ಪ್ರತಿ ವರ್ಷ 30 ವರ್ಷದೊಳಗಿನ 30 ನವ ಉದ್ಯಮಿಗಳ ಗುರುತಿಸಿ ಫೋರ್ಬ್ಸ್ ಪ್ರಶಸ್ತಿ ನೀಡುತ್ತದೆ. ಫೋರ್ಬ್ಸ್ 30-30 ನವ ಉದ್ಯಮಿಗಳ ಪಟ್ಟಿಯಲ್ಲಿ ಬೆಂಗಳೂರಿನ ಕನ್ನಡತಿಯೊಬ್ಬರು ಜಾಗ ಗಿಟ್ಟಿಸಿಕೊಂಡಿದ್ದಾರೆ. ಕೊರೋನಾ-ಲಾಕ್ ಡೌನ್ ಸಮಯದಲ್ಲೂ ಕುಗ್ಗದ ಉದ್ಯಮದಲ್ಲಿ ಸೈ ಎನಿಸಿಕೊಂಡ ಬೆಂಗಳೂರಿನ ಈ ಯುವತಿ, ಸಾಧನೆಯ ಉತ್ತುಂಗ ಏರುತ್ತಿದ್ದಾರೆ.
ಕೊರೋನಾ ಎಂದರೆ ಸಾವು ನೋವುಗಳ ಜೊತೆಗೆ ಆರ್ಥಿಕವಾಗಿ ಮಕಾಡೆ ಮಲಗಿದ ದೃಶ್ಯಗಳು ನಮ್ಮ ಕಣ್ಣ ಮುಂದಿವೆ. ಇದರ ನಡುವೆ ಇಲ್ಲೊಬ್ಬಾಕೆ ಯಶಸ್ವಿಯಾಗಿ ಉದ್ಯಮ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ಯುವತಿಯ ಸಾಧನೆಯನ್ನು ಗುರುತಿಸಿರುವ ಫೋರ್ಬ್ಸ್ ಈ ಬಾರಿ ಏಷ್ಯಾದಿಂದ ಬೆಂಗಳೂರಿನ ಈ ಯುವತಿಯನ್ನು ಉದಯೋನ್ಮುಖ ಉದ್ಯಮಿಗಳ ಪಟ್ಟಿಯಲ್ಲಿ ಸೇರಿಸಿಕೊಂಡಿದೆ. ಅಂದಹಾಗೆ ಆ ಉದಯೋನ್ಮುಖ ಉದ್ಯಮಿ ಹೆಸರು ವಿಭಾ ಹರೀಶ್.
![]()
ವಿಭಾ ಹರೀಶ್.
2019ರಲ್ಲಿ ಕಾಸ್ಮಿಕ್ಸ್ ಎಂಬ ಕಂಪೆನಿ ಶುರು ಮಾಡಿದ್ದ ವಿಭಾ ಹರೀಶ್.!!
ವಿಭಾ ಹರೀಶ್ ಹುಟ್ಟಿದ್ದು ಆಸ್ಟ್ರೇಲಿಯಾದಲ್ಲಿ. ಆದರೆ ಒಂದರಿಂದ ಓದಿ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದು ಇದೇ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ. ತಂದೆ ಹರೀಶ್ ಕ್ಲೋಸ್ಪೇಟ್ ಹಾಗೂ ರಶ್ಮಿ ಕ್ಲೋಸ್ಪೇಟ್ ಅವರ ಮೊದಲ ಪುತ್ರಿಯಾಗಿರುವ ವಿಭಾ ರೋಲ್ಸ್ ರಾಯಿಸ್ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. 2019ರಲ್ಲಿ ಅನಾರೋಗ್ಯದ ಕಾರಣದಿಂದ ಒಂದು ಸರ್ಜರಿ ಮಾಡಿಸಿಕೊಂಡಿರುವ ವಿಭಾ ದೈಹಿಕವಾಗಿ ಬಲಹೀನರಾಗಿ ಹೋಗಿದ್ದರು. ತಾಯಿ ರಶ್ಮಿ ಕ್ಲೋಸ್ಪೇಟ್ ವೃತ್ತಿಯಲ್ಲಿ ಆಯುರ್ವೇದ ವೈದ್ಯೆ. ತಾಯಿಯಿಂದ ಗಿಡಮೂಲಿಕೆಗಳ ಮಹತ್ವ ತಿಳಿದುಕೊಂಡ ವಿಭಾ ಹರೀಶ್ 2019ರಲ್ಲಿ ಹರ್ಬಲ್ ಉತ್ಪನ್ನಗಳನ್ನು ತಯಾರಿಸುವ ಕಾಸ್ಮಿಕ್ಸ್ ಎಂಬ ಕಂಪೆನಿಯನ್ನು ಆರಂಭಿಸಿದರು.
ಈ ಬಾರಿ ಏಷಿಯಾದಿಂದ ಪಟ್ಟ ಗಿಟ್ಟಿಸಿಕೊಂಡ ಬೆಂಗಳೂರಿನ ನವ ಉದ್ಯಮಿ ವಿಭಾ ಹರೀಶ್.!!
ಈ ಕಾಸ್ಮಿಕ್ಸ್ ಕಂಪನಿ ಹಣ್ಣು, ಗಿಡಮೂಲಿಕೆಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನ್ಯಾಚುರಲ್ ಪೌಡರ್ ತಯಾರಿಸುತ್ತಿದೆ. 15 ಜನರ ತಂಡ ಕಟ್ಟಿಕೊಂಡು ಹಣ್ಣು, ಗಿಡಮೂಲಿಕೆಗಳಿಂದ ಎನರ್ಜಿ ಬೂಸ್ಟರ್ ಪೌಡರ್ ತಯಾರಿಸುತ್ತಿರುವ ವಿಭಾ, ಕೊರೋನಾ ಲಾಕ್ಡೌನ್ ಸಮಯದಲ್ಲಿ ಎಲ್ಲಾ ಕ್ಷೇತ್ರಗಳೂ ಮಕಾಡೆ ಮಲಗಿದಾಗಲೂ ಯಶಸ್ಸಿನ ಓಟ ಮುಂದುವರೆಸಿದ್ದಾರೆ. ಕಳೆದ 2 ವರ್ಷಗಳಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಮೂಲಕ ಸದ್ದು ಮಾಡುತ್ತಿರುವ ಉದ್ಯಮಿ ವಿಭಾ ಹರೀಶ್, ಫೋರ್ಬ್ಸ್ 30-30 ಪ್ರಶಸ್ತಿ ಪಟ್ಟಿಯಲ್ಲಿ ಜಗತ್ತಿನ ಇತರೆ ಯುವ ಉದ್ಯಮಿಗಳ ಜೊತೆ ಗುರುತಿಸಿಕೊಂಡಿದ್ದಾರೆ. ಇವರು ಕನ್ನಡದವರು ಎಂಬುವುದು ಮತ್ತೊಂದು ಹೆಮ್ಮೆಯ ವಿಚಾರ.
ಇದನ್ನು ಓದಿ: Rekha GoldenSecret: ಎವರ್ ಗ್ರೀನ್ ಬ್ಯೂಟಿ ರೇಖಾ ಸದಾ ಗೋಲ್ಡನ್ ಬಣ್ಣದ ಸೀರೆಗಳನ್ನೇ ಉಡೋದೇಕೆ?
ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಖುಷಿ ಹಂಚಿಕೊಂಡ ವಿಭಾ ಹರೀಶ್, ಸಣ್ಣ ವಯಸ್ಸಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಜಗತ್ತಿನಾದ್ಯಂತ ಇರುವ ಉದ್ಯೋನ್ಮುಖ ಉದ್ಯಮಿಗಳ ಜೊತೆ ಕಾಣಿಸಿಕೊಂಡಿದ್ದಕ್ಕೆ ಧನ್ಯತಾ ಭಾವ ವ್ಯಕ್ತ ಪಡಿಸಿದ್ದಾರೆ. ವಾರ್ಷಿಕವಾಗಿ ಅಂದಾಜು 2 ಕೋಟಿ ವ್ಯವಹಾರ ಹೊಂದಿರುವ ವಿಭಾ ಒಡೆತನದ ಕಾಸ್ಮಿಕ್ಸ್ ಕಂಪೆನಿ, ಲಾಕ್ ಡೌನ್ ಸಮಯದಲ್ಲೂ ವ್ಯವಹಾರದಲ್ಲಿ ಪ್ರಗತಿ ಸಾಧಿಸಿಕೊಂಡಿದ್ದಕ್ಕೆ ಫೋರ್ಬ್ಸ್ ಪ್ರಶಂಸೆ ವ್ಯಕ್ತ ಪಡಿಸಿದೆ. ಈ ಸಾಧನೆಯ ಗುಟ್ಟೇನು ಎನ್ನುವ ಪ್ರಶ್ನೆಗೆ ಯುವ ಉದ್ಯಮಿ ವಿಭಾ ಹರೀಶ್ ಮುಗುಳ್ನಗುತ್ತಾ ಛಲ ಹಾಗೂ ಬದ್ಧತೆ ಅಂತಾರೆ. ಒಟ್ಟಾರೆಯಾಗಿ ವಿಭಾ ಹರೀಶ್ ಅವರ ಈ ಸಾಧನೆ ಕನ್ನಡಿಗೆರೆಲ್ಲರೂ ಹೆಮ್ಮೆ ಪಡುವಂತದ್ದು.
ವಿಶೇಷ ವರದಿ: ಆಶಿಕ್ ಮುಲ್ಕಿ
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ