Drugs Case: ಬೇಕಂತಲೇ ಅರೆಸ್ಟ್ ಆಗಿದ್ದ ಡ್ರಗ್ ಪೆಡ್ಲರ್ ಥಾಮಸ್ ಕಲು; ಸೆಲಬ್ರಿಟಿ ಸೋನಿಯಾ ಮನೆಯಲ್ಲಿ ಗಾಂಜಾ ಪತ್ತೆ

ನೈಜೀರಿಯನ್ ಡ್ರಗ್ ಪೆಡ್ಲರ್ ಥಾಮಸ್ ಕಲು ಬಾಯಿಬಿಟ್ಟ ಮಾಹಿತಿ ಮೇರೆಗೆ ಹಾಗೂ ವಿವಿಧ ಸಾಕ್ಷ್ಯಾಧಾರದ ಮೇಲೆ ಪೊಲೀಸರು ಬೆಂಗಳೂರಿನಲ್ಲಿ ಕೆಲ ಸೆಲಬ್ರಿಟಿಗಳ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಉದ್ಯಮಿ ಭರತ್ನನ್ನು ವಶಕ್ಕೆ ಪಡೆದಿದ್ದಾರೆ.

ಡ್ರಗ್ ಪೆಡ್ಲರ್ ಥಾಮಸ್ ಮತ್ತು ಸೆಲಬ್ರಿಟಿ ಸೋನಿಯಾ ಅಗರ್ವಾಲ್

ಡ್ರಗ್ ಪೆಡ್ಲರ್ ಥಾಮಸ್ ಮತ್ತು ಸೆಲಬ್ರಿಟಿ ಸೋನಿಯಾ ಅಗರ್ವಾಲ್

 • Share this:
  ಬೆಂಗಳೂರು, ಆ. 30: ರಾಗಿಣಿ, ಸಂಜನಾ ಮೊದಲಾದವರಾಯ್ತು, ಈಗ ಇನ್ನಷ್ಟು ಸೆಲಬ್ರಿಟಿಗಳ ಹೆಸರು ಡ್ರಗ್ಸ್ ಪ್ರಕರಣದಲ್ಲಿ ತಳುಕುಹಾಕಿಕೊಳ್ಳುತ್ತಿದೆ. ಗೋವಿಂದಪುರ ಡ್ರಗ್ಸ್ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಡ್ರಗ್ ಪೆಡ್ಲರ್ ಥಾಮಸ್ ಕುಲು ಜೊತೆ ಸಂಪರ್ಕ ಇದ್ದ ವಿವಿಧ ಸೆಲಬ್ರಿಟಿಗಳು, ಉದ್ಯಮಿಗಳ ಮನೆಗಳ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ. ರಾಜಾಜಿನಗರ, ಪದ್ಮನಾಭನಗರ ಮತ್ತು ಬೆನ್ಸನ್ ಟೌನ್​ನಲ್ಲಿರುವ ಡಿಜೆ ವಚನ್ ಚಿನ್ನಪ್ಪ, ಉದ್ಯಮಿ ಭರತ್, ಸೆಲಬ್ರಿಟಿ ಸೋನಿಯಾ ಅಗರವಾಲ್ ಅವರ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಕೈದಿಯಾಗಿರುವ ಥಾಮಸ್ ಕಲು ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ಈ ರೇಡ್​ಗಳನ್ನ ಮಾಡಿರುವುದು ತಿಳಿದುಬಂದಿದೆ. ಬನಶಂಕರಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಭರತ್ ಅವರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಠಾಣೆಗೆ ಕರೆದೊಯ್ದಿದ್ದಾರೆ. ಆರ್ಗ್ಯಾನಿಕ್ ಉತ್ಪನ್ನಗಳ ಉದ್ಯಮ ಹಾಗೂ ಕಾಸ್ಮೆಟಿಕ್ ವಸ್ತುಗಳ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಸೋನಿಯಾ ಅಗರವಾಲ್ ಅವರ ಮನೆಯಲ್ಲಿ 40 ಗ್ರಾಮ್ ಗಾಂಜಾ ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ಧಾರೆ.

  ಹೆಚ್.ಆರ್.ಬಿ.ಆರ್ ಲೇಔಟ್​ನಲ್ಲಿ ಬಾಡಿಗೆ ಮನೆಯಲ್ಲಿದ್ದ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಥಾಮಸ್ ಕಲು ಅವರನ್ನ ಇದೇ ಆಗಸ್ಟ್ 12ರಂದು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದರು. ಈ ವೇಳೆ, 1.50 ಲಕ್ಷ ರೂ ಮೌಲ್ಯದ 403 ಎಕ್ಸ್​ಟೆಸಿ ಪಿಲ್ಸ್​ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದರು. ಈತ ಈ ಎಕ್ಸ್​ಟೆಸಿ ಮಾತ್ರೆಗಳನ್ನ ಕಾಲೇಜು ವಿದ್ಯಾರ್ಥಿಗಳು ಹಾಗೂ ಟೆಕ್ಕಿಗಳಿಗೆ ಕೊಡುತ್ತಿದ್ದ. 350 ರೂಪಾಯಿಗೆ ಎಕ್ಸ್​ಟೆಸಿಯನ್ನ ಖರೀದಿಸಿ 3 ಸಾವಿರ ರೂಪಾಯಿಗೆ ಅದನ್ನ ಮಾರುತ್ತಿದ್ದ. ಸೆಲಬ್ರಿಟಿಗಳಿಗೆ ಅತಿ ದುಬಾರಿಯ ಕೊಕೇನ್ ಸಿಂಥೆಟಿಕ್ ಡ್ರಗ್ಸ್ ಕೊಡುತ್ತಿದ್ದ. ಒಂದು ಗ್ರಾಮ್ ಕೊಕೇನ್ ಅನ್ನು 15 ಸಾವಿರ ರೂಗೆ ಮಾರಾಟ ಮಾಡುತ್ತಿದ್ದನೆನ್ನಲಾಗಿದೆ.

  ಇದನ್ನೂ ಓದಿ: CP Yogeshwar- ಈಗಲ್ಲ, ಮುಂದೆ ನಾನು ಮಾತನಾಡುತ್ತೇನೆ: ಸಿ.ಪಿ. ಯೋಗೇಶ್ವರ್

  ಬೇಕಂತಲೇ ಅರೆಸ್ಟ್ ಆಗಿದ್ದ ಕಲು:

  ಕಳೆದ ವರ್ಷ ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಬೆಳಕಿಗೆ ಬರುತ್ತಲೇ ಥಾಮಸ್ ಕಲು ಜಾಗೃತನಾಗಿದ್ದ. ತಾನು ಹೀಗೆ ಮುಂದುವರಿದರೆ ಸಿಸಿಬಿ ಪೊಲೀಸರ ಹದ್ದಿನ ಕಣ್ಣು ಬೀಳಬಹುದು ಎಂದು ಎಣಿಕೆ ಮಾಇಡದ ಈತ ಕಳೆದ ವರ್ಷ ಬೇಕಂತಲೇ ಅರೆಸ್ಟ್ ಆಗಲು ಪ್ಲಾನ್ ಮಾಡಿದ್ದ. ಡ್ರಗ್ಸ್ ಸೇವನೆ ಮಾಡಿ, ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸುತ್ತಾ ಕೆಆರ್ ಪುರಂ ಪೊಲೀಸರ ಮುಂದೆ ಗಲಾಟೆ ಮಾಡಿದ್ದ. ಡ್ರಗ್ ಕನ್ಸೂಮ್, ಟ್ರಾಫಿಕ್ ರೂಲ್ಸ್ ವಯಲೇಶನ್ ಹಾಗೂ ಎನ್​ಡಿಎಂಎ ಕಾಯ್ದೆ ಅಡಿ ಪೊಲೀಸರು ಈತನನ್ನು ಬಂಧಿಸಿದ್ದರು. ಈತ ಎಣಿಕೆ ಮಾಡಿದಂತೆ ಸಿಸಿಬಿ ಪೊಲೀಸರು ಥಾಮಸ್ ಕಲು ಕಡೆ ಗಮನ ಹರಿಸಲಿಲ್ಲ.

  ಆದರೆ, ಇತ್ತೀಚೆಗೆ ಥಾಮಸ್ ಕಲು ಜೊತೆ ಹಲವು ಸೆಲಬ್ರಿಟಿಗಳ ಡ್ರಗ್ಸ್ ನಂಟು ಇರುವ ವಿಚಾರ ಪೊಲೀಸರಿಗೆ ಗೊತ್ತಾಗಿತ್ತು. ಹೀಗಾಗಿ, ಈತನ ಮನೆ ಮೇಲೆ ರೇಡ್ ಮಾಡಿದಾಗ ಮಾದಕವಸ್ತುಗಳು ಸಿಕ್ಕಿದ್ದವು. ಈತನ ಮೊಬೈಲ್ ಪರಿಶೀಲಿಸಿದಾಗ ಸೆಲಬ್ರಿಟಿಗಳ ಸಂಪರ್ಕ ಇರುವುದು ದೃಢಪಟ್ಟಿತ್ತು. ಆ ಆಧಾರದ ಮೇಲೆ ವಚನ್ ಚಿನ್ನಪ್ಪ, ಭರತ್ ಮತ್ತು ಸೋನಿಯಾ ಅಗರ್ವಾಲ್ ಅವರ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಸೋನಿಯಾ ಅಗರ್ವಾಲ್ ಮನೆಯಲ್ಲಿ ಇರಲಿಲ್ಲವಾದ್ದರಿಂದ ಅವರ ತಂದೆಯ ಉಪಸ್ಥಿತಿಯಲ್ಲಿ ಮನೆಯ ಬಾಗಿಲು ತೆರೆದು ಶೋಧಿಸಲಾಯಿತು. ಈ ವೇಳೆ 40 ಗ್ರಾಮ್ ಗಾಂಜಾ ಸಿಕ್ಕಿದೆ. ಸೋನಿಯಾ ಅವರನ್ನ ವಶಕ್ಕೆ ಪಡೆಯಲು ಪೊಲೀಸರು ಪ್ರಯತ್ನಿಸಿದ್ದಾರೆ.

  ಬನಶಂಕರಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಭರತ್ ಜೊತೆ ಥಾಮಸ್ ಕಲು ನೇರ ಸಂಪರ್ಕ ಇತ್ತು. ಭರತ್ ತನ್ನದೇ ಫ್ಲಾಟ್​ನಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ವಿಚಾರ ಸೇರಿದಂತೆ ಹಲವು ಮಾಹಿತಿಯನ್ನು ಕಳೆದ 15 ದಿನಗಳಿಂದ ಪೊಲೀಸರು ಕಲೆಹಾಕಿದ್ದರು. ಇಂದು ಭರತ್ ಮನೆಗೆ ದಾಳಿ ಮಾಡಿ ಶೋಧ ನಡೆಸಿದರು. ಬಳಿಕ ಅವರನ್ನ ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ.

  ವರದಿ: ಗಂಗಾಧರ ವಾಗಟ / ಮಂಜುನಾಥ್ ಚಂದ್ರಪ್ಪ
  Published by:Vijayasarthy SN
  First published: