ಕರ್ನಾಟಕದ ಅತ್ಯಂತ ಕೃತಘ್ಞ ರಾಜಕಾರಣಿ ಸಿದ್ದರಾಮಯ್ಯ; ವಲಸೆರಾಮಯ್ಯ ಎಂದು ಬಿಜೆಪಿ ಲೇವಡಿ

ಸಿದ್ದರಾಮಯ್ಯ ಮತ್ತೊಂದು ವಲಸೆಗೆ ಸಿದ್ಧರಾಗಿದ್ದಾರೆ ಎಂದು ನಾವು ಮೊದಲೇ ಹೇಳಿದ್ದೆವು. ಆ ಮಾತು ನಿಜವಾಗಿದೆ. ಸಿಎಂ ಆಗುವ ಕನಸನ್ನು ಸಿದ್ದರಾಮಯ್ಯ ಇನ್ನೂ ಬಿಟ್ಟಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ.

ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ.

ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ.

  • Share this:
ಬೆಂಗಳೂರು (ಮೇ 27): ಕೊರೋನಾ ಅಟ್ಟಹಾಸದ ನಡುವೆಯೂ ಕರ್ನಾಟಕ ರಾಜಕೀಯದಲ್ಲಿ ಕೆಸರೆರಚಾಟ ಮುಂದುವರೆದಿದೆ. ಸಿಎಂ ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕೆಂದು ವಿಪಕ್ಷಗಳು ಒತ್ತಾಯಿಸುತ್ತಿವೆ. ಅದರ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ವಾಗ್ದಾಳಿ ಮುಂದುವರೆಸಿದೆ. ಮುಂಬರುವ ಚುನಾವಣೆಯಲ್ಲಿ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಆಹ್ವಾನ ನೀಡಿದ್ದರು. ಇದರ ಜೊತೆಗೆ ಹೆಬ್ಬಾಳದ ಶಾಸಕ ಭೈರತಿ ಸುರೇಶ್ ಕೂಡ ಆಹ್ವಾನ ನೀಡಿದ್ದರು. ಈ ಬಗ್ಗೆ ಟ್ವಿಟ್ಟರ್​ನಲ್ಲಿ ಲೇವಡಿ ಮಾಡಿರುವ ಬಿಜೆಪಿ ನಾಯಕರು, ಸಿದ್ದರಾಮಯ್ಯ ಮತ್ತೊಂದು ವಲಸೆಗೆ ಸಿದ್ಧರಾಗಿದ್ದಾರೆ ಎಂದು ನಾವು ಮೊದಲೇ ಹೇಳಿದ್ದೆವು. ಆ ಮಾತು ನಿಜವಾಗಿದೆ. ಸಿಎಂ ಆಗುವ ಕನಸನ್ನು ಸಿದ್ದರಾಮಯ್ಯ ಇನ್ನೂ ಬಿಟ್ಟಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಕೋವಿಡ್ ಸಮಯದಲ್ಲೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೊಂದು ವಲಸೆಗೆ ಸಿದ್ದತೆ ನಡೆಸುತ್ತಿದ್ದಾರೆ ಎಂದು ಈ ಮೊದಲೇ ಹೇಳಿದ್ದೆವು. ಈಗ ಆ ಲೆಕ್ಕಾಚಾರ ಸತ್ಯವಾಗಿದೆ ಎಂಬುದಕ್ಕೆ ಸಾಕ್ಷಿ ಲಭಿಸಿದೆ. ಖುದ್ದು ಚಾಮರಾಜ ಪೇಟೆ ಶಾಸಕರೇ ಸಿದ್ದರಾಮಯ್ಯಗೆ ಆಹ್ವಾನ ನೀಡಿದ್ದಾರೆ. ಸಿಎಂ ಕನಸು ಇನ್ನೂ ಬಿಟ್ಟಿಲ್ಲವೇ ಸಿದ್ದರಾಮಯ್ಯ? ಎಂದು ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಲೇವಡಿ ಮಾಡಿದೆ.ಸಿದ್ದರಾಮಯ್ಯ ಉಂಡಮನೆಯ ಜಂತಿ ಎಣಿಸುವ ಜಾಯಮಾ‌ನದವರೆಂದು ದೇವೇಗೌಡರು ಈ ಹಿಂದೆ ಆರೋಪಿಸಿದ್ದರು. ಅದು ಈಗ ನಿಜವಾಗುತ್ತಿದೆ. ರಾಜಕೀಯ ಪುನರ್ಜನ್ಮ ನೀಡಿದ ಬಾದಾಮಿಯಿಂದ ಪಲಾಯನ ಮಾಡುವುದಕ್ಕೆ ಸಿದ್ದರಾಮಯ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರೇ, ನೀವೆಷ್ಟು ಕೃತಘ್ನರು ಎಂಬುದೀಗ ಮನದಟ್ಟಾಗುತ್ತಿದೆ. ರಾಜಕೀಯ ಜೀವನ‌ ಮುಗಿದೇ ಹೋಯಿತು ಎನ್ನುವಾಗ ಸಿದ್ದರಾಮಯ್ಯನವರ ಕೈ ಹಿಡಿದದ್ದು ಬಾದಾಮಿ ಕ್ಷೇತ್ರದ ಜನತೆ. ಆದರೆ, ಕೈ ಹಿಡಿದ ಜನರಿಗೆ ಸಂಕಟದ ಸಂದರ್ಭದಲ್ಲಿ ಅನ್ಯಾಯ ಮಾಡಿದರು ಸಿದ್ದರಾಮಯ್ಯ. ತಮ್ಮ ಕ್ಷೇತ್ರದ ಜನತೆ ಕೋವಿಡ್‌ನಿಂದ ಕಂಗೆಟ್ಟಿರುವಾಗ ಮತ್ತೊಂದು ವಲಸೆಗೆ ಲೆಕ್ಕ ಹಾಕುತ್ತಾ ಕುಳಿತಿರುವುದು ಬಾದಾಮಿ ಜನತೆಗೆ ಮಾಡಿರುವ ಅವಮಾನ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.ಕನ್ನಡ ನಾಡು ಕಂಡ ಅತ್ಯಂತ ಕೃತಘ್ನ ರಾಜಕಾರಣಿಗಳ ಪಟ್ಟಿಗೆ ಸಿದ್ದರಾಮಯ್ಯ ಕೂಡ ಸೇರುತ್ತಾರೆ. ತಮ್ಮನ್ನು ಆಯ್ಕೆ ಮಾಡಿದ ಯಾವ ಕ್ಷೇತ್ರದ ಜನರಿಗೂ ನೀವು ನ್ಯಾಯ ಕೊಡಿಸಲು ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗಿಲ್ಲ ಎಂಬುದಕ್ಕೆ ಮೇಲಿಂದ ಮೇಲೆ ನಡೆಸುವ ವಲಸೆಯೇ ಸಾಕ್ಷಿಯಾಗಿದೆ. ಈಗ ಸಿದ್ದರಾಮಯ್ಯ ಚಿತ್ತ ಚಾಮರಾಜಪೇಟೆಯತ್ತ ಹರಿದಿದೆ ಎಂದು ಬಿಜೆಪಿ ಟೀಕಿಸಿದೆ.ಇದನ್ನೂ ಓದಿ: BS Yediyurappa: ಸಿಎಂ ಯಡಿಯೂರಪ್ಪ ಸದ್ಯಕ್ಕೆ ಸೇಫ್; ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯಿಲ್ಲ ಎಂದ ಬಿಜೆಪಿ ಹೈಕಮಾಂಡ್

ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಕೊಕ್ಕರೆ ಧ್ಯಾನ ಮಾಡುತ್ತಿದ್ದ ಸಿದ್ದರಾಮಯ್ಯ ಈಗ ಮುಂದಿನ‌ ಚುನಾವಣೆಗೆ ಸುರಕ್ಷಿತ ಕ್ಷೇತ್ರ ಹುಡುಕುತ್ತಿರುವುದು ಹಾಸ್ಯಾಸ್ಪದವಾಗಿದೆ. ಚಾಮುಂಡೇಶ್ವರಿ, ಬಾದಾಮಿ, ಚಾಮರಾಜಪೇಟೆ, ಹೆಬ್ಬಾಳ ಕ್ಷೇತ್ರಗಳಾಯಿತು, ಇನ್ನು ಮುಂದಾವುದು ಸಿದ್ದರಾಮಯ್ಯ? ಕೇರಳದ ವಯನಾಡಿನಲ್ಲಿಯೂ ನಿಲ್ಲಲು ಸಾಧ್ಯವಾ ಎಂದು ಒಮ್ಮೆ ವಿಚಾರಿಸಿ ನೋಡಿ ಎಂದು ಬಿಜೆಪಿ ಲೇವಡಿ ಮಾಡಿ ಟ್ವೀಟ್ ಮಾಡಿದೆ.ಮುಂದಿನ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಜಮೀರ್ ಅಹಮದ್ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ನಾನು ಈಗ ಬಾದಾಮಿ ಕ್ಷೇತ್ರದ ಶಾಸಕ. ಚುನಾವಣೆಗೆ ಇನ್ನೂ 2 ವರ್ಷ ಇದೆ ಆಮೇಲೆ ನೋಡೋಣ ಎಂದು ಹೇಳಿದ್ದರು.

ನನ್ನ ಮೇಲಿನ ಅಭಿಮಾನದಿಂದ ಜಮೀರ್ ತಮ್ಮ ಕ್ಷೇತ್ರವಾಧ ಚಾಮರಾಜಪೇಟೆಯಿಂದ ಸ್ಪರ್ಧೆ ಮಾಡಲು ಆಹ್ವಾನ ನೀಡಿದ್ದಾರೆ. ಆದರೆ, ಚುನಾವಣೆಗೆ ಇನ್ನೂ 2 ವರ್ಷವಿದೆ ಎಂದಿದ್ದರು. ಈ ನಡುವೆ ಮಧ್ಯ ಪ್ರವೇಶ ಮಾಡಿದ್ದ ಹೆಬ್ಬಾಳದ ಶಾಸಕ ಭೈರತಿ ಸುರೇಶ್, ನಮ್ಮ ಕ್ಷೇತ್ರವಾದ ಹೆಬ್ಬಾಳದಿಂದ ಸ್ಪರ್ಧೆ ಮಾಡಲು ನಾನೂ ಆಹ್ವಾನ ನೀಡುತ್ತಿದ್ದೇನೆ ಎಂದಿದ್ದರು. ಇದಕ್ಕೆ ಬಿಜೆಪಿ ಲೇವಡಿ ಮಾಡಿದೆ.
Published by:Sushma Chakre
First published: