ಬೆಂಗಳೂರು ಹೊರವಲಯದಲ್ಲಿ ಕಾರ್ಖಾನೆ ತ್ಯಾಜ್ಯ ನೀರಿನಿಂದ ಪುರಾಣ ಪ್ರಸಿದ್ಧ ಕೆರೆ ಕಲುಷಿತ

ಜಿಗಣಿ, ರಾಜಾಪುರ, ಹೆನ್ನಾಗರ ಸುತ್ತಮುತ್ತ ಇರುವ ಕಾರ್ಖಾನೆ ಮತ್ತು ವಸತಿ ಸಮುಚ್ಚಯಗಳಿಂದ ತ್ಯಾಜ್ಯ ನೀರು ಹರಿದುಬಂದು ಹೆನ್ನಾಗರ ಕೆರೆ ಕಲುಷಿತಗೊಂಡಿದೆ. ಅಧಿಕಾರಿಗಳು ಇದು ಗೊತ್ತಿದ್ದರೂ ಕಣ್ಮುಚ್ಚಿ ಕೂತಿದ್ದಾರೆ.

ಹೆನ್ನಾಗರ ಕೆರೆ ಕಲುಷಿತಗೊಂಡಿರುವುದು

ಹೆನ್ನಾಗರ ಕೆರೆ ಕಲುಷಿತಗೊಂಡಿರುವುದು

  • Share this:
ಆನೇಕಲ್: ಸರ್ಕಾರ ಕೆರೆಗಳ ಅಭಿವೃದ್ಧಿಗೆ ಅದರಲ್ಲೂ ಬೆಂಗಳೂರು ನಗರ ಸುತ್ತಮುತ್ತ ಕೆರೆಗಳ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ಮೀಸಲಿಡುತ್ತದೆ. ಆದ್ರೆ ವಾಸ್ತವವಾಗಿ ಕೆರೆಗಳ ಅಭಿವೃದ್ದಿ ಇರಲಿ, ಕನಿಷ್ಠ ಅವುಗಳ ಉಳಿಸುವ ಕೆಲಸವೂ ಆಗುವುದಿಲ್ಲ. ಅದಕ್ಕೆ ತಾಜಾ ಉದಾಹರಣೆಯೇ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹೆನ್ನಾಗರ ಕೆರೆ. ನಿಜ ಬೆಂಗಳೂರು ಹೊರವಲಯ ‌ಆನೇಕಲ್‌ ತಾಲೂಕಿನ‌ ಹೆನ್ನಾಗರ ಕೆರೆ ಅತಿದೊಡ್ಡ ಕೆರೆ. ಸುಮಾರು ನಾನೂರು ಎಕರೆಯಷ್ಟು ದೊಡ್ಡದಾದ ಈ ಕೆರೆ ‌ಈಗ ಮೆಲ್ಲಗೆ ಅವನತಿಯೆಡೆಗೆ ಸಾಗ್ತಿದೆ.

ಈಗಿರುವ ನೀರು ಸ್ನಾನ ಮಾಡೋದು ದೂರದ ಮಾತು, ಪ್ರಾಣಿಗಳು ಈ ಕಡೆ ಸುಳಿಯಲ್ಲ ಅಷ್ಟರ ಮಟ್ಟಿಗೆ ಈಗ ಇದು ವಿಷವಾಗ್ತಿದೆ. ಜಿಗಣಿ, ‌ರಾಜಾಪುರ, ಹೆನ್ನಾಗರ ಸುತ್ತಮುತ್ತಲಿನ ವಸತಿ ಸಮುಚ್ಚಯ ಮತ್ತು ಕಾರ್ಖಾನೆಗಳ ಕೆಮಿಕಲ್‌ ನೀರು ಹರಿದು ಬಂದು ಕೆರೆ ಸೇರುತ್ತಿದೆ. ಕೇವಲ ಐದು ವರ್ಷಗಳ ಹಿಂದೆ ಈ‌ ಕೆರೆಯ ನೀರನ್ನು ಕೃಷಿ, ಜನ ಜಾನುವಾರುಗಳಿಗೆ ಬಳಸಲಾಗ್ತಿತ್ತು. ಆದರೆ‌ ಈಗ ಹೆನ್ನಾಗರ ಕೆರೆ‌‌‌ ನೀರು ಹಚ್ಛ ಹಸಿರು ಬಣ್ಣಕ್ಕೆ‌‌ ತಿರುಗಿ ವಿಷವಾಗಿದೆ. ಕೆರೆಯ ಸಮೀಪವೇ ಜನವಸತಿ ಪ್ರದೇಶವಿದ್ದು, ದುರ್ವಾಸನೆಯಿಂದ ಹೈರಾಣಾಗಿ ಹೋಗಿದ್ದು. ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಪಂಚಾಯ್ತಿ ಅಧಿಕಾರಿಗಳ ಬಗ್ಗೆ ಸ್ಥಳೀಯ ವಾಸಿ ಪಾಪಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕನಕಪುರ ಜಿಲೆಟಿನ್ ಸ್ಫೋಟ ಪ್ರಕರಣ ತನಿಖೆ ಚುರುಕು; ನಾಲ್ವರು ಆರೋಪಿಗಳು ವಶಕ್ಕೆ

ಇನ್ನು, ಮಳೆಗಾಲ ಬಂತಂದ್ರೆ ಸಾಕು ಮಳೆ ನೀರಿನೊಂದಿಗೆ ಕೈಗಾರಿಕೆಗಳ ಕಲುಷಿತ ನೀರು ಕೆರೆ ಸೇರುತ್ತದೆ. ಮಾತ್ರವಲ್ಲದೆ ಸುತ್ತಮುತ್ತಲಿನ ಹಳ್ಳಿಗಳ ಕಲುಷಿತ ನೀರು ಸಹ ಕೆರೆಗೆ ಹರಿ ಬಿಡಲಾಗುತ್ತಿದೆ. ಕೆರೆಗೆ ಹರಿಸುವ ಮುನ್ನ ಶುದ್ಧೀಕರಿಸಿ ಕೆರೆಗೆ ಹರಿಸಬೇಕೆಂಬ ನಿಯಮವಿದೆ. ಆದ್ರೆ ಸ್ಥಳೀಯ ಪಂಚಾಯ್ತಿ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ವಹಿಸುತ್ತಿಲ್ಲ. ಕೋಟಿ ಕೋಟಿ ಬಜೆಟ್ ಮಂಡಿಸುತ್ತಾರೆ. ಆದ್ರೆ ಕೆರೆ ಅಭಿವೃದ್ದಿಗೆ ಮಾತ್ರ ಮನಸ್ಸು ಮಾಡುತ್ತಿಲ್ಲ. ಇದರಿಂದ ಗ್ರಾಮದ ವಾಸಿಗಳು ಕಷ್ಟಪಡುವಂತಾಗಿದೆ. ನೂರಾರು ವರ್ಷಗಳ ಇತಿಹಾಸವಿರುವ ಪುರಾಣ ಪ್ರಸಿದ್ದ ಕೆರೆ ಇಂದು ಬೆಳ್ಳಂಡೂರು ಕೆರೆ ರೀತಿ ಕಲುಷಿತಗೊಳ್ಳುತ್ತಿದೆ. ಜನಪ್ರತಿನಿಧಿಗಳು ಮಾತ್ರ ಭರವಸೆಯಲ್ಲಿಯೇ ಅಧಿಕಾರದ ಅವಧಿ ಮುಗಿಸುತ್ತಿದ್ದಾರೆ. ಕೆರೆ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಎಂದು ಗ್ರಾಮಸ್ಥರಾದ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಯೋಗೇಶಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ ಕುಲಕರ್ಣಿ ಇಂದು ಹಿಂಡಲಗಾ ಜೈಲಿಂದ ಬಿಡುಗಡೆ

ಒಟ್ನಲ್ಲಿ ಇಡೀ ಬೆಂಗಳೂರು ಕಾಂಕ್ರೀಟ್ ಕಾಡಾಗಿದೆ. ಬೆಂಗಳೂರು ನಗರದಲ್ಲಿ ಹಾಕಲಾಗಿರುವ ಹಾಗೂ ಹಾಕುತ್ತಿರುವ ಬೋರ್ ವೆಲ್ ಗಳಲ್ಲಿ ನೀರು ಬರಬೇಕಾದ್ರೆ ಅಂತರ್ಜಲ‌ ಹೆಚ್ಚು ಮಾಡಬೇಕು ಅಂತಾರೆ ತಜ್ಞರು. ಆದ್ರೆ ಹೀಗೆ ಕೆರೆಗಳಲ್ಲಿ ಕೆಮಿಕಲ್‌ ತುಂಬಿದರೆ ಕೊಳವೆ ಬಾವಿಗಳಲ್ಲಿ ಕೆಮಿಕಲ್ ಮಿಶ್ರಿತ ಬರುತ್ತೆ ಅನ್ನೋದು ಕೂಡ ಅಷ್ಟೇ ಸತ್ಯ. ನೂರಾರು ಎಕರೆ ಪ್ರದೇಶದ ಕೆರೆ ನೀರು ವಿಷವಾಗುತ್ತಿರೋದನ್ನು ನೋಡುತ್ತಿರುವ ನಾವು ಮುಂದಿನ‌ ಜನರೇಷನ್ ಗೆ ಏನು ಬಿಟ್ಟು ಹೋಗುತ್ತಿದ್ದೇವೆ ಅಂತ ಪ್ರಶ್ನಿಸಿಕೊಳ್ಳಬೇಕಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಆದೂರು ಚಂದ್ರು
Published by:Vijayasarthy SN
First published: