Araga Jnanendra: ಮನನೊಂದು ಹೇಳಿಕೆ ನೀಡಿದ್ದೆ, ನನ್ನ ಮಾತು ಹಿಂತೆಗೆದುಕೊಳ್ಳುತ್ತೇನೆ: ಗೃಹ ಸಚಿವ ಅರಗ ಜ್ಞಾನೇಂದ್ರ

Araga Jnanendra clarification on his damaging statement :ನನ್ನ ಈ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ, ಆ ಬಗ್ಗೆ ವಿಷಾದಿಸುತ್ತೇನೆ. ಎಲ್ಲಾ ಹೆಣ್ಣು ಮಕ್ಕಳ ಬಗ್ಗೆ ನಮಗೆ ಗೌರವವಿದೆ. ಬೊಮ್ಮಾಯಿ ಸರ್ಕಾರ ಎಲ್ಲಾ ಹೆಣ್ಣು ಮಕ್ಕಳ ಮಾನ, ಪ್ರಾಣ ಕಾಪಾಡುವ ಬದ್ಧತೆ ಹೊಂದಿದೆ

ಗೃಹ ಸಚಿವ ಅರಗ ಜ್ಞಾನೇಂದ್ರ

ಗೃಹ ಸಚಿವ ಅರಗ ಜ್ಞಾನೇಂದ್ರ

  • Share this:
    ಮೈಸೂರು (ಆ. 26): ಮೈಸೂರು ಸಾಮೂಹಿಕ ಅತ್ಯಾಚಾರ (Mysore Gang Rape) ಕುರಿತು ಒಂದರ ಮೇಲೆ ಒಂದು ವಿವಾದತ್ಮಕ ಹೇಳಿಕೆ ನೀಡುವ ಮೂಲಕ ಗೃಹ ಸಚಿವ ಅರಗ ಜ್ಞಾನೇಂದ್ರ (Araga Jnanendra) ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದಾರೆ. ಇದೇ ವೇಳೆ ಸಂತ್ರಸ್ತ ಯುವತಿ ಅಷ್ಟು ಹೊತ್ತಿನಲ್ಲಿ ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತು ಎಂಬ ಹೇಳಿಕೆಗೆ ಸಾಕಷ್ಟು ಖಂಡನೆ ಕೂಡ ವ್ಯಕ್ತವಾಗಿತ್ತು. ಗೃಹ ಸಚಿವರು ಇಷ್ಟು ಬೇಜವಾಬ್ದಾರಿಯುತವಾಗಿ ಹೇಳಿಕೆ ನೀಡಿದ ಕುರಿತು ಆಕ್ರೋಶ ವ್ಯಕ್ತವಾದ ಹಿನ್ನಲೆ ಮಾತನಾಡಿರುವ ಅರಗ ಜ್ಞಾನೇಂದ್ರ ಅವರು, ಮನನೊಂದು ನಾನು ಈ ರೀತಿ ಹೇಳಿಕೆ ನೀಡಿದ್ದೆ. ಸಂತ್ರಸ್ತ ಯುವತಿ ನನ್ನ ಮಗಳಿದ್ದಂತೆ ನಾನು ಆತಂಕದಿಂದ ಆ ಮಾತನ್ನು ಹೇಳಿದ್ದೇನೆ. ಆ ಮಾತನ್ನು‌ ಹಿಂತೆಗೆದುಕೊಳ್ಳುತ್ತೇನೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

    ಹೆಣ್ಣು ಮಕ್ಕಳ ಸುರಕ್ಷತೆಗೆ ಬೊಮ್ಮಾಯಿ ಸರ್ಕಾರ ಬದ್ಧ

    ನನ್ನ ಈ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ, ಆ ಬಗ್ಗೆ ವಿಷಾದಿಸುತ್ತೇನೆ. ಎಲ್ಲಾ ಹೆಣ್ಣು ಮಕ್ಕಳ ಬಗ್ಗೆ ನಮಗೆ ಗೌರವವಿದೆ. ಬೊಮ್ಮಾಯಿ ಸರ್ಕಾರ ಎಲ್ಲಾ ಹೆಣ್ಣು ಮಕ್ಕಳ ಮಾನ, ಪ್ರಾಣ ಕಾಪಾಡುವ ಬದ್ಧತೆ ಹೊಂದಿದೆ. ಮೈಸೂರು ಪ್ರಕರಣದ ಕುರಿತು ಹಿರಿಯ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. ಯಾರಿಗೆ ತೊಂದರೆ ಆಗಿದೆ ಅವರು ಶಾಕ್​ನಿಂದ ಹೊರಬಂದಿಲ್ಲ. ಅವರ ಹೇಳಿಕೆ ನಮಗೆ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಅದನ್ನು ಪತ್ತೆ ಹಚ್ಚುವ ಎಲ್ಲಾ ಪ್ರಯತ್ನ ನಡೆಯುತ್ತಿವೆ.

    ನಮ್ಮ ಪೊಲೀಸರ ಮೇಲೆ ಭರವಸೆ ಇದೆ

    ಪ್ರಕರಣ ಕುರಿತು ತನಿಖೆ ಚುರುಕು ಗೊಳಿಸಲಾಗಿದೆ,  ಮೈಸೂರು ಪೊಲೀಸರ ಜೊತೆಗೆ  ಬೆಂಗಳೂರಿನ ಹಿರಿಯ  ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಮುಂದಾಗಲಾಗಿದೆ. ಈ ಪ್ರಕರಣವನ್ನು ನಮ್ಮ ಪೊಲೀಸ್​ ಅಧಿಕಾರಿಗಳು ಸವಾಲ್​ ಆಗಿ ಸ್ವೀಕರಿಸಿದ್ದಾರೆ.  ನಮ್ಮ ಪೊಲೀಸರ ಮೇಲೆ ನನಗೆ ಭರವಸೆ ಇದ್ದು, ಶೀಘ್ರ ಆರೋಪಿಗಳ ಬಂಧಿಸಲಾಗುವುದು ಎಂದರು.

    ಇದನ್ನು ಓದಿ: ಕಾಂಗ್ರೆಸ್​ನವರು ರೇಪ್​ ಮಾಡಿದ್ರೆ ಬಂಧಿಸಿ; ಗೃಹ ಸಚಿವರ ಮಾತಿಗೆ ಕಿಡಿಕಾರಿದ ಡಿಕೆ ಶಿವಕುಮಾರ್​​

    ಮುಖ್ಯಮಂತ್ರಿ ಹೆಗಲಿಗೆ 

    ಕಾಂಗ್ರೆಸ್​ ರಾಜೀನಾಮೆ ಆಗ್ರಹ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದ ಅವರಿಗೆ ಟೀಕೆ ‌ಮಾಡುವ ಹಕ್ಕಿದೆ. ಪ್ರತಿಭಟನೆ ಮಾಡುವ ಹಕ್ಕು ಮಾಡಲಿ. ಗೃಹ ಸಚಿವಾಲಯದಲ್ಲಿ ಕೆಲಸ ಮಾಡಿದ ಹಿರಿಯರು ನಮ್ಮಲ್ಲಿದ್ದಾರೆ. ಈ ಬಗ್ಗೆ ಅವರು ತಿಳಿಸುತ್ತಾರೆ ಎಂದು ಈ ಹಿಂದೆ ಗೃಹ ಸಚಿವಾಲಯ ಕಾರ್ಯ ನಿರ್ವಹಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಗಲಿಗೆ ಹಾಕಿದರು.

    ರಾಜೀನಾಮೆಗೆ ಕಾಂಗ್ರೆಸ್​ ಒತ್ತಾಯ

    ಪ್ರಕರಣ ಕುರಿತು ಮಾತನಾಡಿದ್ದ ಗೃಹ ಸಚಿವರು, ಸಂಜೆ 7 ಮತ್ತು 7 30ರ ಸುಮಾರಿಗೆ ನಿರ್ಜನ ಪ್ರದೇಶಕ್ಕೆ  ಯುವಕ-ಯುವತಿ  ಹೋಗಿದ್ದಾರೆ. ಅಲ್ಲಿಗೆ ಅವರು ಹೋಗಬಾರದಾಗಿತ್ತು, ಯಾರನ್ನೂ ಹೋಗಬೇಡಿ ಎಂದು ಪೊಲೀಸರಿಗೆ ಪದೇ ಪದೇ ತಡೆಯಲು ಆಗುತ್ತದೆಯೇ ಎಂದಿದ್ದರು.

    ಅವರ ಈ ಹೇಳಿಕೆಗೆ ಟೀಕಿಸಿದ ಕಾಂಗ್ರೆಸ್​ ನಾಯಕರು ಬಿಜೆಪಿ ನಾಯಕರು ಈ ರೀತಿ ಬೇಜಾಬ್ದಾರಿ ಹೇಳಿಕೆ ನೀಡುತ್ತಿರುವುದು ಹೊಸದಲ್ಲ. ರಾಜ್ಯದ ಹೆಣ್ಣುಮಕ್ಕಳ ಮಾನ-ಪ್ರಾಣದ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಗೃಹ ಸಚಿವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:Seema R
    First published: