ಬೆಂಗಳೂರು: ಇಂದಿನಿಂದ ವೀಕೆಂಡ್ ಕರ್ಪ್ಯೂ (Weekend Curfew) ಜಾರಿ ಹಿನ್ನೆಲೆ ಗೃಹ ಸಚಿವ ಅರಗ ಜ್ಞಾನೇಂದ್ರ (Home Minister Araga Jnanedra) ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ್ದು, ನಿಯಮಗಳ (Rules) ಪಾಲನೆ ಕಡ್ಡಾಯ ಎಂದು ಹೇಳಿದ್ದಾರೆ. ವೀಕೆಂಡ್ ಕರ್ಪ್ಯೂ ನಿಬಂಧನೆಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಎಲ್ಲಾ ಬಂದೋಬಸ್ತ್ ಗಳನ್ನು ಪೊಲೀಸರು (Police) ಮಾಡಿದ್ದಾರೆ ಇವತ್ತು ರಾತ್ರಿಯಿಂದಲೇ ಪೊಲೀಸರು ರಸ್ತೆಗೆ ಇಳಿಯುತ್ತಾರೆ. ಜನರು ಕೂಡ ಪೊಲೀಸರಿಗೆ ಸಹಕಾರ ಕೊಡಬೇಕು. ಜನರು ಬದುಕು ಉಳಿಸಲು ಈ ನಿರ್ಬಂಧ ತಂದಿದ್ದೇವೆ ಎಂದು ತಿಳಿಸಿದರು. ಇದೇ ವೇಳೆ ಅರೆಸ್ಟ್ ಮಾಡಿದರೂ ನಾವು ಪಾದಯಾತ್ರೆ ನಿಲ್ಲಿಸಲ್ಲ ಎಂಬ ಕೈ ನಾಯಕರ (Congress Leaders) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ವ್ಯಂಗ್ಯ ಮಾಡಿದರು.
ಕಾಂಗ್ರೆಸ್ ನವರು ಚುನಾವಣಾ ತಾಲೀಮು ಶುರು ಮಾಡಿದ್ದಾರೆ. ಕಾಂಗ್ರೆಸ್ ನವರು ಏನೋ ತೊಡೆ ತಟ್ಟುತ್ತಿದ್ದಾರೆ. ನನ್ನ ಸ್ಟೇಟ್ಮೆಂಟ್ ನಲ್ಲಿ ನಾನು ಏನೋ ಕುಸ್ತಿ ಮಾಡ್ತೀನಿ ಅಂತಾ ನಾನು ಎಲ್ಲೂ ಹೇಳಿಲ್ಲ. ಸರ್ಕಾರ ನಡೆಸದವರು ನಮಗೆ ಸಲಹೆ ಮಾಡಬೇಕು. ಅದು ಬಿಟ್ಟು ಕ್ಯಾಮೆರಾಗಳಿಗೆ ಫೋಸ್ ಕೊಡಲು ಪಾದಯಾತ್ರೆ ಮಾಡ್ತಾರೆ ಅಂದರೆ ಜನರು ಇದೆಲ್ಲವನ್ನೂ ನೋಡ್ತಿದ್ದಾರೆ, ಅವರಿಗೆ ತಕ್ಕ ಪಾಠ ಕಲಿಸ್ತಾರೆ ಎಂದರು.
ಡಿಕೆಶಿ ಹೇಳಿಕೆ ಒಪ್ಪಿಕೊಳ್ಳುತ್ತೇನೆ
ಗೃಹ ಸಚಿವರು ಅಮಾಯಕ, ಎಳೆಸು ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಅರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು. ಡಿಕೆ ಶಿವಕುಮಾರ್, ನನ್ನನ್ನು ಅಮಾಯಕ, ಎಳಸು ಅಂದಿದ್ದಾರೆ. ನಾನು ಅವೆಲ್ಲವನ್ನೂ ಒಪ್ಕೊತ್ತೇನೆ. ನಾನು ಗೃಹ ಸಚಿವನಾದ ನಂತರ ಯಾರ ಯಾರ ಜಾತಕ ಹೇಗಿದೆ ಎಂಬುದನ್ನು ನೋಡಿದ್ಸೇನೆ. ಅದನ್ನು ನೋಡಿದಾಗ ನಾನು ಎಳೆಸಾಗಿ ಇರೋಕೆ ಸಂತೋಷ ಆಗುತ್ತೆ ಎಂದು ತಿರುಗೇಟು ನೀಡಿದರು.
ನನ್ನ ಜೀವನದಲ್ಲಿ ನಾನು ಹಾಗೆ ಇದ್ದು ಹಾಗೆ ಸಾಯಬೇಕು ಎಂದುಕೊಂಡಿದ್ದೇನೆ. ಅನೇಕ ಸಂಗತಿಗಳ ಪಾವಿತ್ರತೆ ಕಾಪಾಡಿಕೊಂಡು ಬಂದಿದ್ದೇನೆ. ಆದರೆ ಅವರಂತೆ ಬಲಿತು ಏನೇನೋ ಮಾಡೋಕೆ ಹೋಗೋದಿಲ್ಲ. ಒಬ್ಬ ಹೋಮ್ ಮಿನಿಸ್ಟರ್ ಆಗಿ ನಾಲ್ಕು ತಿಂಗಳಾಗಿ ಅವರ ಜಾತಕ ಗೊತ್ತಿದೆ ಎಂದರು.
ಕನಕಪುರಕ್ಕೆ ಪ್ರತ್ಯೇಕ ಆದೇಶ ಹೊರಡಿಸುವಂತೆ ನಾನು ಯಾವ ಅಧಿಕಾರಿಗೂ ಸೂಚನೆ ಕೊಟ್ಟಿಲ್ಲ. ಯಾವುದೇ ಪ್ರತ್ಯೇಕ ಆದೇಶ ವನ್ನು ಹೊರಡಿಸಿಲ್ಲ ಎಂದು ಕಾಂಗ್ರೆಸ್ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದರು.
ರಾಜಕೀಯ ಸೇಡಿನ ಬಗ್ಗೆ ನಮಗೆ ಗೊತ್ತಿಲ್ಲ
ನಾನು ಇವರನ್ನು ಅರೆಸ್ಟ್ ಮಾಡು, ಅದು ಮಾಡು ಅಂತಾ ಹೇಳಿಲ್ಲ. ಸರ್ಕಾರದಲ್ಲಿ ಇರುವ ಅಧಿಕಾರಿಗಳಿಗೆ ಏನು ಮಾಡಬೇಕು ಎಂದು ಗೊತ್ತಿದೆ. ಅದರಂತೆ ಅವರು ಕೆಲಸ ಮಾಡ್ತಾರೆ. ರಾಜಕೀಯ ಸೇಡಿನ ಬಗ್ಗೆ ಅವರಿಗೆ ಗೊತ್ತಿದೆ ವಿನಃ ನಮಗೆ ಅದು ಗೊತ್ತಿಲ್ಲ. ಕಾನೂನು ಪ್ರಕಾರ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಇದು ಕೇಸ್ ಜಾಸ್ತಿ ಆಗೇ ಆಗುತ್ತೆ, ಸಂಪೂರ್ಣ ತಡೆಯೋಕೆ ಆಗಲ್ಲ. ಇದು ವಿಶ್ವವ್ಯಾಪಿ ಹರಡುತ್ತಿದೆ.ಅಂತರಾಷ್ಟ್ರೀಯ ವಿಮಾನ ಬಂದ್ ಮಾಡಿಲ್ಲ. ಹೊರಗಡೆಯಿಂದ ಬಂದವರನ್ನು ತಡೆಯೋಕ ಕಷ್ಟ, ಆರ್ಥಿಕ ಹಾಗೂ ವಾಣಿಜ್ಯ ಚಟುವಟಿಕೆ ತೊಂದರೆ ಆಗದೇ ಇರುವ ನಿರ್ದಾರ ತೆಗೆದುಕೊಳ್ಳಬೇಕು.
ಸಾಂಕ್ರಾಮಿಕ ರೋಗದ ಸ್ಪಷ್ಟ ಚಿತ್ರಣ ಇಲ್ಲದೇ ಇದ್ದಾಗ ಲಾಕ್ ಡೌನ್ ನಿರ್ಧಾರ ಮಾಡಿದ್ದೀವಿ. ಸದ್ಯಕ್ಕೆ ಲಾಕ್ ಡೌನ್ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆದಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Health Minister Dr.K.Sudhakar)ಹೇಳಿದ್ದಾರೆ