ಯಡಿಯೂರಪ್ಪರ ಇಂದಿನ ಸ್ಥಿತಿಗೆ ಪುತ್ರ ವಿಜಯೇಂದ್ರನ ದುರಹಂಕಾರವೇ ಕಾರಣ: ಎಚ್.ವಿಶ್ವನಾಥ್ ಆರೋಪ

h vishwanath on by Vijayendra: ಯಡಿಯೂರಪ್ಪ ಪುತ್ರ ವಿಜಯೇಂದ್ರ ಎಲ್ಲವನ್ನು ನುಚ್ಚುನೂರು ಮಾಡಿದರು. ನಾವೇನಾದರೂ ಸಿಎಂ ಭೇಟಿಗೆ‌ ಹೋದರೆ ವಿಜಯೇಂದ್ರನ ಭೇಟಿಯಾಗಿ ಎನ್ನುತ್ತಿದ್ದರು. ನಾನು ವಿಜಯೇಂದ್ರನ ಮುಂದೆ ನಿಲ್ಲಬೇಕೆ?

ಎಚ್​ ವಿಶ್ವನಾಥ್​

ಎಚ್​ ವಿಶ್ವನಾಥ್​

  • Share this:
ಬೆಂಗಳೂರು: ಸಚಿವ ಸ್ಥಾನ ವಂಚಿತರಾಗಿ ನಿರ್ಗಮಿತ ಸಿಎಂ ಬಿ.ಎಸ್​.ಯಡಿಯೂರಪ್ಪ ವಿರುದ್ಧ ಸತತವಾಗಿ ಹರಿಹಾಯುತ್ತಿದ್ದ ಬಿಜೆಪಿ ಎಂಎಲ್​ಸಿ ಎಚ್​.ವಿಶ್ವನಾಥ್​ ಇಂದೂ ತಮ್ಮ ವಾಗ್ಝರಿ ಮುಂದುವರೆಸಿದ್ದಾರೆ. ಯಡಿಯೂರಪ್ಪ ಸಿಎಂ ಸ್ಥಾನ ಕಳೆದುಕೊಳ್ಳಲು ಕಾರಣವಾಗಿದ್ದ ಏನು ಎಂದು ಹೇಳುವ ಮೂಲಕ ಬಿ.ವೈ.ವಿಜಯೇಂದ್ರ ವಿರುದ್ಧ ನೇರ ಆರೋಪ ಮಾಡಿದ್ದಾರೆ. ತಂದೆಯ ಇಂದಿನ‌‌ ಸ್ಥಿತಿಗೆ ವಿಜಯೇಂದ್ರನೇ ಕಾರಣ ಹೊರತು ಹೈಕಮಾಂಡ್ ಕಾರಣವಲ್ಲ, ಬಿಜೆಪಿ ಪಕ್ಷದವರಲ್ಲ, ಲಿಂಗಾಯತರಲ್ಲ. ಮಗನ‌ ದುರಹಂಕಾರವೇ ಇದಕ್ಕೆ ಕಾರಣ ಎಂದು ದೂರಿದ್ದಾರೆ.

ನಾನು ಬಿಜೆಪಿಯಲ್ಲೇ ಇದ್ದವನು, ಯಡಿಯೂರಪ್ಪ ಸರ್ಕಾರ ತರಲು ನಾನು ಕೂಡ ಕಾರಣೀಭೂತ. ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತದ ವಿರುದ್ಧ ದಂಗೆ ಎದ್ದೆವು. ಮೈತ್ರಿ ಸರ್ಕಾರದಲ್ಲಿ 17 ‌ಜನ‌ ಬೇಸತ್ತಿದ್ದೆವು, ಆದರಿಂದ ಪಕ್ಷ ತೊರೆದು ಬಿಜೆಪಿಗೆ ಬಂದೆವು. ಇವರು ಚೆನ್ನಾಗಿ ಮಾಡಬಹುದು ಎಂದು ಭಾವಿಸಿದ್ದೆವು. ಯಡಿಯೂರಪ್ಪ ಮೇಲೆ ವಿಶ್ವಾಸ ಇಟ್ಟಿದ್ದೆವು. ರಾಜ್ಯದ ನಿರೀಕ್ಷೆ ಅರ್ಥೈಸುತ್ತೆ ಎಂದುಕೊಂಡಿದ್ದೆವು, ಹೀಗಾಗಿ ನಾವೆಲ್ಲ ಯಡಿಯೂರಪ್ಪಗೆ ಅವಕಾಶ ಕೊಟ್ಟೆವು. ಯಡಿಯೂರಪ್ಪ ಬಗ್ಗೆ ಈಗಲೂ ಅಷ್ಟೇ ಗೌರವ ಇದೆ. ಆದರೆ ಯಡಿಯೂರಪ್ಪ ಕುಟುಂಬದ ಹಸ್ತಕ್ಷೇಪವೇ ಎಲ್ಲರಿಗೂ ಮುಳುವಾಯಿತು. ಎಲ್ಲಾ ಇಲಾಖೆಗಳಲ್ಲೂ ಬಿಎಸ್​ವೈ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಸಾಕಾಗಿತ್ತು ಎಂದು ಅಸಮಾಧಾನ ಹೊರ ಹಾಕಿದರು.

ಯಡಿಯೂರಪ್ಪ ಪುತ್ರ ವಿಜಯೇಂದ್ರ ಎಲ್ಲವನ್ನು ನುಚ್ಚುನೂರು ಮಾಡಿದರು. ನಾವೇನಾದರೂ ಸಿಎಂ ಭೇಟಿಗೆ‌ ಹೋದರೆ ವಿಜಯೇಂದ್ರನ ಭೇಟಿಯಾಗಿ ಎನ್ನುತ್ತಿದ್ದರು. ನಾನು ವಿಜಯೇಂದ್ರನ ಮುಂದೆ ನಿಲ್ಲಬೇಕೆ? ನಾನು ದೊಡ್ಡವರ ಜೊತೆ ಕೆಲಸ‌ ಮಾಡಿದವನು, ನಾನು ವಿಜಯೇಂದ್ರ ಮುಂದೆ ನಿಲ್ಲಲು ಸಾಧ್ಯವಿಲ್ಲ. ಯಾರಿಗೂ ಗೌರವ ಇಲ್ಲದ ಪರಿಸ್ಥಿತಿ ಇತ್ತು. ಮಗನೇ ತಂದೆಗೆ ಖಳನಾಯಕನಾಗಿ ನಿಂತು ಬಿಟ್ಟ ಎಂದು ಆರೋಪಿಸಿದರು.

ಇದನ್ನೂ ಓದಿ: BS Yediyurappa Resigns: ಬಿ.ಎಸ್.ಯಡಿಯೂರಪ್ಪರ ರಾಜೀನಾಮೆ ನೀಡಿದ್ದರ ಹಿಂದಿನ 5 ಕಾರಣಗಳು ಇಲ್ಲಿವೆ..!

ಯಡಿಯೂರಪ್ಪಗೆ ವಿರೋಧ ಪಕ್ಷಗಳ ಮೇಲೆ ಪ್ರೀತಿ ಜಾಸ್ತಿಯಾಯ್ತು. ನಾವು ಯಾರನ್ನು ಒದ್ದು ಬಂದಿದ್ದೆವು, ಇವರು ಅವರನ್ನೇ ತಬ್ಬಿಕೊಂಡು ಕೂತುಬಿಟ್ಟರು. ಹ್ಯಾಮ್ಲೆಟ್ ಕತೆಯನ್ನು ನಾನು ಅದಕ್ಕೆ ಹೇಳಿದ್ದೆ. ಹ್ಯಾಮ್ಲೆಟ್ ಕತೆ ನಮಗೂ ಆಯ್ತು, ಪಕ್ಷದಲ್ಲೇ ಒದೆಯುವ ಕೆಲಸ ಆಯ್ತು. ವಿಜಯೇಂದ್ರ ಅಸಂವಿಧಾನಿಕ ವ್ಯಕ್ತಿಯಾದರೂ ಆಡಳಿತ ನಡೆಸಿದ. ಅವನ ಬಳಿಯೇ ಎಲ್ಲ ಫೈಲ್ ಬರುತ್ತಿತ್ತು. ಈ ಬಗ್ಗೆ ನಾನು ಬಹಿರಂಗವಾಗಿಯೇ ಧ್ವನಿ ಎತ್ತಿದ್ದೆ ಎಂದರು. ಎಲ್ಲಾ ಕಹಿ ಅನುಭವಗಳ ಬಗ್ಗೆ ಬಾಂಬೆ ಡೇಸ್ ಪುಸ್ತಕ ಬರೆಯುತ್ತಿದ್ದೇನೆ ಎಂದೂ ಇದೇ ವೇಳೆ ತಿಳಿಸಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: