ಬೆಂಗಳೂರು: ಕಳೆದ ಎರಡ್ಮೂರು ದಿನಗಳಿಂದ ವಂಚನೆ ಪ್ರಕರಣ ಸಂಬಂಧ ಸುದ್ದಿಯಲ್ಲಿರುವ ನಟ ದರ್ಶನ್ ವಿರುದ್ಧ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನ ಸಂದೇಶ್ ನಾಗರಾಜ್ ಅವರ ಹೋಟೆಲ್ನಲ್ಲಿ ದಲಿತ ಸಮುದಾಯಕ್ಕೆ ಸೇರಿದ ವೇಟರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಂದ್ರಜಿತ್ ದೂರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್ ಆರೋಪವನ್ನು ಅಲ್ಲಗಳೆದರು. ಆರ್.ಆರ್.ನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಿರ್ದೇಶಕ ಇಂದ್ರಜಿತ್ ಲಂಕೇಶ್ ಏನ್ ಆದರೂ ಹೇಳಲಿ, ಊಹಾಪೋಹಗಳನ್ನು ಬಿಟ್ಟು ಬಿಡಿ. ಈ ಪ್ರಕರಣವನ್ನು ಇಲ್ಲಿಗೆ ಮುಚ್ಚಿ ಹಾಕ್ತಿಲ್ಲ, ಮುಚ್ಚಿ ಹಾಕುವುದಿಲ್ಲ ಎಂದರು.
ಅರುಣಾಕುಮಾರಿ ಪ್ರಕರಣ ಸಂಬಂಧ ಎಫ್ ಐಆರ್ ಆಗಿದೆ. ಪೋಲಿಸವರಿಗೆ ತನಿಖೆ ಮಾಡಲು ಟೈಮ್ ಕೊಡಿ. ಇದರಲ್ಲಿ ಜಾತಿ ಬೇರೆ ತರುತ್ತಿದ್ದಾರೆ, ಹಾಗೇನಿಲ್ಲ. ನನ್ನದು ಸಂದೇಶ್ರದ್ದು ಸಾವಿರ ಗಲಾಟೆ ಇದೆ. ನಮ್ನದನ್ನು ನಾವು ನೋಡಿಕೊಳ್ಳುತ್ತೇವೆ, ಅದು ಬಿಟ್ಟು ಬಿಡಿ. ಇಂದ್ರಜಿತ್ ಅವರು ದೊಡ್ಡ ತನಿಖಾದಾರರು, ನಾಲ್ಕು ದಿನದ ಲೆಕ್ಕ ತೆಗೆದುಕೊಳ್ಳಲಿ. ನನ್ನ ಮೇಲಿನ ಆರೋಪಗಳನ್ನು ಇಂದ್ರಜಿತ್ ಅವರು ಸಾಬೀತು ಮಾಡಿಕೊಳ್ಳಲಿ ಎಂದರು.
ಇಂದ್ರಜಿತ್ ಲಂಕೇಶ್ ಅವರು ಸಂದರ್ಶನಕ್ಕೆ ಕೇಳಿದ್ದರು, ಸಂದರ್ಶನ ವಿಷಯವಾಗಿ 2 ಸಲ ಕರೆ ಮಾಡಿದ್ದರು. ಆದರೆ ನಾನು ಆಗಲ್ಲ ಎಂದಿದ್ದೆ ಎನ್ನುವ ಮೂಲಕ ಪರೋಕ್ಷವಾಗಿ ಇದೇ ಕಾರಣಕ್ಕೆ ಆರೋಪ ಮಾಡುತ್ತಿದ್ದಾರೆ ಎಂಬರ್ಥದಲ್ಲಿ ದರ್ಶನ್ ಹೇಳಿದರು. ಈಗ ಇದನ್ನು ದೊಡ್ಡ ವಿಷಯ ಮಾಡಿ ಹೊಸದಾಗಿ ಏನೋ ಡೈರೆಕ್ಟ್ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇಲ್ಲಿಗೆ ನಿಲ್ಲಿಸಿ ನಿರ್ಮಾಪಕ ಉಮಾಪತಿ, ಹರ್ಷಗೆ ಹೇಳಿದ್ದೇನೆ. ಮಾಧ್ಯಮಗಳಿಗೆ ಹೇಳಿಕೆ ಕೊಡುವುದು ನಿಲ್ಲಿಸಿ ಎಂದಿದ್ದೇನೆ. ಪೋಲಿಸ್ ತನಿಖೆ ನಡೆದ ಮೇಲೆ ಮಾತನಾಡ್ತೇನೆ. ದರ್ಶನ್ ಏನು ಮಾಡಿದ್ರೂ ಬೇಕಿಂಗ್ ಸುದ್ದಿಯಾಗುತ್ತೆ ಎಂದೇಳಿ ಮೈಸೂರಿಗೆ ಪ್ರಯಾಣ ಬೆಳಸುತ್ತಿರುವುದಾಗಿ ತಿಳಿಸಿದರು.
ಇದನ್ನೂ ಓದಿ: Darshan vs Lankesh - ಮೈಸೂರಿನ ಹೋಟೆಲ್ನಲ್ಲಿ ದಲಿತ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ: ಇಂದ್ರಜಿತ್ ಲಂಕೇಶ್ ಆರೋಪ
ಇನ್ನು ಇಂದ್ರಜಿತ್ ಅವರ ಹಲ್ಲೆ ಆರೋಪವನ್ನು ಹೋಟೆಲ್ ಮಾಲೀಕ ಸಂದೇಶ್ ಸಹ ತಳ್ಳಿ ಹಾಕಿದ್ದಾರೆ. ಗ್ರಾಹಕರು, ವೇಟರ್ಗಳ ಮಧ್ಯೆ ಸಣ್ಣಮುಟ್ಟ ಸಮಸ್ಯೆ ಆಗುವುದು ಸಹಜ. ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಆಗಿದ್ದರೆ ನಾನು ಸುಮ್ಮನಿರುತ್ತಿದ್ದೆನೆ ಎನ್ನುವ ಮೂಲಕ ಹಲ್ಲೆ ನಡೆದಿಲ್ಲ. ದರ್ಶನ್ ಯಾರ ಮೇಲೂ ಹೋಟೆಲ್ನಲ್ಲಿ ಹಲ್ಲೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿರುವ ಸಂದೇಶ್ ನಾಗರಾಜ್ ಅವರ ಸಂದೇಶ್ ಪ್ರಿನ್ಸ್ ಹೋಟೆಲ್ನಲ್ಲಿ ದರ್ಶನ್ ಮತ್ತವರ ಗ್ಯಾಂಗ್ನವರು ಹೋಟೆಲ್ನ ವೇಟರ್ವೊಬ್ಬನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಆ ವೇಟರ್ ಒಬ್ಬ ದಲಿತ ವ್ಯಕ್ತಿಯಾಗಿದ್ದಾನೆ ಎಂದು ಇಂದ್ರಜಿತ್ ಲಂಕೇಶ್ ಆಪಾದನೆ ಮಾಡಿದ್ದಾರೆ. ದಲಿತ ವ್ಯಕ್ತಿಯ ಮೇಲೆ ಹಲ್ಲೆ ಆಗಿದ್ದರೂ ದರ್ಶನ್ ಮತ್ತವರ ಸಹಚರರ ವಿರುದ್ಧ ಮೈಸೂರು ಪೊಲೀಸರು ಯಾವ ಕ್ರಮವನ್ನೂ ಕೈಗೊಂಡಿಲ್ಲವೆಂದು ಲಂಕೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ