ಹರಪನಹಳ್ಳಿ ಪೊಲೀಸ್ ಕೆರೆ ಕಲುಷಿತ; ಕೆರೆ ಉಳಿಸುವಂತೆ ಸ್ಥಳೀಯರ ಒತ್ತಾಯ

ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ದಶಕಗಳಿಂದ ಕಲುಷಿತಗೊಂಡಿದ್ದ ಹರಪನಹಳ್ಳಿ ಕೆರೆಯನ್ನ ಪೊಲೀಸರೇ ಸೇರಿಕೊಂಡು ಸ್ವಚ್ಛಗೊಳಿಸಿದ್ದರು. ಇದೀಗ ಇದೇ ಕೆರೆ ಮತ್ತೊಮ್ಮೆ ಕಲುಷಿತಗೊಂಡು ಗಬ್ಬುನಾರುತ್ತಿದೆ.

ಆನೇಕಲ್​ನ ಹರಪನಹಳ್ಳಿ ಅಕಾ ಪೊಲೀಸ್ ಕೆರೆ

ಆನೇಕಲ್​ನ ಹರಪನಹಳ್ಳಿ ಅಕಾ ಪೊಲೀಸ್ ಕೆರೆ

  • Share this:
ಆನೇಕಲ್: ಆ ಕೆರೆ ದಶಕಗಳಿಂದ ಕಸ ಕಡ್ಡಿ, ಕೈಗಾರಿಕಾ ತ್ಯಾಜ್ಯದಿಂದ ಗಬ್ಬುನಾರುತ್ತಿತ್ತು. ಗಿಡ ಗಂಟೆಗಳಿಂದ ಅಸ್ತಿತ್ವ ಕಳೆದುಕೊಂಡು ಹೂಳು ತುಂಬಿ ಹೋಗಿತ್ತು. ಅಂತಹ ಕೆರೆಗೆ ಆನೇಕಲ್ ಉಪವಿಭಾಗದ ಅಂದಿನ ಡಿವೈಎಸ್ಪಿ ಎಸ್ ಕೆ ಉಮೇಶ್ ಮತ್ತು ತಂಡ ಹಲವರ ಸಹಕಾರದೊಂದಿಗೆ ಒಂದು ತಿಂಗಳು ಕಾಲ ಶ್ರಮದಾನ ನಡೆಸಿ ಕಾಯಕಲ್ಪ ನೀಡಿತ್ತು. ಶುದ್ಧಗೊಂಡು ಸಿಂಗಾರಗೊಂಡಿದ್ದ ಪೊಲೀಸ್ ಕೆರೆ ಇದೀಗ ಮತ್ತೆ ಕಲುಷಿತಗೊಳ್ಳುತ್ತಿದೆ.

ಹೌದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ಹರಪನಹಳ್ಳಿ ಕೆರೆ ಹತ್ತಾರು ವರ್ಷಗಳಿಂದ ಕಸದಿಂದ ಗಬ್ಬುನಾರುತ್ತಿತ್ತು. ಸುತ್ತಮುತ್ತಲ ವಸತಿ ಬಡಾವಣೆಗಳು ಮತ್ತು ಕೈಗಾರಿಕಾ ಪ್ರದೇಶಗಳಿಂದ ತ್ಯಾಜ ಈ ಕೆರೆಗೆ ಸೇರಿ ಕಲುಷಿತಗೊಂಡಿತ್ತು. ಇದನ್ನು ಗಮನಿಸಿದ್ದ ಆನೇಕಲ್ ಉಪವಿಭಾಗದ ಅಂದಿನ ಡಿವೈಎಸ್ಪಿ ಎಸ್ ಕೆ ಉಮೇಶ್ ತಮ್ಮ ಸಿಬ್ಬಂದಿ, ಸ್ಥಳೀಯರು ಮತ್ತು ಕೆಲ ರೌಡಿ ಶೀಟರ್​ಗಳ ನೆರವಿನೊಂದಿಗೆ ಬರೋಬ್ಬರಿ ಒಂದು ತಿಂಗಳ ಕಾಲ ಸ್ವಚ್ಚತಾ ಕಾರ್ಯ ನಡೆಸಿ, ಕೆರೆಯಲ್ಲಿದ್ದ ಕಡ್ಡಿ ಕಸ, ಸೊಪ್ಪು ಸದೆ ಸೇರಿದಂತೆ ಕೈಗಾರಿಕಾ ತ್ಯಾಜ್ಯವನ್ನು ಹೊರತೆಗೆದಿದ್ದರು.  ಮಾತ್ರವಲ್ಲದೆ ಇಡೀ ಕೆರೆಯನ್ನು ಮಾದರಿ ಕೆರೆಯನ್ನಾಗಿ ಸಿಂಗಾರಗೊಳಿಸಿದ್ದರು. ಅಂದಿನ‌ ಕೇಂದ್ರ ವಲಯ ಐಜಿಪಿ ದಯಾನಂದ್ ಅವರು ಪೊಲೀಸ್ ಕೆರೆ ಎಂದು ನಾಮಕರಣ ಮಾಡಿ ಉದ್ಘಾಟನೆ ಮಾಡಿದ್ದರು.

ಆದರೆ ಇತ್ತೀಚೆಗೆ ಸುತ್ತಮುತ್ತಲಿನ ಬಡಾವಣೆಗಳ ಕಲುಷಿತ ನೀರು ಕೆರೆಗೆ ಸೇರಿ ಪುನಃ ಮಾಲಿನ್ಯವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತಂದರು ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಮಹೇಶ್ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೈಕಾಲು ಕಟ್ ಆಗಿದ್ದ ಆರ್​ಟಿಐ ಕಾರ್ಯಕರ್ತ ವೆಂಕಟೇಶ್ ಸಾವು; ಆರೋಪಿಗಳ ಬಂಧನ

ಇನ್ನು, ಮಾದರಿ ಕೆರೆಯಂತಿದ್ದ ಹರಪನಹಳ್ಳಿ ಪೊಲೀಸ್ ಕೆರೆ ಪ್ರಾರಂಭದಲ್ಲಿ ಸುತ್ತಮುತ್ತಲಿನ ಹಳ್ಳಿ ವಾಸಿಗಳ ಪ್ರವಾಸಿ ತಾಣವಾಗಿತ್ತು. ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಿಕೊಂಡು ಕೆರೆ ನಿರ್ವಹಣೆ ಮಾಡಲು ಸುರೇಶ್ ಎಂಬುವವರಿಗೆ ಜವಾಬ್ದಾರಿ ನೀಡಲಾಗಿತ್ತು. ಆತ ಸಹ ಹಲವು ವರ್ಷಗಳಿಂದ ಕೆರೆಯ ಸ್ವಚ್ಚತೆ ಕಪಾಡಿಕೊಂಡಿ ಬರುತ್ತಿದ್ದ.‌ ಆದ್ರೆ ಇತ್ತೀಚೆಗೆ ಸುತ್ತಮುತ್ತಲಿನ ವಸತಿ ಬಡಾವಣೆಗಳು ಮತ್ತು ಹಳ್ಳಿಗಳ ಕಲುಷಿತ ನೀರು ಕೆರೆಗೆ ಸೇರುತ್ತಿದೆ. ಈ ಬಗ್ಗೆ ಸುತ್ತಮುತ್ತಲಿನ ಬಡಾವಣೆ ವಾಸಿಗಳಿಗೂ ಹಲವು ಬಾರಿ ಕಲುಷಿತ ನೀರು ಕೆರೆಗೆ ಹರಿಸದಂತೆ ಮನವಿ ಮಾಡಲಾಗಿದೆ. ಆದರೂ ವಸತಿ ಬಡಾವಣೆಗಳ ಕಲುಷಿತ ನೀರನ್ನು ಸಂಸ್ಕರಿಸದೇ ನೇರವಾಗಿ ಕೆರೆಗೆ ಹರಿಸಲಾಗುತ್ತಿದೆ. ಹಾಗಾಗಿ ಕಲುಷಿತಗೊಳ್ಳುತ್ತಿರುವ ಕೆರೆ ಉಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ನಾಗೇಶ್ ಒತ್ತಾಯಿಸಿದ್ದಾರೆ.

ಒಟ್ನಲ್ಲಿ ಪೊಲೀಸರು ಸಮಾಜ ಘಾತುಕರಿಗೆ ಶಿಕ್ಷೆ ಕೊಡಿಸಿ ಸಮಾಜದಲ್ಲಿನ ಕೊಳೆಯನ್ನು ತೊಳೆಯುವುದರ ಜೊತೆಗೆ ಬಹಳ ಮುತುವರ್ಜಿ ಮತ್ತು ಆಸಕ್ರಿಯಿಂದ ಕಸ ಕಡ್ಡಿ ಸ್ವಚ್ಚಗೊಳಿಸಿದ ಹರಪನಹಳ್ಳಿ ಕೆರೆ ಮತ್ತೆ ಕಲುಷಿತಗೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕೆರೆ ಸಂರಕ್ಷಣೆಗೆ ಕ್ರಮಕೈಗೊಳ್ಳಬೇಕಿದೆ.

ಇದನ್ನೂ ಓದಿ: ಯಡಿಯೂರಪ್ಪರನ್ನ ಇಳಿಸಿದರೆ, ಆಂಧ್ರದಲ್ಲಾಗಿದ್ದು ಕರ್ನಾಟಕದಲ್ಲಾಗುತ್ತೆ: ಬಿಜೆಪಿ ವರಿಷ್ಠರನ್ನ ಎಚ್ಚರಿಸಿದ ಸುರೇಶ್ ಗೌಡ

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಆದೂರು ಚಂದ್ರು
Published by:Vijayasarthy SN
First published: