ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ; ಹಾಗಾದ್ರೆ ವೇತನದಲ್ಲಿ ಎಷ್ಟು ಬದಲಾವಣೆಯಾಗಲಿದೆ

DA allowance For Karnataka State government: ಜು. 1ರಿಂದಲೇ ಪರಿಷ್ಕೃತ ತುಟ್ಟಿಭತ್ಯೆ ದರಗಳು ಅನ್ವಯವಾಗಲಿವೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಬೆಂಗಳೂರು (ಜು. 26):  ಬಿಎಸ್​ ಯಡಿಯೂರಪ್ಪ ಪದತ್ಯಾಗಕ್ಕೂ ಮುನ್ನ ರಾಜ್ಯ ಸರ್ಕಾರಿ ನೌಕರರಿಗೆ ಬಂಫರ್​ ಉಡುಗೊರೆ ನೀಡಿದ್ದಾರೆ. ತಮ್ಮ ನೇತೃತ್ವದ ಬಿಜೆಪಿ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನಲೆ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ. ಮೂಲ ವೇತನದ ಶೇ.10.25ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. ತುಟ್ಟಿ ಭತ್ಯೆ ಪ್ರಮಾಣವನ್ನು ಶೇ.11. 25ರಿಂದ ಶೇ.21. 50ಗೆ ಪರಿಷ್ಕರಣೆಯಾದಂತಾಗಿದೆ. ಜು. 1ರಿಂದಲೇ ಪರಿಷ್ಕೃತ ತುಟ್ಟಿಭತ್ಯೆ ದರಗಳು ಅನ್ವಯವಾಗಲಿವೆ. ಇತ್ತೀಚೆಗೆ ಕೇಂದ್ರ ಸರ್ಕಾರವೂ ಕೂಡ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ ನೀಡಿತ್ತು. ಅದರ ಬೆನ್ನಲ್ಲೇ ಈಗ ರಾಜ್ಯ ಸರ್ಕಾರದಲ್ಲೂ ತುಟ್ಟಿ ಭತ್ಯ ಹೆಚ್ಚಳವಾಗಿದೆ.

  ಈ ತುಟ್ಟಿ ಭತ್ಯೆಯೂರ ರಾಜ್ಯ ಸರ್ಕಾರದ ನಿವೃತ್ತ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೆ, ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವಂತಹ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೂ ಸಿಗಲಿದೆ.

  ಇದನ್ನು ಓದಿ: ಬಿಎಸ್​ವೈ ಬಗ್ಗೆ ಅನುಕಂಪವಿದೆ, ಅವರ ಮುಂದಿನ ಜೀವನ ಸುಖಕರವಾಗಿರಲಿ; ಸಿದ್ದರಾಮಯ್ಯ

  ಕೊರೋನಾ ಕಾರಣದಿಂದ ಕಳೆದ ವರ್ಷ ನೌಕರರಿಗೆ ತುಟ್ಟಿಭತ್ಯೆ ಹಾಗೂ ಪಿಂಚಣಿದಾರರಿಂದ ತುಟ್ಟಿಭತ್ಯೆ ಪರಿಹಾರವನ್ನು ತಡೆಹಿಡಿಯಲಾಗಿತ್ತು. ಈಗ ಈ ತುಟ್ಟಿ ಹೆಚ್ಚಳ ಮಾಡಿ ಆದೇಶ ಮಾಡಲಾಗಿದೆ. ಇದೇ ವೇಳೆ 2020ರ ಜನವರಿ 1ರಿಂದ ಕಳೆದ ಜೂನ್ 30ರ ಅವಧಿಯ ಹೆಚ್ಚುವರಿ ತುಟ್ಟಿಭತ್ಯೆ ಕಂತುಗಳನ್ನು ಬಿಡುಗಡೆಗೊಳಿಸಲಿದೆ. ಅಲ್ಲದೆ ಜುಲೈ 1ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರಿ ನೌಕರರಿಗೆ 2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ನೀಡಲಾಗುವ ತುಟ್ಟಿಭತ್ಯೆ ದರಗಳನ್ನು ಪ್ರಸ್ತುತ ಮೂಲವೇತನದ ಶೇ.11.25ರಿಂದ ಶೇ.21.50ಗೆ ಪರಿಷ್ಕರಿಸಿ ಆದೇಶಿಸಲಾಗಿದೆ. ಈ ತುಟ್ಟಿ ಭತ್ಯೆ ಹೆಚ್ಚಳದಿಂದ ರಾಜ್ಯದ ಆರು ಲಕ್ಷ ನೌಕರರಿಗೆ ಅನುಕೂಲವಾಗಲಿದೆ.

  ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿದ್ದ ನಿವೃತ್ತ ನೌಕರರಿಗೂ ಈ  ತುಟ್ಟಿ ಭತ್ಯೆ ಆದೇಶ ಅನ್ವಯಿಸಲಿದೆ. ಎನ್‍ಜೆಪಿಸಿ ಪಿಂಚಣಿದಾರರಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಆರ್ಥಿಕ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: