ರೈತರ ಸಹಕಾರ ಇಲ್ಲದೇ ಕಾವೇರಿ ಉಳಿಸಿ ಅಭಿಯಾನ ಅಸಾಧ್ಯ: ಬೆಂಗಳೂರಿನಲ್ಲಿ ಜಗ್ಗಿ ವಾಸುದೇವ್

ಈ ಕಾವೇರಿ ಕೂಗು ಅಭಿಯಾನಕ್ಕೆ ರೈತರಿಂದ ಉತ್ಸಾಹದ ಅಭಿಪ್ರಾಯ ಬಂದಿದೆ. ಸರ್ಕಾರವೂ ಸಹ ನಮಗೆ ಸಪೋರ್ಟ್ ಮಾಡಿದೆ ಎಂದು ಇಶಾ ಫೌಂಡೇಶನ್ (Isha Foundation) ಸಂಸ್ಥಾಪಕ ಜಗ್ಗಿ ವಾಸುದೇವ್ (Jaggi Vasudev) ಹೇಳಿದ್ದಾರೆ.

ಜಗ್ಗಿ ವಾಸುದೇವ್

ಜಗ್ಗಿ ವಾಸುದೇವ್

  • Share this:
ಬೆಂಗಳೂರು: ಇಶಾ ಫೌಂಡೇಷನ್ ವತಿಯಿಂದ ‘ಇಂದೇ ಕಣಕ್ಕೆ ಕಾವೇರಿ ಕೂಗು’ ಎಂಬ ಕಾವೇರಿ ಉಳಿಸಿ ಅಭಿಯಾನ ಕಾರ್ಯಕ್ರಮ ಬೆಂಗಳೂರಿನ ಜಯಮಹಲ್ ನಲ್ಲಿ ಆಯೋಜನೆಗೊಂಡಿತು. ಕಾರ್ಯಕ್ರಮದಲ್ಲಿ ಇಶಾ ಫೌಂಡೇಶನ್​ನ ಸದ್ಗುರು ಜಗ್ಗಿ ವಾಸುದೇವ್ ಮತ್ತು ಇಸ್ರೋದ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಭಾಗಿಯಾಗಿದ್ದರು. ಕಾವೇರಿ ಉಳಿಸಿ ಅಭಿಯಾನದಲ್ಲಿ ಮಾತನಾಡಿದ ಇಶಾ ಫೌಂಡೇಷನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು, ಕಾವೇರಿ ಕೂಗು ಯೋಜನೆಯಡಿ ಒಂದು ವರ್ಷದಲ್ಲಿ 11 ಮಿಲಿಯನ್ (1.1 ಕೋಟಿ) ಗಿಡಗಳನ್ನು ನೆಡಲಾಗಿದೆ. ಇದು ರೈತರಿಗೆ ದೊಡ್ಡ ಪ್ರಮಾಣದ ಸಹಾಯವಾಗಲಿದೆ ಎಂದು ತಿಳಿಸಿದರು.

ಇಶಾ ಫೌಂಡೇಶನ್​ನಿಂದ  ಪ್ರತೀ ದಿನ 12 ಸಾವಿರ ರೈತರನ್ನು ಸಂಪರ್ಕಿಸಲಾಗುತ್ತಿದೆ. ಜೊತೆಗೆ ರೈತರೂ ಕೂಡ ಸಾಕಷ್ಟು ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಜನರು, ರೈತರು ಪರಿಸರದಲ್ಲಿ ಬದಲಾವಣೆ ಮಾಡದಿದ್ದರೆ ಕೆಲವೇ ವರ್ಷದಲ್ಲಿ ಸಾಕಷ್ಟು ಸಮಸ್ಯೆಯಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಉತ್ತಮ ಪರಿಸರ ಕಾಪಾಡಿಕೊಳ್ಳಲು ನಾವು ಮುಂದಾಗಬೇಕು. ಪ್ರಸ್ತುತ ದೇಶದಲ್ಲಿ 40-42% ಕೃಷಿಯ ಮಣ್ಣಿನ ಸಾವಯವ ಗುಣ ತುಂಬಾ ಕಡಿಮೆ ಆಗಿದೆ. ಇದರಿಂದ ಮುಂದೆ ದೇಶದಲ್ಲಿ ಆಹಾರ ಕೊರತೆಯಾಗಬಹುದು. ಹಾಗಾಗಿ ರೈತರಿಗೆ ಉತ್ತಮ ಮಣ್ಣಿನ ಅವಶ್ಯಕತೆ ಇದೆ. ಮೊದಲು ನಾಲ್ಕು ಬೆಳೆ ಬೆಳೆಯುತ್ತಿದ್ದ ಕಾವೇರಿ ಕೊಳ್ಳದ ತಮಿಳುನಾಡು ರೈತರು ಈಗ ಒಂದೇ ಬೆಳೆ ಬೆಳೆಯುತ್ತಿದ್ದಾರೆ. ಇದು ಭವಿಷ್ಯದ ಸಮಸ್ಯೆ ಅಲ್ಲ, ವರ್ತಮಾನದ ಸಮಸ್ಯೆ ಆಗಿದೆ ಎಂದು ಸದ್ಗುರು ಜಗ್ಗಿ ವಾಸುದೇವ್ ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆಗೆ ಸಂವಾದ ನಡೆಸಿದ ಸದ್ಗುರುಗಳು, ಈ ಕಾವೇರಿ ಕೂಗು ಅಭಿಯಾನಕ್ಕೆ ರೈತರಿಂದ ಉತ್ಸಾಹದ ಅಭಿಪ್ರಾಯ ಬಂದಿದೆ. ಸರ್ಕಾರವೂ ಸಹ ನಮಗೆ ಸಪೋರ್ಟ್ ಮಾಡಿದೆ ಎಂದು ಹೇಳಿದರು.

ಸ್ವಯಂಸೇವಕರು ಬಹಳ ಶ್ರದ್ಧೆಯಿಂದ ಕೆಲಸ ಮಾಡಿದ ಪರಿಣಾಮ 1.1 ಕೋಟಿ ಸಸಿಗಳು ರೈತರಿಗೆ ಹೋಗಿವೆ. ಇದನ್ನು ಮೂರುವರೇ ಕೊಟಿಗೆ ಹೆಚ್ಚಿಸಬೇಕಾಗಿದೆ. ದೇಶದಲ್ಲಿ ಶೇ 80ರಷ್ಟು ಭೂಮಿ ರೈತರ ಕೈಯಲ್ಲಿದೆ. ರೈತರು ಮನಸ್ಸು ಮಾಡದ ಹೊರತು ಉತ್ತಮ ಪರಿಸರ ಉಳಿಸುವುದು ಕಷ್ಟವಿದೆ. ಹಾಗಾಗಿ ನಮ್ಮ ಮುಖ್ಯ ಉದ್ದೇಶ ರೈತರನ್ನು ತೊಡಗಿಸಿಕೊಳ್ಳುವುದಾಗಿದೆ. ಈಗಾಗಲೇ 890 ಕಾರ್ಯಕರ್ತರು ಪಂಚಾಯತ್​ಗಳಲ್ಲಿ ಇದ್ದಾರೆ. ಜೊತೆಗೆ ಇನ್ನಷ್ಟು ರೈತರನ್ನು ಪ್ರೋತ್ಸಾಹಿಸುವ ಕೆಲಸ ನಡೆಯುತ್ತಿದೆ. ನಮ್ಮ ಅಭಿಯಾನದಿಂದ ರೈತರಿಗೆ ಲಾಭ ಆಗಲು ಎರಡು ವರ್ಷ ತೆಗೆದುಕೊಳ್ಳುತ್ತದೆ. 25 ವರ್ಷದಲ್ಲಿ ರೈತರ ವರಮಾನದ ವ್ಯತ್ಯಾಸ ತಿಳಿಯಲಿದೆ ಎಂದು ಇಶಾ ಫೌಂಡೇಶನ್​ನ ಸಂಸ್ಥಾಪಕರಾದ ಸದ್ಗುರುಗಳು ಹೇಳಿದರು.

ಇದನ್ನೂ ಓದಿ: Olympics Hockey: ಒಲಿಂಪಿಕ್ ಹಾಕಿ ಸೆಮಿಫೈನಲ್​ನಲ್ಲಿ ಭಾರತಕ್ಕೆ ಸೋಲು; ಕಂಚು ಆಸೆ ಜೀವಂತ

ಇನ್ನು 60 ವರ್ಷ ಮಾತ್ರ ವ್ಯವಸಾಯ ಮಾಡಬಹುದು ಎಂದು ಅಮೆರಿಕದ ಅಧ್ಯಯನವೊಂದು ತಿಳಿಸಿದೆ. ಮಣ್ಣಿನಲ್ಲಿ ಶಕ್ತಿ ಇಲ್ಲದಿದ್ದರೆ ಮುಂದೆ ರೈತರು ವ್ಯವಸಾಯ ಮಾಡಲು ಸಾಧ್ಯವಿಲ್ಲ. ವ್ಯವಸಾಯ ಇಲ್ಲ ಅಂದ್ರೆ ಆಹಾರ ಸಮಸ್ಯೆ ಆಗುತ್ತೆ. 2030 ಕ್ಕೆ ಆಹಾರ ಅಭದ್ರತೆ ಉಂಟಾಗದಿರಲು ಮಣ್ಣಿಗೆ ಬೇಕಾದ ಸಾವಯವ ಗುಣವನ್ನು ನಾವು ಕೊಡಬೇಕು. ಮಣ್ಣಿನ ಫಲವತ್ತತೆ ಕಾಪಾಡಬೇಕು ಎಂದು ಜಗ್ಗಿ ವಾಸುದೇವ್ ಕರೆ ನೀಡಿದರು.

ಇನ್ನು, ಕಾವೇರಿ ನದಿಯ ಉಳಿವಿಗಾಗಿ ಹೋರಾಡುತ್ತಿರುವ ಸದ್ಗುರುಗಳು ಕರ್ನಾಟಕ ತಮಿಳುನಾಡು ನಡುವೆ ಆಗುತ್ತಿರುವ ಕಾವೇರಿ ತಿಕ್ಕಾಟದ ವಿವಾದದ ಬಗ್ಗೆ ಮಾತನಾಡಲು ಹಿಂದೇಟು ಹಾಕಿದರು. ಮೇಕೆದಾಟು ಯೋಜನೆ ವಿಚಾರ ಮಾತನಾಡಿದ ಜಗ್ಗಿ ವಾಸುದೇವ್ ಅವರು, ಕಾವೇರಿ ತಾಯಿಗೆ ಯಾವ ರಾಜ್ಯ ಎಂಬುದು ಗೊತ್ತಿಲ್ಲ ಎಂದು ಅಭಿಪ್ರಾಯಪಟ್ಟರು

ವರದಿ: ಸಂಜಯ ಎಂ ಹುಣಸನಹಳ್ಳಿ
Published by:Vijayasarthy SN
First published: