ಬೆಂಗಳೂರು(ಮೇ 03): ಕೊರೊನಾ ಎರಡನೇ ಅಲೆ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿನ ಕೆ ಆರ್ ಮಾರ್ಕೆಟ್ ಸಂಪೂರ್ಣವಾಗಿ ಖಾಲಿಯಾಗಿದೆ. ಅದೆಷ್ಟೇ ಕಠಿಣ ನಿಯಮಗಳನ್ನು ಜಾರಿ ಮಾಡಿ ಅಲ್ಲಿನ ವ್ಯಾಪಾರಿಗಳಿಗೆ ತಿಳಿ ಹೇಳಿದ್ರೂ ಮಾರ್ಕೆಟ್ ನಲ್ಲಿ ಮಾತ್ರ ಕೋವಿಡ್ ನಿಯಮಗಳು ಯಾವುವೂ ಜಾರಿಯಾಗುತ್ತಲೇ ಇರಲಿಲ್ಲ. ಇಡೀ ದಿನ ಜನಜಂಗುಳಿ, ದೈಹಿಕ ಅಂತರವಿಲ್ಲ, ಬೇಕಾಬಿಟ್ಟಿ ಮಾಸ್ಕ್ ಧರಿಸುವುದು, ಕೊರೊನಾ ಕುರಿತಾದ ಅಸಡ್ಡೆ ಎಲ್ಲವಕ್ಕೂ ಮಾರುಕಟ್ಟೆಯ ಸ್ಥಿತಿ ಕನ್ನಡಿ ಹಿಡಿದಂತಿತ್ತು. ಆದ್ರೆ ಇದರ ಬಗ್ಗೆ ಇತ್ತೀಚೆಗಷ್ಟೇ ನಗರ ಪೋಲಿಸ್ ಆಯುಕ್ತ ಕಮಲ್ ಪಂತ್ ಹಾಗೂ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಜಂಟಿಯಾಗಿ ಸಭೆ ನಡೆಸಿ ಮಾರುಕಟ್ಟೆಯ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರು. ಅದರ ಪರಿಣಾಮವಾಗಿ ಇಂದು ಮುಂಜಾನೆ ಕೃಷ್ಣ ರಾಜೇಂದ್ರ ಮಾರ್ಕೆಟ್ ಖಾಲಿ ಹೊಡೆಯುತ್ತಿದೆ.
ಸರ್ಕಾರದ ಆದೇಶದ ಪ್ರಕಾರ ಎಪಿಎಂಸಿಗಳಲ್ಲಿ ಮಾತ್ರ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಜನಸಾಮಾನ್ಯರಿಗೆ ತೊಂದರೆಯಾಗದಂತೆ ತಡೆಯಲು ತಳ್ಳುವ ಗಾಡಿಗಳಿಗೆ ಸಂಜೆ 6 ರವರೆಗೂ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಇದರಿಂದ ಹೆಚ್ಚಿನ ಜನ ಮಾರುಕಟ್ಟೆಗೆ ಬರುವುದನ್ನೇ ತಡೆಯಬಹುದು ಎನ್ನುವ ಲೆಕ್ಕಾಚಾರ. ಹೂವು ಹಣ್ಣು ತರಕಾರಿಗಳನ್ನು ಕೊಳ್ಳಲು ಜನ ಹೆಚ್ಚಾಗಿ ಕೆ ಆರ್ ಮಾರ್ಕೆಟ್ಗೆ ತೆರಳುತ್ತಾರೆ. ಇಂದಿನಿಂದ ಮಾರ್ಕೆಟ್ ನಲ್ಲಿ ಅಂಗಡಿಗಳನ್ನ ತೆರೆಯಲು ಅನುಮತಿ ಇಲ್ಲ, ಆದ್ದರಿಂದ ಸಂಪೂರ್ಣ ಮಾರ್ಕೆಟ್ ಖಾಲಿ ಹೊಡೆಯುತ್ತಿದೆ.
ಆದರೆ ಎಸ್.ಪಿ ರಸ್ತೆಯಲ್ಲಿ ಹೂವಿನ ಅಂಗಡಿಗಳನ್ನ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ. ಹೂವಿನ ವ್ಯಾಪಾರಿಗಳು ಮುಂಜಾನೆಯೇ ಬಂದು ಬೆಳಗ್ಗೆ 9 ಗಂಟೆಯೊಳಗೆ ತಮ್ಮ ವ್ಯಾಪಾರ ಮುಗಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಸ್ಥಳದಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದ್ದು ಕೋವಿಡ್ ನಿಯಮಗಳ ಪಾಲನೆಯಾಗುವಂತೆ ನೋಡಿಕೊಳ್ಳಲಾಗಿದೆ.
ಇದನ್ನೂ ಓದಿ:
https://kannada.news18.com/news/state/bengaluru-urban-this-made-in-bengaluru-mask-not-just-protects-you-from-covid-but-also-helps-increase-green-cover-sktv-559571.html
ರೈತರು ತರಕಾರಿ ಮಾರಾಟ ಮಾಡಲು ನಗರದಿಂದ ದೂರ ಎಲೆಕ್ಟ್ರಾನಿಕ್ ಸಿಟಿ ಬಳಿ ವ್ಯವಸ್ಥೆ ಮಾಡಲಾಗಿದೆ. ಕೆ ಆರ್ ಮಾರುಕಟ್ಟೆಗೆ ಬಂದ ಕೆಲ ರೈತರಿಗೆ ಅಂಗಡಿಗಳನ್ನು ಮುಚ್ಚಿ ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರಾಟ ಮಾಡುವಂತೆ ಸೂಚನೆ ನೀಡಲಾಗಿದೆ. ಸಿಟಿ ಮಾರ್ಕೆಟ್ ಮತ್ತು ಕಲಾಸಿ ಪಾಳ್ಯ ಪೊಲೀಸರು ಬ್ಯಾರಿಕೇಡ್ ಹಾಕಿ ಪರಿಶೀಲನೆ ನಡೆಸುತ್ತಿದ್ದಾರೆ. ತರಕಾರಿ ಮಳಿಗೆ ಕ್ಲೋಸ್ ಆಗಿರೋ ಮಾಹಿತಿ ತಿಳಿಯದೆ ಅನೇಕ ಸಾರ್ವಜನಿಕರು ಮಾರುಕಟ್ಟೆಗೆ ಬಂದು ವಾಪಸ್ ಹೋಗುತ್ತಿದ್ದಾರೆ.
ಆದರೆ ಪಕ್ಕದಲ್ಲೇ ಇರುವ ಎಸ್ ಪಿ ರೋಡ್ ನಲ್ಲಿ ಹೂವು ಮಾರಾಟಕ್ಕೆ ಅವಕಾಶ ಇರುವ ಹಿನ್ನೆಲೆಯಲ್ಲಿ ಅಲ್ಲಿ ಹೆಚ್ಚಿನ ಜನಸಂದಣಿ ಇದೆ. ಇರುವ ಇಷ್ಟು ಸ್ಥಳದಲ್ಲೇ ಸರಿಯಾಗಿ ಮಾಸ್ಕ್ ಬಳಕೆ ಇಲ್ಲದೆ, ಸಾಮಾಜಿಕ ಅಂತರವೂ ಇಲ್ಲದೆ ಜನ ವ್ಯಾಪಾರದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲೇ ಮಾರ್ಷಲ್ ಗಳಿದ್ದರೂ ಹೆಚ್ಚೇನೂ ಪ್ರಯೋಜನವಾಗಿಲ್ಲ. ಒಂಭತ್ತು ಗಂಟೆಯವರೆಗೂ ಹೂವಿನ ವ್ಯಾಪಾರಕ್ಕೆ ಅವಕಾಶ ಇರುವ ಹಿನ್ನಲೆಯಲ್ಲಿ ಜನ ವ್ಯಾಪಾರದಲ್ಲಿ ನಿರತರಾಗಿದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ