Bengaluru: ಸತ್ತರೂ ನೆಮ್ಮದಿ ಇಲ್ಲ ಸ್ವಾಮಿ! 4 ದಿನವಾದ್ರೂ ಮುಗಿಯದ ಶವ ಸಂಸ್ಕಾರ ಕಿರಿಕ್

ಸತ್ತವರೇನೋ ಸತ್ತರು. ಆದರೆ ಬದುಕಿದ್ದವರಿಗೆ ಈಗ ನೆಮ್ಮದಿ ಇಲ್ಲದಂತಾಗಿದೆ. ವೃದ್ಧೆ ಸತ್ತು ನಾಲ್ಕು ದಿನಗಳೇ ಕಳೆದು ಹೋಗಿವೆ. ಆದ್ರೆ ಅವರ ಶವ ಹೂತಿರುವ ಜಾಗದ ವಿವಾದ ಮಾತ್ರ ಬಗೆ ಹರಿದಿಲ್ಲ. ಶವ ಸ್ಥಳಾಂತರಿಸುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದಾರೆ.

ವೃದ್ಧೆಯ ಶವವನ್ನು ಹೂತಿದ್ದ ಸ್ಥಳ

ವೃದ್ಧೆಯ ಶವವನ್ನು ಹೂತಿದ್ದ ಸ್ಥಳ

  • Share this:
ಬೆಂಗಳೂರು: ‘ಸತ್ತರೂ ನೆಮ್ಮದಿಯಿಲ್ಲ’ ಅಂತಾರಲ್ಲ, ಇದಕ್ಕೇ ಇರಬೇಕು! 80 ವರ್ಷದ ಆ ವೃದ್ಧೆ (Old Lady) ಸತ್ತು ನಾಲ್ಕು ದಿನಗಳೇ ಕಳೆದು ಹೋಗಿದೆ. ಆಕೆಯನ್ನು ಮಣ್ಣು ಮಾಡಿ, ಶವಕ್ಕೆ ಮುಕ್ತಿ ಕೊಡಿಸಿದ್ದೂ ಆಗಿದೆ. ಆದರೆ ಆಕೆ ಶವ ಸಂಸ್ಕಾರ (Funeral) ಮಾಡಿದ ಜಾಗದ ವಿವಾದ (Land Dispute) ಮಾತ್ರ ಇನ್ನೂ ಮುಗಿತಾ ಇಲ್ಲ. ನಿನ್ನೆ ಸ್ಥಳೀಯರೆಲ್ಲ ವಿರೋಧ ವ್ಯಕ್ತಪಡಿಸಿದ್ದರು. ಹೂತಿರೋ ಶವವನ್ನು ತೆಗೆದು ಬೇರೆಡೆ ಸಂಸ್ಕಾರ ಮಾಡಿ ಅಂತ ಪಟ್ಟು ಹಿಡಿದಿದ್ದರು. ಇದೇ ಕಾರಣಕ್ಕೆ ಮೃತ ವೃದ್ಧೆಯ ಕುಟುಂಬಸ್ಥರು ಹಾಗೂ ಸ್ಥಳೀಯ ನಿವಾಸಿಗಳ ನಡುವೆ ಜಟಾಪಟಿ (Clash) ನಡೆದಿತ್ತು. ಕಲ್ಲು ತೂರಾಟಕ್ಕೂ ಯತ್ನ ನಡೆದಿತ್ತು. ಪೊಲೀಸರ ಮಧ್ಯ ಪ್ರವೇಶದಿಂದ ನಿನ್ನೆಯೇನೋ ಗಲಾಟೆ ನಿಂತಿತ್ತು. ಆದ್ರೆ ಇಂದು ಪುನಃ ಗಲಾಟೆ ಶುರುವಾಗಿದೆ. 

ಏನಿದು ಮುಗಿಯದ ‘ಹೆಣ’ಗಾಟ?

ಬೆಂಗಳೂರಿನ ಪುಟ್ಟೇನಹಳ್ಳಿ ಬಳಿ ಇಂಥದ್ದೊಂದು ಘಟನೆ ನಡೆದಿದೆ. ಬೊಮ್ಮನಹಳ್ಳಿ ವಲಯದ, ಪುಟ್ಟೇನಹಳ್ಳಿ ವಾರ್ಡ್ನ ಪಾಂಡುರಂಗ ನಗರದಲ್ಲಿ 80 ವರ್ಷದ ವೃದ್ಧ ಮಹಿಳೆಯೊಬ್ಬರು ಕಳೆದ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದರು. ಆದರೆ ಕುಟುಂಬಸ್ಥರು ವೃದ್ಧೆಯ ಶವವನ್ನು ಚಿತಾಗಾರಕ್ಕೆ ತೆಗೆದುಕೊಂಡು ಹೋಗಲಿಲ್ಲ. ಬದಲಾಗಿ ತಮ್ಮದೇ ಮನೆಯ ಹಿಂಭಾಗದಲ್ಲಿ ಶವ ಸಂಸ್ಕಾರ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

 ಮನೆ ಬಳಿ ಶವ ಹೂತಿದ್ದಕ್ಕೆ ಸ್ಥಳೀಯರಿಂದ ವಿರೋಧ

ವೃದ್ಧೆಯ ಮನೆ ಬಳಿಯೇ ಶವವನ್ನು ಹೂತಿದ್ದಕ್ಕೆ ಅಕ್ಕ ಪಕ್ಕದ ಮನೆ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದರು. ಶವ ಸಂಸ್ಕಾರ ಮಾಡಿರುವ ಜಾಗದ ಪಕ್ಕದಲ್ಲಿಯೇ ಮನೆಗಳು, ಅಪಾರ್ಟ್‌ಮೆಂಟ್ ಇದೆ. ಹೀಗಾಗಿ ಇಲ್ಲಿ ಶವ ಸಂಸ್ಕಾರ ಮಾಡಿರುವುದು ಸರಿಯಲ್ಲ ಅಂತ ನಿನ್ನೆ ತಕರಾರು ತೆಗೆದಿದ್ದರು. ಶವವನ್ನು ಚಿತಾಗಾರಕ್ಕೆ ಕೊಂಡೊಯ್ಯುವಂತೆ ಪಟ್ಟು ಹಿಡಿದಿದ್ದರು.

ಇದನ್ನೂ ಓದಿ: Bengaluru: 'ಎಣ್ಣೆ' ಏಟಲ್ಲಿ ಕಿರಿಕ್, ಹೆಂಡತಿ-ಮಗುವಿನ ಮುಖವನ್ನೇ ಸುಟ್ಟ ಪಾಪಿ!

ಸ್ಥಳೀಯರ ಜೊತೆ ಮೃತಳ ಕುಟುಂಬಸ್ಥರ ಕಿರಿಕ್

ಇದಕ್ಕೆ ಮೃತಳ ಕುಟುಂಬಸ್ಥರೂ ಸಹ ತಕರಾರು ಮಾಡಿದ್ದರು. ಸ್ಥಳೀಯರ ಜೊತೆಯೇ ವಾಗ್ವಾದ ನಡೆಸಿದ್ದಾರೆ. ಗುಂಡಿಯಲ್ಲಿ ಶವಕ್ಕೆ ಪೂಜೆ ಮಾಡಿ, ಮಣ್ಣು ಮುಚ್ಚೋಕೆ  ಸಿದ್ಧತೆ ನಡೆಯುತ್ತಿದ್ದಂತೆ ಶವ ಹೊರ ತೆಗೆಯಿರಿ ಎಂದು ಅಕ್ಕಪಕ್ಕದ ಜನರು, ಅಪಾರ್ಟ್‌ಮೆಂಟ್‌ ನಿವಾಸಿಗಳು ಬಿಗಿಪಟ್ಟು ಹಿಡಿದಿದ್ದರು. ಈ ವೇಳೆ ಮೃತ ವೃದ್ಧೆಯ ಕುಟುಂಬಸ್ಥರು ಸ್ಥಳೀಯರಿಗೆ ಕಲ್ಲಿನಿಂದಲೂ ಹೊಡೆದಿದ್ದರು ಎನ್ನಲಾಗುತ್ತಿದೆ.

ಬಿಬಿಎಂಪಿ ಅಧಿಕಾರಿಗಳು, ಪೊಲೀಸರ ಮಧ್ಯ ಪ್ರವೇಶ

ಶವ ಹೂಳುವ ಕುರಿತಂತೆ ಉಂಟಾದ ಘರ್ಷಣೆ ವಿಚಾರ ಸ್ಥಳೀಯ ಬಿಬಿಎಂಪಿ ಕಚೇರಿಗೆ ಮುಟ್ಟಿದೆ. ಕೂಡಲೇ ಬಿಬಿಎಂಪಿ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಬಂದಿದ್ದಾರೆ. ಇದು ಜನವಸತಿ ಪ್ರದೇಶ. ಹೀಗಾಗಿ ಇಲ್ಲಿ ಶವಸಂಸ್ಕಾರ ಮಾಡಬಾರದು ಅಂತ ತಿಳಿ ಹೇಳಿದ್ದಾರೆ. ಹೆಚ್ಚಿನ ಘರ್ಷಣೆ ನಡೆಯದಂತೆ ಪೊಲೀಸರು ಸಹ ಧಾವಿಸಿದ್ದಾರೆ.

ಇಂದು ಮತ್ತಷ್ಟು ಹೆಚ್ಚಾಯ್ತು ಜಟಾಪಟಿ

ನಿನ್ನೆ ಇಷ್ಟೆಲ್ಲಾ ಗಲಾಟೆ, ಮಧ್ಯಸ್ಥಿಕೆ ಆಗಿದ್ದರೂ ಶವ ಸಂಸ್ಕಾರದ ಸ್ಥಳದ ವಿವಾದ ಮಾತ್ರ ಬಗೆಹರಿದಿಲ್ಲ. ಹೂತ ಜಾಗದಿಂದ ಶವ ಸ್ಥಳಾಂತರಿಸಿ, ಬೇರೆಡೆ ಸಂಸ್ಕಾರ ಮಾಡುವಂತೆ ಸ್ಥಳೀಯರು ಪಟ್ಟು ಮುಂದುವರೆಸಿದ್ದಾರೆ. ಆದರೆ ಇದಕ್ಕೆ ಮೃತಳ ಕುಟುಂಬಸ್ಥರು ಸುತಾರಾಂ ಒಪ್ಪುತ್ತಿಲ್ಲ.

ಇದನ್ನೂ ಓದಿ: ಬೇಕಾಬಿಟ್ಟಿ ರಸ್ತೆ ಅಗೆದರೆ FIR ಹಾಕಿ: ನಗರ ಪೊಲೀಸ್ ಆಯುಕ್ತರಿಗೆ BBMP ಪತ್ರ

ಮೃತಳ ಕುಟುಂಬಸ್ಥರು ಪ್ರಭಾವಿಗಳಾ?

ಮೃತಳು ವಾಸಿಸುತ್ತಿದ್ದ ರೆಡ್ಡಿ ಲೇಔಟ್ ಗೋವಿಂದ ರೆಡ್ಡಿ ಎಂಬುವರಿಗೆ ಸೇರಿದ್ದು. ವೃದ್ಧೆಯ ಪತಿಯಾಗಿದ್ದ ಇವರು ಸಾಕಷ್ಟು ಪ್ರಭಾವಿಯಾಗಿದ್ದರು. ಕಳೆದ ಏಳೆಂಟು ವರ್ಷಗಳ ಹಿಂದೆ ಗೋವಿಂದ ರೆಡ್ಡಿ ಸಾವನ್ನಪ್ಪಿದ್ದರು. ಅವರ ಸಮಾಧಿಯನ್ನೂ ಸಹ ಮನೆ ಬಳಿಯೇ ನಿರ್ಮಿಸಲಾಗಿತ್ತು. ಇದೀಗ ಅವರ ಪತ್ನಿ ಸಮಾಧಿಯನ್ನೂ ಅವರ ಸಮಾಧಿ ಪಕ್ಕದಲ್ಲೇ ನಿರ್ಮಿಸಬೇಕು ಎನ್ನುವುದು ಮನೆಯವರ ಇಚ್ಛೆ. ಹೀಗಾಗಿ ಮನೆ ಬಳಿಯೇ ಶವ ಹೂತು, ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಶವ ಸ್ಥಳಾಂತರಿಸಲು ಸ್ಥಳಿಯರ ಬಿಗಿಪಟ್ಟು

ಇಷ್ಟೆಲ್ಲಾ ಘರ್ಷಣೆಗಳಾದರೂ ಮೃತಳ ಕುಟುಂಬಸ್ಥರು ಕ್ಯಾರೇ ಅಂತಿಲ್ಲ. ಇದರಿಂದ ರೊಚ್ಚಿಗೆದ್ದಿರುವ ಸ್ಥಳೀಯರು, ಶವ ಸ್ಥಳಾಂತರಕ್ಕೆ ಪಟ್ಟು ಹಿಡಿದಿದ್ದಾರೆ. ಬಿಬಿಎಂಪಿ ನಿಗದಿಪಡಿಸಿದ ಜಾಗದಲ್ಲಿ ಶವ ಸಂಸ್ಕಾರ ಮಾಡುವಂತೆ ಅಕ್ಕಪಕ್ಕದವರ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಮತ್ತೆ ಸಂಘರ್ಷ ಮುಂದುವರೆದಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಕುಟುಂಬಸ್ಥರ ಮನವೋಲಿಸಿ ಶವವನ್ನು ಸ್ಥಳಾಂತರಿಸುವ ಸಾಧ್ಯತೆ ಇದೆ. ಇದಕ್ಕೂ ಮೃತಳ ಕುಟುಂಬಸ್ಥರು ಒಪ್ಪದೇ ಇದ್ದರೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸ್ಥಳೀಯರು ತೀರ್ಮಾನಿಸಿದ್ದಾರೆ.
Published by:Annappa Achari
First published: