ಬೆಂಗಳೂರು (ಏ. 23): ಇಂದಿನಿಂದ ರಾಜ್ಯದಲ್ಲಿ ವಿಕೇಂಡ್ ಲಾಕ್ಡೌನ್ ಜಾರಿಯಾಗಲಿದೆ. ಸಂಜೆ 9 ಗಂಟೆಯಿಂದ ನಗರಗಳು ಸ್ತಬ್ಧವಾಗಲಿದ್ದು, ಬೇಗ ಮನೆಗೆ ಸೇರಿಕೊಳ್ಳೋಣ ಎನ್ನುವವರಿಗೆ ಮಳೆ ಅಡ್ಡಿಯಾಗಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಇಂದು ಕೂಡ ವರುಣಾನ ಅರ್ಭಟ ಹೆಚ್ಚಾಗಿದೆ. ರಾಜಧಾನಿಯಲ್ಲಿ ಸಂಜೆ ಸುರಿದ ಮಳೆಗೆ ಜನರು ಹೈರಾಣಾಗಿದ್ದಾರೆ. ವಿಕೇಂಡ್ ಲಾಕ್ಡೌನ್ ಹಿನ್ನಲೆ ಬಸ್ಗಳ ಸಂಖ್ಯೆ ಕೂಡ ಗಣನೀಯವಾಗಿ ಕಡಿಮೆಯಾಗಿದ್ದು, ಮಳೆ ಶುರುವಾದ ಹಿನ್ನಲೆ ಜನರು ತೊಂದರೆ ಅನುಭವಿಸುವಂತಾಗಿದೆ. ಮೆಜೆಸ್ಟಿಕ್, ಗಾಂಧಿನಗರ, ಯಶವಂತಪುರ, ದಾಸರಹಳ್ಳಿ, ರಾಜಾಜಿನಗರ, ಬಸವೇಶ್ವರನಗರ, ವಿಲ್ಸನ್ ಗಾರ್ಡನ್, ಶಾಂತಿ ನಗರ, ಕೋರಮಂಗಲ ಸೇರಿದಂತೆ ಹಲವೆಡೆ ಮಳೆಗೆ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.
ಸುಮಾರು ಅರ್ಧ ಗಂಟೆಯಿಂದ ಗುಡುಗು-ಮಿಂಚಿನಿಂದ ಕೂಡಿದ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶದ ಹಲವೆಡೆ ಮಳೆ ನೀರು ನುಗ್ಗಿದೆ. ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಎದ್ದಿರುವುದರಿಂದ ನಿನ್ನೆ ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದಿದ್ದು, ಬಸವನಗುಡಿ, ಜಯನಗರ, ಬನಶಂಕರಿ, ವಿಜಯನಗರ, ಯಲಹಂಕ, ಮೆಜೆಸ್ಟಿಕ್ ಸುತ್ತಮುತ್ತಲಿನ ಏರಿಯಾಗಳು ಜಲಾವೃತವಾಗಿತ್ತು
ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಚಿಕ್ಕಮಗಳೂರು, ಕೋಲಾರ, ಯಾದಗಿರಿ ಸೇರಿದಂತೆ ಹಲವು ಕಡೆ ಮಳೆಯಾಗಿದೆ.
ಕೋಲಾರದ ಕೆಜಿಎಫ್ನಲ್ಲಿ ಗಾಳಿ ಸಹಿತ ಜೋರು ಮಳೆಯಾಗಿದ್ದು, ಬೃಹತ್ ಮರವೊಂದು ಉರುಳಿ ಬಿದ್ದಿದೆ. ಅಲ್ಲದೇ, ಆಟೋ ಮೇಲೆ ವಿದ್ಯುತ್ ಕಂಬ ಉರುಳಿ ಆಟೋ ಜಖಂಗೊಂಡಿದೆ. ಸ್ಥಳಕ್ಕೆ ಬಂದ ನಗರಸಭೆ ಅಧಿಕಾರಿಗಳು ಹಾಗೂ ಬೆಸ್ಕಾಂ ಸಿಬ್ಬಂದಿ ಭೇಟಿ, ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮಲೆನಾಡು ಮತ್ತು ಕರಾವಳಿಯಲ್ಲಿ ಇನ್ನೂ ಮೂರ್ನಾಲ್ಕು ದಿನ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಅನೇಕ ಕಡೆ ಮೋಡ ಕವಿದ ವಾತಾವರಣವಿರಲಿದ್ದು, ತುಂತುರು ಮಳೆಯಾಗಲಿದೆ. ಕರ್ನಾಟಕದ ಮಾತ್ರವಲ್ಲದೆ ತಮಿಳುನಾಡು, ಕೇರಳ, ತೆಲಂಗಾಣ, ರಾಯಲಸೀಮೆಯಲ್ಲಿಯೂ ಇನ್ನು ಮೂರ್ನಾಲ್ಕು ದಿನ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ