• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • KaRave: ಲಸಿಕೆಗಾಗಿ ಕರವೇ ಸಾವಿರಾರು ಪ್ರತಿಭಟನೆ; ಯಶಸ್ಸಿಗೆ ಧನ್ಯವಾದ ತಿಳಿಸಿದ ನಾರಾಯಣಗೌಡ

KaRave: ಲಸಿಕೆಗಾಗಿ ಕರವೇ ಸಾವಿರಾರು ಪ್ರತಿಭಟನೆ; ಯಶಸ್ಸಿಗೆ ಧನ್ಯವಾದ ತಿಳಿಸಿದ ನಾರಾಯಣಗೌಡ

karave

karave

ಕರ್ನಾಟಕ ರಕ್ಷಣಾ ವೇದಿಕೆ ಹಲವು ಪ್ರತಿಭಟನೆಗಳನ್ನು ನಡೆಸಿತ್ತು. ಸುಮಾರು ಎಂಟು ಸಾವಿರಕ್ಕೂ ಹೆಚ್ಚು  ಪ್ರತಿಭಟನೆಗಳು ಅಭೂತಪೂರ್ವ ಯಶಸ್ಸು ಕಂಡಿದೆ.

  • Share this:

    ರಾಜ್ಯದ ಸಮಸ್ತ ಜನತೆಗೆ ಉಚಿತವಾಗಿ, ಕಾಲಮಿತಿಯೊಳಗೆ, ತಾರತಮ್ಯವಿಲ್ಲದೆ, ಸುಲಭವಾಗಿ ನಿಲುಕುವಂತೆ ಕೋವಿಡ್ ಲಸಿಕೆಗಳನ್ನು ನೀಡಬೇಕೆಂದು ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ಹಲವು ಪ್ರತಿಭಟನೆಗಳನ್ನು ನಡೆಸಿತ್ತು. ಸುಮಾರು ಎಂಟು ಸಾವಿರಕ್ಕೂ ಹೆಚ್ಚು  ಪ್ರತಿಭಟನೆಗಳು ಅಭೂತಪೂರ್ವ ಯಶಸ್ಸು ಕಂಡಿದ್ದು ಈ ಹಿನ್ನಲೆ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಪ್ರತಿಭಟನೆಗಳು ಹೆಚ್ಚಿನ ಪ್ರಮಾಣ ಗ್ರಾಮೀಣ ಭಾಗದಲ್ಲಿ ನಡೆದಿರುವುದು ವಿಶೇಷವಾಗಿದ್ದು, ಮಕ್ಕಳು, ವೃದ್ಧರೂ ಸೇರಿದಂತೆ ಎಲ್ಲ ವಯೋಮಾನದ ಜನರೂ ಭಾಗವಹಿಸಿದ್ದರು‌. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆಗಳು ನಡೆದಿದ್ದು, ಎಲ್ಲ ಭಾಗಗಳಲ್ಲೂ ಅತ್ಯುತ್ಸಾಹದ ಪ್ರತಿಕ್ರಿಯೆ ಕಂಡುಬಂದಿದೆ. ಹಲವಾರು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ, ತಾಲ್ಲೂಕುಗಳಲ್ಲಿ ತಹಸೀಲ್ದಾರ್ ಕಚೇರಿಗಳ ಮುಂದೆ ಪ್ರತಿಭಟನೆಗಳು‌ ನಡೆದಿವೆ ಎಂದು ತಿಳಿಸಿದರು.


    ಇದಲ್ಲದೆ ಕರವೇ ಕಾರ್ಯಕರ್ತರು ಜಿಲ್ಲಾ, ತಾಲ್ಲೂಕು, ಗ್ರಾಮಪಂಚಾಯ್ತಿ ಕಚೇರಿಗಳು, ನಾಡಕಚೇರಿಗಳು, ವಿವಿಧ ಸರ್ಕಾರಿ ಕಚೇರಿಗಳ ಮುಂದೆಯೂ ಪ್ರತಿಭಟಿಸಿದ್ದಾರೆ. ಸಾವಿರಾರು ಮಂದಿ ಮನೆಮನೆಗಳ ಮುಂದೆಯೂ ಪ್ರತಿಭಟನೆ ನಡೆಸಿದ್ದಾರೆ.


    ಹಲವೆಡೆ ಪ್ರತಿಭಟನಾನಿರತ ಕರವೇ ಕಾರ್ಯಕರ್ತರಿಗೆ ಪೊಲೀಸರು ಅಡ್ಡಿಪಡಿಸಿದ ಘಟನೆಗಳೂ ಸಹ ನಡೆದಿವೆ. ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು ಬಸವನಕೋಟೆ ಗ್ರಾಮದಲ್ಲಿ 60 ಪ್ರತಿಭಟನೆಗಳು ನಡೆದಿದ್ದು, ಇಡೀ ಹಳ್ಳಿಗೆ ಹಳ್ಳಿಯೇ ಲಸಿಕೆ ಚಳವಳಿಯಲ್ಲಿ ಪಾಲ್ಗೊಂಡಿದೆ. ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲ್ಲೂಕು ಒಂದರಲ್ಲೇ ಐನೂರಕ್ಕೂ ಹೆಚ್ಚು ಪ್ರತಿಭಟನೆಗಳು ನಡೆದಿರುವುದು ವಿಶೇಷವಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಕ್ಕೆ ಎಲ್ಲ ಭಾಗಗಳಲ್ಲೂ ಸಾರ್ವಜನಿಕರು ಸ್ವಯಂಸ್ಫೂರ್ತಿಯಿಂದ ಬೆಂಬಲಿಸಿದ್ದು, ದಿನಗೂಲಿ‌ ನೌಕರರು, ರೈತರು, ಮಹಿಳೆಯರು, ವರ್ತಕರು ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಾರೆ.


    ಕರವೇಯ ಹಕ್ಕೊತ್ತಾಯಗಳು


    1. ಉಚಿತ ಲಸಿಕೆ


    ರಾಜ್ಯದ ಎಲ್ಲ ನಾಗರಿಕರಿಗೂ ಬಡವ-ಶ್ರೀಮಂತನೆಂಬ ಭೇದವಿಲ್ಲದೆ ಉಚಿತವಾಗಿಯೇ ಲಸಿಕೆ ಕೊಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣಕ್ಕೆ ಸಿಗುವ ಲಸಿಕೆಯಿಂದಾಗಿ ಅಸಮಾನತೆ ಸೃಷ್ಟಿಯಾಗುತ್ತದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತವಾಗಿಯೇ ಲಸಿಕೆ ನೀಡಬೇಕು. ಹಲವಾರು ದೇಶಗಳಲ್ಲಿ ಯಾವ ರೀತಿ ಒಂದೇ ಒಂದು ಲಸಿಕೆಯನ್ನು ಮಾರಾಟಕ್ಕೆ ಇಟ್ಟಿಲ್ಲವೋ ಹಾಗೆಯೇ ಭಾರತದಲ್ಲೂ ಸಹ ಲಸಿಕೆ ಮಾರಾಟದ ವಿಷಯವಾಗಬಾರದು. ಖಾಸಗಿ ಆಸ್ಪತ್ರೆ, ಸಂಸ್ಥೆಗಳಿಗೆ ನೀಡಿರುವ ಶೇ 25 ರಷ್ಟು ವ್ಯಾಕ್ಸಿನ್ ಕೊಳ್ಳುವ ಅವಕಾಶವನ್ನು ರದ್ದುಗೊಳಿಸಿ, ನೂರಕ್ಕೆ ನೂರು ಲಸಿಕೆಗಳು ಉಚಿತವಾಗಿಯೇ, ಸರ್ಕಾರದಿಂದಲೇ ನೀಡಬೇಕು.


    2. ಕಾಲಮಿತಿಯೊಳಗೆ ಲಸಿಕೆ


    ಕೋವಿಡ್ ಮೂರನೇ ಅಲೆ ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಿರುವುದರಿಂದ ಸೆಪ್ಟೆಂಬರ್ ಅಂತ್ಯದೊಳಗೆ ಎರಡೂ ಡೋಸ್ ಲಸಿಕೆಗಳನ್ನು ಕರ್ನಾಟಕದ ಸಮಸ್ತ ಜನತೆಗೆ ನೀಡಬೇಕು. ಜೂನ್ ಅಂತ್ಯದೊಳಗೆ ಮೊದಲನೇ ಡೋಸ್ ನೀಡಬೇಕು. ಸೆಪ್ಟೆಂಬರ್ ಅಂತ್ಯದೊಳಗೆ ಎರಡನೇ ಡೋಸ್ ನೀಡಿ, ಲಸಿಕಾ ಅಭಿಯಾನವನ್ನು ಪೂರ್ಣಗೊಳಿಸಬೇಕು. ಲಸಿಕೆ ಇಲ್ಲದೆ ಜನರು ಸಾಯುವಂಥ ಸ್ಥಿತಿಯನ್ನು ನಿರ್ಮಾಣ ಮಾಡಬಾರದು.


    ಇದನ್ನು ಓದಿ: ಸಂಸತ್​ನಲ್ಲಿ ಸುಳ್ಳು ಹೇಳಿದ್ರಾ ಟಿಎಂಸಿ ಸಂಸದೆ; ನಟಿಯ ಪ್ರಮಾಣವಚನ ವಿಡಿಯೋ ಪೋಸ್ಟ್​ ಮಾಡಿದ ಬಿಜೆಪಿ


    3. ಮನೆಮನೆಗೆ ಲಸಿಕೆ


    ಸರ್ಕಾರ ಕೂಡಲೇ ಚುನಾವಣೆ ಸಂದರ್ಭದ ಮತದಾನ ಬೂತ್ ಗಳ ಮಾದರಿಯಲ್ಲಿ ಕೋವಿಡ್ ಲಸಿಕೆ ಬೂತ್ ಸ್ಥಾಪಿಸಬೇಕು. ನೂಕುನುಗ್ಗಲು, ಜನದಟ್ಟಣೆ ಆಗದಂತೆ‌ ಎಲ್ಲ‌ ನಾಗರಿಕರು ಸುಲಭವಾಗಿ ವ್ಯಾಕ್ಸಿನ್ ಪಡೆಯುವಂಥ ಸ್ಥಿತಿ ನಿರ್ಮಾಣ ಮಾಡಬೇಕು.‌ ಸಾಧ್ಯವಾದರೆ ಮನೆಮನೆಗೂ ತೆರಳಿ ಲಸಿಕೆ‌ ನೀಡುವಂಥ ವ್ಯವಸ್ಥೆ ಜಾರಿಗೊಳಿಸಬೇಕು. ಲಸಿಕೆ ನೀಡಿಕೆಗೆ ಸರ್ಕಾರ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು.‌ ಸ್ಮಾರ್ಟ್ ಫೋನ್ ಇಲ್ಲದ,‌ ರಿಜಿಸ್ಟ್ರೇಷನ್ ಮಾಡಿಸಲು ಗೊತ್ತಾಗದ ಹಳ್ಳಿಗಾಡಿನ ಜನರ ಸಮಸ್ಯೆ ನೀಗಿಸಬೇಕು.

    4. ತಾರತಮ್ಯವಿಲ್ಲದ ಲಸಿಕೆ


    ಒಕ್ಕೂಟ ಸರ್ಕಾರ ಮೊದಲ ಹಂತದ ಲಸಿಕೆ ಹಂಚಿಕೆಗಳಲ್ಲಿ ಗುಜರಾತ್, ಉತ್ತರ ಪ್ರದೇಶ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಲಸಿಕೆ ಹಂಚಿಕೆ‌ ಮಾಡಿ, ದಕ್ಷಿಣದ ರಾಜ್ಯಗಳಿಗೆ ಕಡಿಮೆ ಪ್ರಮಾಣದಲ್ಲಿ ಹಂಚಿಕೆ ಮಾಡಿದೆ. ಕೇಂದ್ರ ಸರ್ಕಾರ ಆಕ್ಸಿಜನ್, ವೆಂಟಿಲೇಟರ್, ರೆಮ್ಡಿಸಿವಿರ್, ಆಂಫೋಟೆರಿಸಿನ್ ಬಿ ಇತ್ಯಾದಿಗಳ ಹಂಚಿಕೆ ಸಂದರ್ಭದಲ್ಲೂ ಕರ್ನಾಟಕದ ಪಾಲನ್ನು ಕಡಿಮೆ ಮಾಡಿ, ಗುಜರಾತ್ ಮತ್ತು ಉತ್ತರದ ರಾಜ್ಯಗಳಿಗೆ ಹೆಚ್ಚು ನೀಡಿದೆ. ಈ ತಾರತಮ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಜೂನ್ 21 ರಿಂದ ಕೇಂದ್ರ ಸರ್ಕಾರ ನೀಡುವ ಲಸಿಕೆಗಳು ವೈಜ್ಞಾನಿಕವಾಗಿ, ಜನಸಂಖ್ಯೆ ಆಧರಿಸಿ ಹಂಚಿಕೆಯಾಗಬೇಕು. ಇಂದು ಕರ್ನಾಟಕ ರಕ್ಷಣಾ ವೇದಿಕೆ‌ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಜನ್ಮದಿನವಾಗಿದ್ದು, ಎಲ್ಲೆಡೆ ಲಕ್ಷಾಂತರ ಕಾರ್ಯಕರ್ತರು, ಜನಸಾಮಾನ್ಯರಿಗೆ ಕಾಲಮಿತಿಯೊಳಗೆ ಲಸಿಕೆ ಸಿಗಬೇಕು ಎಂಬ ಹೋರಾಟದೊಂದಿಗೆ 'ಪ್ರತಿಭಟನಾ ದಿನ'ವನ್ನಾಗಿ ಆಚರಿಸಿದರು.

    Published by:Seema R
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು