿದೆ ಅನ್ನೋದು ಸುಳ್ಳು. ಜಿಲ್ಲಾಧಿಕಾರಿಯಾದ ನನಗೆ ಕೊರೋನಾ ನಿಯಂತ್ರಣದ ಜವಾಬ್ದಾರಿ ಇದೆ.  ಕೋವಿಡ್ ಸಂದರ್ಭದಲ್ಲಿ ಎಲ್ಲರ ಸಹಕಾರ ಬೇಕಾಗುತ್ತೆ. ಶಿಲ್ಪಾನಾಗ್ ಲೆಕ್ಕ ಕೇಳಿದ್ದಕ್ಕೆ ನನ್ನ ಮೇಲೆ ಆರೋಪ ಮಾಡ್ತಿದಾರೆ ಎಂದು ದೂರಿದ್ದರು
  Published by:Seema R
  First published: