ಬೆಂಗಳೂರು (ಜು. 23): ನೆರೆಯ ಮಹಾರಾಷ್ಟ್ರ ಮತ್ತು ಬೆಳಗಾವಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆ ಕೃಷ್ಣ ನದಿ ನೀರಿನ ಹರಿವು ಹೆಚ್ಚಿದ್ದು, ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಸಮೀಪದ ಬಸವಸಾಗರ ಜಲಾಶಯ ಭರ್ತಿಯಾಗಿದೆ. ಇಂದು ಮತ್ತೆ ಕೃಷ್ಣ ನದಿ ನೀರು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನಲೆ ಈಗಾಗಲೇ ನದಿ ತೀರದ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಾಲ್ಕು ಎನ್ ಡಿ ಆರ್ ಎಫ್ ತಂಡಗಳನ್ನು ನಾಲ್ಕು ವಲಯಗಳಿಗೆ ಕಳಿಸಿದ್ದೇವೆ. ಕಾಳಜಿ ಕೇಂದ್ರಗಳನ್ನು ತೆರೆದು ವ್ಯವಸ್ಥೆ ಮಾಡುತ್ತಿದ್ದೇವೆ. 18 ತಾಲೂಕು ಪರಿಣಾಮ ಆಗಿದೆ. ಜಿಲ್ಲಾಧಿಕಾರಿಗಳಿಂದ ಹಾನಿಯಾಗಿರುವ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮಳೆಯಿಂದ ಹಾನಿಗೆ ಒಳಗಾದ ಜನರ ರಕ್ಷಣೆಗೆ ಸೂಚನೆ ನೀಡಲಾಗಿದೆ. ಪ್ರವಾಹಕ್ಕೆ ಒಳಗಾದವರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡುವ ಕೆಲಸ ಮಾಡಿದ್ದೇವೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಅಲರ್ಟ್ ಘೋಷಣೆ ಮಾಡಿದ್ದೇವೆ. ವಾಸ್ತವಿಕ ಮಳೆಗಿಂತ 10 ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗಿದೆ ಈ ಹಿನ್ನಲೆ ಅನಾಹುತ ಹೆಚ್ಚಾಗಿದೆ. ಹವಾಮಾನ ಇಲಾಖೆ ತಿಳಿಸಿರುವಂತೆ ರಾಜ್ಯದಲ್ಲಿ ಇನ್ನೂ ಮೂರು ದಿನ ಹೆಚ್ಚು ಮಳೆಯಾಗಬಹುದು ಎಂದರು.
ರಾಜ್ಯದಲ್ಲಿ ಮಳೆ ಅಬ್ಬರ ಹೆಚ್ಚಿರುವ ಹಿನ್ನಲೆ ಜಿಲ್ಲಾ ಉಸ್ತುವಾರಿ ಸಚಿವರುಗಳು ಮತ್ತು ಶಾಸಕರು ತಮ್ಮ ತಮ್ಮ ಜಿಲ್ಲೆ ಹಾಗೂ ಕ್ಷೇತ್ರಗಳಿಗೆ ತೆರಳಿ ಜನರಿಗೆ ನೆರವಾಗುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಮಳೆಯಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ತಕ್ಷಣಕ್ಕೆ ಸಹಾಯ ಮಾಡಿ ಅವರ ರಕ್ಷಣೆ ಮತ್ತು ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.
ಸತತ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಸೇರಿದಂತೆ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಈಗಾಗಲೇ ಮಾತನಾಡಿ, ನದಿ ಪಾತ್ರದ ಹಳ್ಳಿಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಹಾಗೂ ಜನ ಜಾನುವಾರುಗಳ ಸುರಕ್ಷತೆಗೆ ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಿರುವುದಾಗಿ ಕೂಡ ಅವರು ತಿಳಿಸಿದ್ದಾರೆ.
ಇದನ್ನು ಓದಿ: ಧಾರವಾಡದಲ್ಲಿ ಅಬ್ಬರದ ಮಳೆಗೆ ಜನ ತತ್ತರ: ಹಳ್ಳ - ಕೊಳ್ಳ, ಕೆರೆ ಕೋಡಿ ಒಡೆದು ಆತಂಕ ಸೃಷ್ಟಿ
ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಾದ ಹೊರಹರಿವು ಹೆಚ್ಚಾಗಿದ್ದು, ಇವತ್ತು ಸಂಜೆಯವರೆಗೆ ಸುಮಾರು 3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತದೆ. ಅಪಾಯದಮಟ್ಟ ಮೀರಿ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿರುವ ಹಳ್ಳಿಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ನದಿಪಾತ್ರದಲ್ಲಿರುವ 16 ಗ್ರಾಮದ ಜನರಿಗೆ ಡಂಗೂರದ ಮೂಲಕ ಜಾಗೃತಿ ಹೇಳಲಾಗಿದೆ. ಅಲ್ಲದೇ ನದಿ ದಡಕ್ಕೆ ಯಾರು ಹೋಗದಂತೆ ಮುನ್ನೇಚರಿಕೆ ವಹಿಸುವಂತೆ ತಿಳಿಸಿದ್ದರುಪಂಪ್ ಸೆಟ್, ಪೈಪ್ ಹಾಗೂ ಯಾವುದೇ ಕೃಷಿ ಉಪಕರಣಗಳಿಗಾಗಿ ನದಿ ದಡಕ್ಕೆ ಹೋಗಬಾರದೆಂದು ಜಾಗೃತಿ ಮೂಡಿಸಲಾಗುತ್ತಿದೆ.
ಮಲೆನಾಡಿನಲ್ಲಿ ಮುಂದುವರಿದ ವರುಣನ ಆರ್ಭಟ ಮುಂದುವರೆದಿದ್ದು, ಹಲವು ಸೇತುವೆ, ರಸ್ತೆಗಳು ಮುಳುಗಡೆಯಾಗಿದೆ. ಭಾರಿ ಮಳೆಯಿಂದಾಗಿ ಅನೇಕ ಕಾಲು ಸಂಕಗಳು ಜಲವೃತಗೊಂಡಿದ್ದು, ಅನೇಕ ರಸ್ತೆಗಳು ಸಂಪರ್ಕ ಕಡಿತು ಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ