ಬೆಂಗಳೂರು (ಏ. 26): ಸೋಂಕು ನಿಯಂತ್ರಣಕ್ಕೆ ಮುಂದಾದ ರಾಜ್ಯ ಸರ್ಕಾರ ನಾಳೆ ರಾತ್ರಿಯಿಂದ ಮೇ 10ರವರೆಗೆ ರಾಜ್ಯಾದ್ಯಂತ ಲಾಕ್ಡೌನ್ ಘೋಷಣೆ ಮಾಡಿದೆ. ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆ ರಾಜಧಾನಿಯಲ್ಲಿರುವ ವಲಸಿಗರು ಊರಿನತ್ತ ಮುಖಮಾಡಿದ್ದಾರೆ. ಇದರಿಂದಾಗಿ ಮೆಜೆಸ್ಟಿಕ್ನಲ್ಲಿ ಜನ ಜಂಗುಳಿ ಕಂಡು ಬಂದಿದೆ. ಇತ್ತ ಕೊರೋನಾ ನಿಯಾಮಾವಳಂತೆ ಬಸ್ನಲ್ಲಿ ಶೇ. 50ಕ್ಕಿಂತ ಹೆಚ್ಚು ಜನರು ಪ್ರವಾಸ ಮಾಡದ ಹಿನ್ನಲೆ ಊರಿಗೆ ಬಸ್ ಸಿಗದೇ ಜನರು ಪರದಾಡುವಂತೆ ಆಗಿದೆ. ಸಂಜೆ ಮೇಲೆ ಊರು ತೊರೆಯಲು ವಲಸಿಗರು ಗಂಟು ಮೂಟೆ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನಲೆ ಹೆಚ್ಚುವರಿಯಾಗಿ 500 ಬಸ್ ಬಿಡಲಾಗಿತ್ತು. ಆದರೂ, ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೇ ಹಿನ್ನಲೆ ಪ್ರಯಾಣಿಕರಿಗೆ ಅನುಕೂಲವಾಗಲು ನಾಳೆ ಮತ್ತೆ 12 ಸಾವಿರಕ್ಕೂ ಹೆಚ್ಚು ಬಸ್ ವ್ಯವಸ್ಥೆ ಸರ್ಕಾರ ಮುಂದಾಗಿದೆ.
ಈ ಕುರಿತು ಮಾತನಾಡಿರುವ ಸಾರಿಗೆ ಸಚಿವರೂ ಆದ ಡಿಸಿಎಂ ಲಕ್ಷಣ ಸವದಿ, ನಾಳೆಯಿಂದ ರಾಜ್ಯದಲ್ಲಿ ಕರ್ಫ್ಯೂ ಮತ್ತು ಲಾಕ್ಡೌನ್ ಬಿಗಿಗೊಳಿಸಿರುವುದರಿಂದ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ತಮ್ಮತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದಾರೆ. ಅವರಿಗೆ ಅನುಕೂಲವಾಗುವಂತೆ ಮೂರು ಸಾರಿಗೆ ನಿಗಮಗಳಿಂದ 12 ಸಾವಿರಕ್ಕೂ ಹೆಚ್ಚು ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಹೊರಗಡೆಯಿಂದ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಬೇರೆ ಬೇರೆ ಪ್ರದೇಶಗಳಿಂದ ಬೆಂಗಳೂರಿಗೆ ಮತ್ತು ಬೆಂಗಳೂರಿನಿಂದ ಇತರ ಪ್ರದೇಶಗಳಿಗೆ ಸಂಚರಿಸಲಿವೆ ನಾಳೆ ರಾತ್ರಿಯ ನಿಗದಿತ ಕರ್ಫ್ಯೂ ಸಮಯದ ಒಳಗೆ ಬಸ್ಗಳು ಸಂಚರಿಸಲಿವೆ ಎಂದಿದ್ದಾರೆ.
ಲಾಕ್ಡೌನ್ ಜಾರಿಗೆ ಇನ್ನೂ ಒಂದು ದಿನ ಬಾಕಿ ಇದೆ. ಈ ನಡುವೆಯೇ ತಾರಾತುರಿಯಲ್ಲಿ ಮಧ್ಯಮ ಮತ್ತು ಬಡ ವರ್ಗದವರು ರಾಜಧಾನಿ ತೊರೆಯಲು ಮುಂದಾಗಿದ್ದಾರೆ. ಸರ್ಕಾರ ಕಟ್ಟಡ ಕೂಲಿ ಕಾರ್ಮಿಕರು ಮತ್ತು ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಅವಕಾಶ ನೀಡಿದೆ. ಆದರೆ, ಉಳಿದಂತೆ ಇತರೆ ಕಾರ್ಯದಲ್ಲಿ ನಿರತರಾಗಿವರುವ ವಲಸಿಗರು ಈ ಲಾಕ್ಡೌನ್ನಿಂದ ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಕೆಲಸವಿಲ್ಲದೇ ಅನಗತ್ಯ ಖರ್ಚಿನೊಂದಿಗೆ ದಿನ ದೂಡುವ ಬದಲು ಸ್ವಂತ ಊರಿಗೆ ತೆರಳುವುದು ಲೇಸು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಜನ ಸಿಕ್ಕ ಬಸ್ ಹಿಡಿದು ಊರು ತಲುಪುವ ಗಡಿಬಿಡಿಯಲ್ಲಿದ್ದು, ಸಮಯದ ಲಾಭ ಪಡೆಯಲು ಮುಂದಾಗಿರುವ ಖಾಸಗಿ ಬಸ್ಗಳು ವಸೂಲಿಗೆ ಇಳಿದಿವೆ. ಬಸ್ ಟಿಕೆಟ್ ದರವನ್ನು ನಾಲ್ಕರಿಂದ ಐದು ಪಟ್ಟು ಹೆಚ್ಚಳ ಮಾಡಿದ್ದಾರೆ. ಊರಿಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಟಿಕೆಟ್ ದರ ಕೇಳಿ ಹೌಹಾರುತ್ತಿದ್ದಾರೆ. ಮನೆಯಿಂದ ಹೊರಟು ಬಂದ ಮೇಲೆ ಮತ್ತೆ ಹಿಂತಿರುಗಲಾರದೆ ಕೇಳಿದಷ್ಟು ಹಣ ಕೊಟ್ಟು ಊರುಗಳಿಗೆ ಪ್ರಯಾಣಿಸುತ್ತಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ