Mekedatu Project: ಮೇಕೆದಾಟು ಯೋಜನೆಯನ್ನು ನಿಲ್ಲಿಸುವುದಿಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ರಾಜ್ಯದ ಜನರ ಹಿತವನ್ನು ರಕ್ಷಿಸಲು ಯೋಜನೆಯನ್ನು ಶೇಕಡ 100ರಷ್ಟು ಜಾರಿಗೊಳಿಸಲಾಗುವುದು ರಾಜ್ಯ ಸರ್ಕಾರದ ಈ ಮನವಿಯನ್ನು ನಿಯಮಗಳ ಪ್ರಕಾರ ಕೇಂದ್ರ ಸರ್ಕಾರ ಪರಿಗಣಿಸಬೇಕು

ಗೃಹ ಸಚಿವ ಬಸವರಾಜ ಬೊಮ್ಮಾಯಿ

ಗೃಹ ಸಚಿವ ಬಸವರಾಜ ಬೊಮ್ಮಾಯಿ

  • Share this:
ಬೆಂಗಳೂರು: ಕುಡಿಯುವ ನೀರಿನ ಉದ್ದೇಶದೊಂದಿಗೆ ರೂಪುಗೊಂಡಿರುವ ಮೇಕೆದಾಟು ಯೋಜನೆಯನ್ನು ನಿಲ್ಲಿಸುವುದಿಲ್ಲ. ಇದು‌ ನಮ್ಮ ರಾಜ್ಯದ ಹಕ್ಕು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ ವಿರೋಧಿಸಿ ಕೈಗೊಂಡ ನಿರ್ಣಯಕ್ಕೆ ಅವರು ಪ್ರತಿಕ್ರಿಯೆ ನೀಡಿದರು.  ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಇಂದು ಸರ್ವಪಕ್ಷ‌ ಸಭೆ ಕರೆದು ಚರ್ಚಿಸಿ, ಮೇಕೆದಾಟು ಯೋಜನೆಯ ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ‌. ಮಾತ್ರವಲ್ಲ ಎಲ್ಲ ಪಕ್ಷಗಳ ಮುಖಂಡರು ಒಕ್ಕೊರಲ ತೀರ್ಮಾನಕ್ಕೆ ಬಂದಿದ್ದಾರೆ. ಸರ್ವಪಕ್ಷ ನಿಯೋಗ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಯೋಜನೆ ತಡೆಹಿಡಿಯುವಂತೆ ಒತ್ತಡ ಹೇರಲು ಮುಂದಾಗಿದ್ದಾರೆ. ಈ ಸಂಬಂಧ ಕಾನೂನು ಸಚಿವ ಬೊಮ್ಮಾಯಿ ಯೋಜನೆ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ಈಗಾಗಲೇ ಸಿದ್ದವಾಗಿರುವ ಸಮಗ್ರ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ. ಇದು ಹೆಚ್ಚುವರಿ ಕಾವೇರಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡುವ ಯೋಜನೆ. ಈ ಯೋಜನೆಯನ್ನು ಜಾರಿಗೊಳಿಸುವ ಎಲ್ಲಾ ಹಕ್ಕುಗಳು ಕರ್ನಾಟಕಕ್ಕೆ ಇವೆ. ರಾಜ್ಯದ ಜನರ ಹಿತವನ್ನು ರಕ್ಷಿಸಲು ಯೋಜನೆಯನ್ನು ಶೇಕಡ 100ರಷ್ಟು ಜಾರಿಗೊಳಿಸಲಾಗುವುದು ರಾಜ್ಯ ಸರ್ಕಾರದ ಈ ಮನವಿಯನ್ನು ನಿಯಮಗಳ ಪ್ರಕಾರ ಕೇಂದ್ರ ಸರ್ಕಾರ ಪರಿಗಣಿಸಬೇಕು ಎಂದು ಅವರು ತಿಳಿಸಿದರು.

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಪಟ್ಟಂತೆ ಈಗಾಗಲೇ ತೀರ್ಪು ಬಂದಿದೆ. ಅದರ ಪ್ರಕಾರ ತಮಿಳುನಾಡಿಗೆ ಯಾವ ಸಮಯಕ್ಕೆ ಎಷ್ಟು ನೀರು ಬಿಡಬೇಕು ಎಂಬುದರ ಕುರಿತು ಕಾವೇರಿ ಮಂಡಳಿ ಗಮನಿಸುತ್ತದೆ. ಸಂಕಷ್ಟ ಸಂದರ್ಭದಲ್ಲಿ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿಕೊಳ್ಳುವುದರಿಂದ ಎರಡು ರಾಜ್ಯಗಳಿಗೆ ಅನುಕೂಲವಾಗುತ್ತದೆ ಎಂಬುದನ್ನು ತಮಿಳುನಾಡು ಸರ್ಕಾರ ಅರಿತುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಹೀಗಾಗಿ ಮೇಕೆದಾಟು ಕುಡಿಯುವ ನೀರರಿನ ಯೋಜನೆ. ಇದನ್ನು ನಿಲ್ಲಿಸಲು ಕರ್ನಾಟಕಕ್ಕೆ ಯಾವುದೇ ಸಕಾರಣಗಳು ಇಲ್ಲ. ಯೋಜನೆಯನ್ನು ನಾವು ಖಂಡಿತವಾಗಿಯೂ ಜಾರಿ ಮಾಡುತ್ತೇವೆ.  ಇದಕ್ಕಾಗಿ ಬೇಕಾಗುವ ಎಲ್ಲಾ ಒಪ್ಪಿಗೆ ಗಳನ್ನು ಕೇಂದ್ರದಿಂದ ಪಡೆಯಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ‌ ಎಂದು ಅವರು ಹೇಳಿದರು‌.

ಇದನ್ನು ಓದಿ: ಕೇಂದ್ರದಿಂದ ಅಗತ್ಯ ನೆರವು: ಪ್ರಧಾನಿ ಮೋದಿ

ಈ ಯೋಜನೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನ್ಯಾಯ ಒದಗಿಸುತ್ತದೆ ಎಂಬ ವಿಶ್ವಾಸ ನನಗಿದೆ. ಈ ಯೋಜನೆಯನ್ನು ಶೇ. ನೂರಕ್ಕೆ ನೂರರಷ್ಟು ಜಾರಿ ಮಾಡುತ್ತೇವೆ.

ಕಾಮಗಾರಿ ಆರಂಭಿಸಿ : ಡಿಕೆಶಿ ಒತ್ತಾಯ

ಮೇಕೆದಾಟು ಯೋಜನೆ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೇಲೆ ಒತ್ತಡ ತರುವ ಬಗ್ಗೆ ನಿರ್ಣಯ ಮಾಡಲಿ. ಅವರು ನೂರು ವರ್ಷ ಆದ್ರೂ ಇದೇ ಅಜೆಂಡಾ ಇಟ್ಟುಕೊಳ್ಳುತ್ತಾರೆ. ಡಬಲ್ ಇಂಜಿನ್ ಸರ್ಕಾರ ಇದೆಲ್ಲ ಕ್ಲಿಯರ್ ಮಾಡ್ತೇವೆ ಅಂದಿದ್ರು. ಈಗ ಏನು ಮಾಡ್ತಿದ್ದಾರೆ? ತಮಿಳುನಾಡಿಗೆ ಹಂಚಿಕೆಯಂತೆ ಅವರ ಪಾಲಿನ  ನೀರು ಹರಿಯುತ್ತದೆ. ಇದರಲ್ಲಿ ನಮ್ಮದು ಯಾವ ತಕರಾರಿಲ್ಲ. ಯೋಜನೆಯಿಂದ ಯಾವ ಸಮಸ್ಯೆಯಿಲ್ಲ. ಕಂದಾಯ ಭೂಮಿ‌ಹೆಚ್ಚು ಹೋಗಲ್ಲ. ಅರಣ್ಯದ ಸ್ವಲ್ಪ ಭಾಗ ಯೋಜನೆಗೆ ಹೋಗುತ್ತೆ. ಈ ಯೋಜನೆ ಕನಕಪುರಕ್ಕಾಗಿ ನಾವು ತಂದಿಲ್ಲ. ತಮಿಳುನಾಡು ಬೇಕಾದರೆ ಒತ್ತಡ ಹಾಕಲಿ. ಆಲ್ ಪಾರ್ಟಿ ಡೆಲಿಗೇಶನ್ ನಾವ್ಯಾಕೆ ಕೊಂಡೊಯ್ಯಬೇಕು?. ನಾಳೆಯೇ ಯೋಜನೆಗೆ ಅಡಿಗಲ್ಲು ಹಾಕಲಿ, ಕೆಲಸ ಆರಂಭಿಸಲಿ ಎಂದರು.
Published by:Seema R
First published: