HOME » NEWS » State » BENGALURU URBAN INVESTIGATION REPORT OF ROHINI SINDHURI SWIMMING POOL CASE KVD

Rohini Sindhuri: ಅಕ್ರಮವಾಗಿ ಈಜುಕೊಳ ನಿರ್ಮಿಸಿದ್ದಾರೆಂದು ವರದಿ: ರೋಹಿಣಿ ಸಿಂಧೂರಿಗೆ ಸಂಕಷ್ಟ!

ಈಜುಕೊಳ ನಿರ್ಮಾಣಕ್ಕೆ ಬರೋಬ್ಬರಿ 32 ಲಕ್ಷ ವ್ಯಯಿಸಿರುವುದು ಅಕ್ರಮ ಎಂದಿರುವುದು ದಕ್ಷ ಅಧಿಕಾರಿ ಎನಿಸಿಕೊಂಡಿರುವ ರೋಹಿಣಿ ಸಿಂಧೂರಿ ಅವರ ವೃತ್ತಿ ಜೀವನದಲ್ಲಿ ಕಪ್ಪು ಚುಕ್ಕಿಯಾಗಲಿದೆ.

Kavya V | news18-kannada
Updated:June 22, 2021, 8:00 PM IST
Rohini Sindhuri: ಅಕ್ರಮವಾಗಿ ಈಜುಕೊಳ ನಿರ್ಮಿಸಿದ್ದಾರೆಂದು ವರದಿ: ರೋಹಿಣಿ ಸಿಂಧೂರಿಗೆ ಸಂಕಷ್ಟ!
ರೋಹಿಣಿ ಸಿಂಧೂರಿ, ವಿವಾದಕ್ಕೆ ಕಾರಣವಾದ ಈಜುಕೊಳ
  • Share this:
ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಈಜುಕೊಳ ನಿರ್ಮಿಸಿಕೊಂಡಿದ್ದ ವಿಚಾರ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ ತಂದೊಡ್ಡಿದೆ. ಸ್ವಿಮ್ಮಿಂಗ್​ ಪೂಲ್​ ನಿರ್ಮಾಣ ಸಂಬಂಧ ಪ್ರಾದೇಶಿಕ ಆಯುಕ್ತರು ರಾಜ್ಯ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ಈಜುಕೊಳ ನಿರ್ಮಾಣಕ್ಕೆ 32 ಲಕ್ಷ ರೂಪಾಯಿ ವೆಚ್ಚವಾಗಿದೆ. ಇದಕ್ಕೆ ತಾಂತ್ರಿಕ ವರ್ಗದಿಂದ ,ಲೋಕೋಪಯೋಗಿ ಇಲಾಖೆಯಿಂದ ಅನುಮತಿಯನ್ನೇ ಪಡೆದಿಲ್ಲ. ಆಡಳಿತಾತ್ಮಕ ಮಂಜೂರಾತಿಯನ್ನು ಪಡೆದಿಲ್ಲ ಎಂದು ವರದಿ ನೀಡಿರುವುದು ರೋಹಿಣಿ ಸಿಂಧೂರಿಗೆ ತೀವ್ರ ಹಿನ್ನಡೆಯಾಗಿದೆ.

ಪ್ರಾದೇಶಿಕ ಆಯುಕ್ತರು ನೀಡಿರುವ ತನಿಖಾ ವರದಿ ಪ್ರಕಾರ ಕಾಮಗಾರಿ ನಿರ್ಮಾಣದವರೊಂದಿಗಿನ ಒಪ್ಪಂದ ಪತ್ರವೂ ಇಲ್ಲ. ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮೋದನೆ ಪಡೆದಿಲ್ಲ. ಮನೆಯಲ್ಲಿ ಈಜುಕೊಳ ನಿರ್ಮಿಸಿಕೊಂಡಿರುವುದರಿಂದ ಯಾವುದೇ ಸಾರ್ವಜನಿಕರಿಗೆ ಉಪಯೋಗಿಸಲು ಸಾಧ್ಯವಿರುವುದಿಲ್ಲ. ಈಜುಕೊಳ ನಿರ್ಮಾಣ ಸಾರ್ವಜನಿಕ ಹಿತಾಸಕ್ತಿ ಹೊಂದಿರುವುದಿಲ್ಲ. ಹೀಗಾಗಿ ಈಜುಕೊಳ ನಿರ್ಮಾಣವೇ ಅಕ್ರಮ, ಕಾನೂನಿಗೆ ವಿರುದ್ದವಾಗಿ ನಿರ್ಮಿಸಲಾಗಿದೆ. ರೋಹಿಣಿ ಸಿಂಧೂರಿ ಅಧಿಕಾರ ದುರ್ಬಳಕೆ ಮಾಡಿಕೊಂಡು ನಿರ್ಮಿಸಿರುವುದಾಗಿ ಪ್ರಾದೇಶಿಕ ಆಯುಕ್ತರು ವರದಿ ನೀಡಿದ್ದಾರೆ.

ಈಜುಕೊಳ ನಿರ್ಮಾಣಕ್ಕೆ ಬರೋಬ್ಬರಿ 32 ಲಕ್ಷ ವ್ಯಯಿಸಿರುವುದು ಅಕ್ರಮ ಎಂದಿರುವುದು ದಕ್ಷ ಅಧಿಕಾರಿ ಎನಿಸಿಕೊಂಡಿರುವ ರೋಹಿಣಿ ಸಿಂಧೂರಿ ಅವರ ವೃತ್ತಿ ಜೀವನದಲ್ಲಿ ಕಪ್ಪು ಚುಕ್ಕಿಯಾಗಲಿದೆ. ಡಿಸಿ ಮನೆಯಲ್ಲಿ ಈಜುಕೊಳದ ಬಗ್ಗೆ ಶಾಸಕ ಸಾರಾ ಮಹೇಶ್​ ಮೊದಲು ಆರೋಪ ಮಾಡಿದ್ದರು. ಮೈಸೂರು ಮಹಾರಾಜರೇ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಂಡಿರಲಿಲ್ಲ. ಈ ರೋಹಿಣಿ ಸಿಂಧೂರಿಗೆ ಅಧಿಕೃತ ನಿವಾಸದಲ್ಲಿ ಇದೆಲ್ಲ ಬೇಕಿತ್ತಾ? ಎಂದು ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರೋಹಿಣಿ ಸಿಂಧೂರಿ, ಈಗ ನಾನು ವರ್ಗಾವಣೆಯಾಗಿದ್ದೇನೆ. ಈಜುಕೊಳವನ್ನು ನಾನು ತೆಗೆದುಕೊಂಡು ಹೋಗಿದ್ದೇನಾ ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: ಮೂರು ದಿನ ಕಾದು ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ ಡಿ.ಕೆ. ಶಿವಕುಮಾರ್!

ಈಜುಕೊಳಕ್ಕೆ 50 ಲಕ್ಷ ರೂ. ಖರ್ಚಾಗಿದೆ ಎಂಬುದು ಸುಳ್ಳು. ಇದು 28.72 ಲಕ್ಷ ರೂ. ವೆಚ್ಚದ ಯೋಜನೆಯಾಗಿದ್ದು, ಕಡಿಮೆ ವೆಚ್ಚದಲ್ಲಿ ಈಜುಕೊಳಗಳನ್ನು ನಿರ್ಮಿಸಲು ನಿರ್ಮಿತಿ ಕೇಂದ್ರ 5 ವರ್ಷಗಳ ಹಿಂದೆ ಯೋಜನೆ ರೂಪಿಸಿತ್ತು. ಅದರ ಪ್ರಾಯೋಗಿಕ ಯೋಜನೆಯಾಗಿ ಈಜುಕೊಳವನ್ನು ನಿರ್ಮಿಸಲಾಗಿದೆ. ಈ ವರ್ಷ ಜನವರಿ ತಿಂಗಳಿಂದ ನಿರ್ಮಾಣ ಕಾಮಗಾರಿ ಶುರುವಾಗಿದೆ. ಈ ಈಜುಕೊಳವನ್ನು ಸ್ಥಾಪಿಸಲು ನಿರ್ಮಿತಿ ಕೇಂದ್ರದ ಕ್ಯಾಂಪಸ್​ನಲ್ಲಿ ಸ್ಥಳವಿಲ್ಲದ ಕಾರಣಕ್ಕೆ ಜಿಲ್ಲಾಧಿಕಾರಿಗಳ ನಿವಾಸದ ಆವರಣದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದ್ದರು.

ಈಜುಕೊಳ ಸಂಬಂಧ ಸಾರಾ ಮಹೇಶ್​ ಹಾಗೂ ರೋಹಿಣಿ ಸಿಂಧೂರಿ ಮಧ್ಯೆ ಜಟಾಪಟಿ, ವಾಕ್ಸಮರ ನಡೆದಿತ್ತು. ಈಗ ರೋಹಿಣಿ ಸಿಂಧೂರಿ ವಿರುದ್ಧ ತನಿಖಾ ವರದಿ ಬಂದಿದ್ದು, ಸಾರಾ ಮಹೇಶ್​ ಕೈ ಮೇಲಾಗಿದೆ. ಮೈಸೂರಿನ ಜಿಲ್ಲಾಧಿಕಾರಿಗೆ ನೀಡಲಾಗುವ ಪಾರಂಪರಿಕ ಕಟ್ಟಡದ ಒಂದು ಭಾಗದಲ್ಲಿ ಈ ಸ್ವಿಮ್ಮಿಂಗ್ ಪೂಲ್ ನಿರ್ಮಿಸಲಾಗಿದೆ. ಐಷಾರಾಮಿಯಾಗಿ ನಿರ್ಮಾಣವಾಗಿರುವ ಈ ಈಜುಕೊಳವನ್ನು ಮಾಡರ್ನ್ ಆಗಿ ಕಟ್ಟಲಾಗಿದೆ. ಈ ಈಜುಕೊಳ ಮತ್ತು ಜಿಮ್​ನ ವಿಡಿಯೋಗಳು ಸಾಕಷ್ಟು ವೈರಲ್ ಆಗಿದ್ದವು.

ಮೈಸೂರು ಪಾಲಿಕೆ ಆಯುಕ್ತೆಯಾಗಿದ್ದ ಶಿಲ್ಪಾ ನಾಗ್​ ಅವರು ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರು ಐಎಎಸ್​ ಅಧಿಕಾರಿಗಳನ್ನು ಮೈಸೂರಿನಿಂದ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.
Published by: Kavya V
First published: June 22, 2021, 8:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories