ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಜುಲೈ 19, 22ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಂದು ಘೋಷಿದ ಬೆನ್ನಲ್ಲೇ ಸಂಪುಟದಲ್ಲಿನ ಸಮನ್ವಯತೆ ಕೊರತೆ ಬಹಿರಂಗಗೊಂಡಿದೆ. ಸಚಿವ ಸುರೇಶ್ ಕುಮಾರ್ ಘೋಷಣೆ ನಂತರ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಕೆ.ಸುಧಾಕರ್ 10ನೇ ತರಗತಿ ಪರೀಕ್ಷೆ ಘೋಷಣೆ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಶಿಕ್ಷಣ ಸಚಿವರಾಗಲಿ ಮತ್ತೊಬ್ಬರಾಗಲಿ ನನ್ನ ಜೊತೆ ಈ ಬಗ್ಗೆ ಚರ್ಚಿಸಿಲ್ಲ. ನನ್ನ ಗಮನಕ್ಕೆ ಇದು ಬಂದೇ ಇಲ್ಲ ಎಂಬ ಹೇಳಿಕೆ ಸರ್ಕಾರಕ್ಕೆ ಇರಿಸುಮುರಿಸು ತರಿಸಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಘೋಷಣೆ ನಂತರ ಮಾಧ್ಯಮಗಳಿಂದ ಮಾಹಿತಿ ಸಿಕ್ಕಿದೆ. ಶಿಕ್ಷಣ ಸಚಿವರ ಜೊತೆ ಮಾತನಾಡುತ್ತೇನೆ. ಶಿಕ್ಷಣ ಸಚಿವರಿಗೆ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಕೊಟ್ಟಿದ್ದರ ಬಗ್ಗೆಯೂ ಗೊತ್ತಿಲ್ಲ ಎಂದು ಶಿಕ್ಷಣ ಸಚಿವರ ನಡೆಗೆ ಸುಧಾಕರ್ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.
ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ನಡುವೆ ಸಮನ್ವಯತೆ ಇಲ್ಲವಾ?
ಆರೋಗ್ಯ ಇಲಾಖೆ ಜತೆ ಚರ್ಚೆ ನಡೆಸದೇ ಪರೀಕ್ಷೆ ನಡೆಸುವ ನಿರ್ಧಾರ ಮಾಡಿದ್ರಾ ಸುರೇಶ್ ಕುಮಾರ್ ಎಂಬ ಪ್ರಶ್ನೆ ಉದ್ಭವಿಸಿದೆ. ಮತ್ತೆ ಎರಡೂ ಇಲಾಖೆಗಳ ನಡುವೆ ಸಮನ್ವಯ ಕೊರತೆ ಉಂಟಾಗಿರುವುದು ಬಯಲಾಗಿದೆ. ಒಂದು ಕಡೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಆತಂಕ ಮೂಡಿಸಿದೆ. ಇನ್ನೊಂದು ಕಡೆ ಜವಾಬ್ದಾರಿ, ಬದ್ಧತೆ ಮರೆತ ಹೊಣೆ ಹೊತ್ತ ಇಲಾಖೆಗಳು, ಪರೀಕ್ಷೆಯಂಥ ದೊಡ್ಡ ನಿರ್ಧಾರವನ್ನ ಶಿಕ್ಷಣ ಇಲಾಖೆ ಒಂದೇ ತೆಗೆದುಕೊಳ್ತಾ ಎಂಬ ಅನುಮಾನ ಮೂಡಿದೆ. ಆರೋಗ್ಯ ಇಲಾಖೆ ಕಡೆಗಣಿಸಿ ನಿರ್ಧಾರ ಕೈಗೊಂಡ್ರಾ ಸುರೇಶ್ ಕುಮಾರ್ ಎನ್ನಲಾಗುತ್ತಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಿಬ್ಬಂದಿಗೆ ಲಸಿಕೆ ವಿಚಾರದ ಬಗ್ಗೆ ಮಾತನಾಡಿದ ಸಚಿವ ಸುಧಾಕರ್, ಎಷ್ಟು ಜನ ಲಸಿಕೆ ಹಾಕಿಸಿಕೊಳ್ಳಬೇಕಿರುವ ಶಿಕ್ಷಕರು, ಸಿಬ್ಬಂದಿ ಇದಾರೆ ಅಂತ ಮಾಹಿತಿ ಬರಬೇಕು. ಶಿಕ್ಷಣ ಇಲಾಖೆಯಿಂದ ಈ ಮಾಹಿತಿ ಬಂದ ಮೇಲೆ ಕ್ರಮ ತಗೋತೀವಿ ಎಂದು ತಿಳಿಸಿದರು.
ಇದನ್ನೂ ಓದಿ: Explained: ಭಾರತದಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಗೆ ಕಾರಣವೇನು? ಇದರಿಂದ ಯಾರಿಗೆ ಲಾಭ?
ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಘೋಷಣೆ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್ ಅಸಮಾಧಾನ ಹೊರ ಹಾಕಿದರು. ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಜುಲೈ ಎರಡನೇ ವಾರ SSLC ಪರೀಕ್ಷೆ ಮಾಡುವುದಾಗಿ ಹೇಳಿದ್ದಾರೆ. ಇದನ್ನ ಸ್ಪಷ್ಟವಾಗಿ, ನೇರವಾಗಿ ವಿರೋಧ ಮಾಡುವೆ. ಯಾವುದೇ ಕಾರಣಕ್ಕೂ SSLC ಪರೀಕ್ಷೆ ಮಾಡಬಾರದು. ಪರೀಕ್ಷೆ ಇಲ್ಲದೆ SSLC ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎಂದು ಆಗ್ರಹಿಸಿದರು.
ಸುಮಾರು 10 ಲಕ್ಷ ವಿದ್ಯಾರ್ಥಿಗಳು ,ಪೋಷಕರು, ಸಿಬ್ಬಂದಿ ಸೇರಿ 25 ಲಕ್ಷ ಮಂದಿ ಪರೀಕ್ಷೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ರಾಜ್ಯದಲ್ಲಿ ಸಂಪೂರ್ಣವಾಗಿ ಕೊರೊನಾ ಹೋಗಿಲ್ಲ. ಡಾ.ದೇವಿ ಶೆಟ್ಟಿ ವರದಿಯಲ್ಲಿ ಸಂಪೂರ್ಣ ಲಸಿಕೆ ನಂತರ ಶಾಲೆ ಆರಂಭ ಮಾಡಬೇಕು ಎಂದಿದೆ. ಇನ್ನೂ ಶಾಲೆ ಅರಂಭವಾಗಿಲ್ಲ, ವಿದ್ಯಾರ್ಥಿಗಳ ಜೀವ ಮುಖ್ಯ. PUC ಪರೀಕ್ಷೆ ರದ್ದು ಮಾಡಲಾಗಿದೆ, ಸಾಮಾನ್ಯವಾಗಿ PU ಪರೀಕ್ಷೆ ಮಾಡಬೇಕಿತ್ತು. SSLC ಪರೀಕ್ಷೆ ರದ್ದು ಮಾಡುವುದರಿಂದ ಏನೂ ತೊಂದರೆ ಆಗಲ್ಲ. ಎಲ್ಲರನ್ನೂ ಪಾಸ್ ಮಾಡುವುದಾಗಿ ಹೇಳಿ ಪರೀಕ್ಷೆ ಮಾಡ್ತಿದೀರಿ, ಸುರೇಶ್ ಕುಮಾರ್ ಅವರೇ ಹಠಕ್ಕೆ ಬೀಳಬೇಡಿ. ಅತ್ಯಂತ ಗಂಭೀರವಾದ ಪರಿಸ್ಥಿತಿಯಲ್ಲಿ SSLC ಪರೀಕ್ಷೆ ಮಾಡಬೇಡಿ ಎಂದು ಆಗ್ರಹಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ